ಸೋಮವಾರ, ಆಗಸ್ಟ್ 19, 2019
28 °C
ಹಾಸನ ಜಿಲ್ಲೆಯ ಎಡೆಬಿಡದ ಮಳೆ: ಇಲ್ಲಿಯವರೆಗೆ ರೂ. 200 ಕೋಟಿ ಹಾನಿ

ತಕ್ಷಣ ಹಣ ಬಿಡುಗಡೆಗೆ ರೇವಣ್ಣ ಆಗ್ರಹ

Published:
Updated:

ಸಕಲೇಶಪುರ: ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾಗೂ ಆಸ್ತಿಪಾಸ್ತಿ ನಷ್ಟ ಭರಿಸಲು ಸರ್ಕಾರ ಕೂಡಲೆ 200 ಕೋಟಿ ರೂಪಾಯಿ ಬಿಡುಗಡೆ ಮಾಡ ಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದರು.ಕಳೆದ ಗುರುವಾರ ಹಾಗೂ ಶುಕ್ರವಾರ ತಾಲೂಕಿನ ಹಲವೆಡೆ ಸುರಿದ ಮಹಾಮಳೆ, ಬಿರುಗಾಳಿ ಹಾಗೂ  ಹೇಮಾವತಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.ರಸ್ತೆ ದುರಸ್ತಿ ಹಾಗೂ ಬೆಳೆ ನಷ್ಠ ಪರಿಹಾರಕ್ಕೆ ಸರ್ಕಾರ ತಕ್ಷಣ ಅನುಧಾನ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ, ನಷ್ಟದ ಬಗ್ಗೆ ಪರಿಶೀಲನೆಗೆ ತಂಡ ರಚಿಸಬೇಕು ಎಂದರು,ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡುವ ವಿಷಯದಲ್ಲಿ ಜಿಲ್ಲೆಗೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದ ಅವರು, ಕೊಡಗು ಜಿಲ್ಲೆಗೆ ಬಜೆಟ್‌ನಲ್ಲಿ ಮುಂಚಿತವಾಗಿಯೇ 50 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಉಂಟಾಗಿರುವ ನಷ್ಟ ಭರಿಸಲು ಈವರೆಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಈ ತಾರತಮ್ಯ ಧೋರಣೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶೋಭೆಯಲ್ಲ ಎಂದರು.ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ತಾಲ್ಲೂಕಿ  ನಲ್ಲಿ ಅತಿವೃಷ್ಟಿಯಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆ, ಕಟ್ಟಡಗಳು, ರಸ್ತೆಗಳು ಹಾನಿಯಾಗಿವೆ. ತಾಲ್ಲೂಕಿನಲ್ಲಿ ಸುಮಾರು ಒಂದೂವರೆ ಸಾವಿರ ಕಿ.ಮೀ. ಉದ್ದದ ರಸ್ತೆಗಳು ದುರಸ್ತಿ ಮಾಡುವುದಕ್ಕೆ ಸಾಧ್ಯವಾಗಷ್ಟು ಹಾಳಾಗಿವೆ. ಅವುಗಳನ್ನು ಏನಿದ್ದರೂ ಹೊಸದಾಗಿಯೇ ನಿರ್ಮಾಣ ಮಾಡಬೇಕಾಗಿದೆ ಎಂದರು.ಬೆಳಗೋಡು ಹೋಬಳಿ ವ್ಯಾಪ್ತಿಯ ಈಶ್ವರ ಹಳ್ಳಿ, ಕಸಬಾ ಹೋಬಳಿಯ ಕೋಗರವಳ್ಳಿ, ಹಾಲೇಬೇಲೂರು ಸೇತುವೆ, ನಡಹಳ್ಳಿ, ಎತ್ತಿನಹಳ್ಳ, ಗಾಣದಹೊಳೆ, ಹೆನ್ಲಿ ಸೇತುವೆ, ಜಂಬರಡಿ ಹಾಗೂ ಸುತ್ತಮುತ್ತಲ ಹಲವು ಗ್ರಾಮಗಳಿಗೆ ಭೇಟಿ ನೀಡಿ ಆಸ್ತಿಪಾಸ್ತಿ ನಷ್ಠ ಅನುಭವಿಸಿದವರೊಂದಿಗೆ ಮಾತುಕತೆ ನಡೆಸಿದರು. ನಂತರ ಪಟ್ಟಣದ ಅಜಾದ್ ರಸ್ತೆ, ಕುಶಾಲನಗರ ಬಡಾವಣೆಗಳಿಗೆ ಭೇಟಿ ನೀಡಿದರು.ಮಾಜಿ ಸಚಿವ ರೇವಣ್ಣನವರೊಂದಿಗೆ ಶಾಸಕ ಎಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡದಿಣ್ಣೆ ಸ್ವಾಮಿ, ಯುವ ಜೆಡಿ(ಎಸ್) ಅಧ್ಯಕ್ಷ ಸ.ಬ.ಭಾಸ್ಕರ್, ತಾ.ಪಂ. ಮಾಜಿ ಅಧ್ಯಕ್ಷ ಹೆಗ್ಗೋವೆ ಗೋಪಾಲಸ್ವಾಮಿ, ಎಪಿಎಂಸಿ ಅಧ್ಯಕ್ಷ ಸುಪ್ರದೀಪ್ತ ಯಜಮಾನ್, ಪಕ್ಷದ ಮುಖಂಡ ಸಚಿನ್‌ಪ್ರಸಾದ್, ಅಲ್ಪ ಸಂಖ್ಯಾತರ ಮುಖಂಡ ಯಾದ್‌ಗಾರ್ ಇಬ್ರಾಹಿಂ, ಇಬ್ರಾಹಿಂ ಇದ್ದರು.

Post Comments (+)