ತಡೆಗೋಡೆ ಕುಸಿತ: ‘ಸಾವಿಗೆ ಇಸ್ಕಾನ್‌ ಹೊಣೆ’

7

ತಡೆಗೋಡೆ ಕುಸಿತ: ‘ಸಾವಿಗೆ ಇಸ್ಕಾನ್‌ ಹೊಣೆ’

Published:
Updated:

ಬೆಂಗಳೂರು: ಇಸ್ಕಾನ್‌ ತಡೆಗೋಡೆ ಕುಸಿದು ಸಂಭವಿಸಿದ ಸಾವು ನೋವುಗಳಿಗೆ ಇಸ್ಕಾನ್‌ ಆಡಳಿತ ಮಂಡಳಿಯೇ ನೇರ ಹೊಣೆ ಹೊರಬೇಕು ಎಂದು ಸಮತಾ ಸೈನಿಕ ದಳ ಮತ್ತು ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ‘ಇಸ್ಕಾನ್‌ ಸಂಸ್ಥೆಯ ಅಧ್ಯಕ್ಷ ಮಧು ಪಂಡಿತ್‌ದಾಸ್‌ ಮತ್ತು ಉಪಾಧ್ಯಕ್ಷ ಚಂಚಲಪತಿದಾಸ್‌ ಅವರನ್ನೇ ಘಟನೆಯ ನೇರ ಆರೋಪಿಗಳನ್ನಾಗಿಸಿ, ಇವರಿಬ್ಬರ ಮೇಲೆ ಪ್ರಕರಣವನ್ನು ದಾಖಲಿಸಬೇಕು. ಸರ್ಕಾರ ಅವರ ವಿರುದ್ಧ ಕಟ್ಟನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.‘ಘಟನೆಯಿಂದಾದ ಅನಾಹುತಕ್ಕೆ ಇಸ್ಕಾನ್‌ ಸಂಸ್ಥೆ ಪರಿಹಾರ ನೀಡದೆ, ಸರ್ಕಾರವೇ ಮರಣಹೊಂದಿದವರ ಕುಟುಂಬಕ್ಕೆ ರೂ 10 ಲಕ್ಷ ಪರಿಹಾರ ನೀಡಬೇಕು. ಗಾಯಾಳುಗಳಿಗೆ ₨ 5 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.‘ಇಸ್ಕಾನ್‌ ಸಂಸ್ಥೆಯು ಕೃಷ್ಣಲೀಲಾ ಥೀಮ್‌ ಪಾರ್ಕ್‌ ಯೋಜನೆಯನ್ನು ರೂಪಿಸುತ್ತಿದೆ. ಇದು ವ್ಯಾಪಾರ ಉದ್ದೇಶದಿಂದ ಕೂಡಿದ ಯೋಜನೆಯಾಗಿದೆ. ಈ ಯೋಜನೆಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.ನ್ಯಾಯಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಇಂದೂಧರ ಹೊನ್ನಾಪುರ ಮಾತನಾಡಿ, ‘ಇಸ್ಕಾನ್‌ ಸಂಸ್ಥೆಯು ಆಧ್ಯಾತ್ಮದ ಹೆಸರಿನಲ್ಲಿ ವ್ಯಾಪಾರವನ್ನು ಮಾಡುತ್ತಿದೆ. ಆಧ್ಯಾತ್ಮವೇ ಸಂಸ್ಥೆಯ ಗುರಿಯಾಗಿದ್ದರೆ, ನೂರಾರು ಎಕರೆ ಜಾಗ ಏಕೆ ಬೇಕು’ ಎಂದು ಪ್ರಶ್ನಿಸಿದರು. ಸಂಸ್ಥೆಯು ನಿರಂತರವಾಗಿ ಭೂಮಿ ಲೂಟಿ ಮಾಡುತ್ತಿದೆ. ಥೀಮ್‌ ಪಾರ್ಕ್‌ ಯೋಜನೆಯನ್ನು ರದ್ದುಗೊಳಿಸಿ, ನಿವೇಶನರಹಿತರಿಗೆ, ಕೊಳೆಗೇರಿ ನಿವಾಸಿಗಳಿಗೆ ಮನೆ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry