ತಡವಾಗಿ ಬೆಳಕಿಗೆ ಬಂದ ಸತ್ಯ

7

ತಡವಾಗಿ ಬೆಳಕಿಗೆ ಬಂದ ಸತ್ಯ

Published:
Updated:

ಗುಜರಾತ್‌ನಲ್ಲಿ ಸರಣಿ ಕೋಮು ಗಲಭೆಗಳಿಗೆ ಕಾರಣವಾದ ಗೋಧ್ರಾ ನರಮೇಧದ ಬಗೆಗೆ ಒಂಬತ್ತು ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. ಸಬರಮತಿ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿ ಅದರಲ್ಲಿದ್ದ 59 ಕರಸೇವಕರನ್ನು ದಹನ ಮಾಡಿದ ಭೀಕರ ದುರಂತದ ಬಗೆಗೆ ತೀರ್ಪು ನೀಡಲು ಹಲವಾರು ಅಡೆತಡೆಗಳು ಎದುರಾಗಿದ್ದವು. ಕೊನೆಗೂ ಸುಪ್ರೀಂಕೋರ್ಟ್ ತೋರಿದ ಹಸಿರು ನಿಶಾನೆಯ ನಂತರ ಅಡಿಷನಲ್ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಈ ದುರಂತದ ಹಿಂದೆ ‘ಸಂಚು’ ನಡೆದಿತ್ತು ಎನ್ನುವುದನ್ನು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಈ ಘಟನೆ ‘ಬೆಂಕಿ ಆಕಸ್ಮಿಕ’ದಿಂದ ನಡೆದಿದೆ ಎಂದಿದ್ದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಯು.ಸಿ. ಬ್ಯಾನರ್ಜಿ ಅವರ ತೀರ್ಪನ್ನು ತಳ್ಳಿಹಾಕಿದಂತಾಗಿದೆ. ಈ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯು ದೃಢಪಡಿಸಿದ ‘ಅಗ್ನಿ ದುರಂತಕ್ಕೆ ಪೆಟ್ರೋಲ್ ಬಳಕೆ’ ಕಾರಣವಾಗಿತ್ತು ಎನ್ನುವ ವರದಿಯ ಪಾತ್ರವೇ ದೊಡ್ಡದಾಗಿದೆ. ಈ ಹತ್ಯಾಕಾಂಡದ ನಂತರ ಗುಜರಾತ್‌ನ ವಿವಿಧೆಡೆ ನಡೆದ ಕೋಮು ಗಲಭೆಗಳಿಂದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡದ್ದು ಈಗ ಇತಿಹಾಸ.ಈ ಅಮಾನುಷ ಘಟನೆಯಲ್ಲಿ 31 ಮಂದಿಯನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಹೇಳಿ, ಈ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಉಳಿದ 63 ಮಂದಿ ಆರೋಪಿಗಳನ್ನು ಖುಲಾಸೆ ಮಾಡಿದೆ. ನ್ಯಾಯದಾನದಲ್ಲಿ ವಿಳಂಬವಾದರೂ, ಅಂತೂ ಕೊನೆಗೂ ತೀರ್ಪು ಬಂದಿತಲ್ಲ ಎನ್ನುವುದಷ್ಟೇ ತೃಪ್ತಿ. ಈಗಾಗಲೇ ಒಂಬತ್ತು ವರ್ಷ ಜೈಲುವಾಸ ಅನುಭವಿಸಿರುವ ಈ ಅಪರಾಧಿಗಳಿಗೆ ಶುಕ್ರವಾರ ನ್ಯಾಯಾಲಯ ಏನು ಶಿಕ್ಷೆ ನೀಡಲಿದೆ ಎನ್ನುವುದರ ಮೇಲೆ ಅವರ ಅಪರಾಧಕ್ಕೆ ತಕ್ಕ ಪ್ರಾಯಃಶ್ಚಿತ್ತ ಪ್ರಾಪ್ತಿಯಾಗಬೇಕಿದೆ. ಭೀಕರವಾದ ಈ ಸಜೀವ ದಹನ ಕೃತ್ಯ ಅಮಾನವೀಯ ಮತ್ತು ಹೇಯವಾದುದು. ಆದರೆ ಈ ಘಟನೆಯ ನಂತರ ನಡೆದ ಸೇಡಿನ ಸರಣಿ ಕೋಮು ಗಲಭೆಗಳೂ ಇನ್ನೂ ಅಮಾನುಷವಾಗಿ ನಡೆದದ್ದು ಮಾನವೀಯತೆಯನ್ನೇ ನಾಚಿಸುವಂತಿತ್ತು.  ಈ ಘಟನೆಯ ಬಗೆಗೆ ಹೊರಬಿದ್ದ ತೀರ್ಪಿಗೆ ವಿವಿಧ ರಾಜಕೀಯ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೆಲ್ಲ ಆಯಾ ರಾಜಕೀಯ ಪಕ್ಷಗಳ ನಿಲುವಿಗೆ ಸಂಬಂಧಿಸಿದ್ದು. ಆದರೆ ಕೊನೆಗೂ ನ್ಯಾಯಾಲಯ ಘಟನೆ ಹೇಗೆ ಸಂಭವಿಸಿತು ಎಂದು ಅದರ ಹಿಂದಿನ ಸಂಚನ್ನು ಬಯಲಿಗೆ ತಂದಿದೆ. ಈ ಸಂಚು ಮತ್ತು ಘಟನೆಯಲ್ಲಿ ಯಾರು ಭಾಗಿಯಾಗಿದ್ದರು ಎನ್ನುವುದನ್ನು ಪತ್ತೆ ಹಚ್ಚಿ, ಆ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಮಾಡುತ್ತಿರುವುದು ಸ್ವಾಗತಾರ್ಹ. ಗುಜರಾತ್‌ನ ಉಳಿದ ಘಟನೆಗಳ ತೀರ್ಪು ಆದಷ್ಟು ಬೇಗನೆ ಹೊರ ಬೀಳಲಿ. ತಪ್ಪಿತಸ್ಥರು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಲಿ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry