ಮಂಗಳವಾರ, ಮೇ 11, 2021
25 °C

ತಡೆಗೋಡೆ ಕುಸಿದು ಕಾರ್ಮಿಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಡೆಗೋಡೆ ಕುಸಿದು ಕಾರ್ಮಿಕರ ಸಾವು

ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಪಕ್ಕದ ನಿವೇಶನದ ತಡೆಗೋಡೆ ಕುಸಿದು ಆಂಧ್ರಪ್ರದೇಶ ಮೂಲದ ಮಹಿಳಾ ಕೂಲಿ ಕಾರ್ಮಿಕರಿಬ್ಬರು ಸಾವನ್ನಪ್ಪಿರುವ ಘಟನೆ ಕೆಂಗೇರಿ ಉಪನಗರ ಸಮೀಪದ ಧರ್ಮ ಸೋಮಶೇಖರ ಲೇಔಟ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಅನಂತಪುರ ಜಿಲ್ಲೆಯ ರಾಜಮ್ಮ (45) ಮತ್ತು ಮಂಗಮ್ಮ (25) ಮೃತಪಟ್ಟವರು. ಅವರಿಬ್ಬರೂ ಸಾಯಿ ವೆಂಕಟೇಶ್ವರ ಡೆವಲಪರ್ಸ್‌ ಸಂಸ್ಥೆಯು ಧರ್ಮ ಸೋಮಶೇಖರ ಲೇಔಟ್‌ನಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಆ ಅಪಾರ್ಟ್‌ಮೆಂಟ್‌ನ ಪಕ್ಕದಲ್ಲೇ ಖಾಲಿ ನಿವೇಶನವಿದ್ದು, ಅದರ ಸುತ್ತ ಸುಮಾರು ಹತ್ತು ಅಡಿ ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆ ತಡೆಗೋಡೆ ಶಿಥಿಲಗೊಂಡಿತ್ತು. ತಡೆಗೋಡೆ ಪಕ್ಕದಲ್ಲೇ ಅಪಾರ್ಟ್‌ಮೆಂಟ್‌ನ ನೆಲ ಮಾಳಿಗೆಯಲ್ಲಿ ಕಾರು ನಿಲುಗಡೆ ಜಾಗದ ನಿರ್ಮಾಣದ ಉದ್ದೇಶಕ್ಕಾಗಿ ಮೂರ‌್ನಾಲ್ಕು ಅಡಿ ಗುಂಡಿ ತೆಗೆಯಲಾಗಿತ್ತು. ಮಳೆ ನೀರಿನಿಂದ ತೇವಗೊಂಡಿದ್ದ ಪಕ್ಕದ ನಿವೇಶನದ ತಡೆಗೋಡೆಯ ಮಣ್ಣು ಕುಸಿದು ಗುಂಡಿಗೆ ಬಿದ್ದಿತ್ತು. ರಾಜಮ್ಮ ಮತ್ತು ಮಂಗಮ್ಮ ಆ ಮಣ್ಣನ್ನು ತೆರವುಗೊಳಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಅವರಿಬ್ಬರೂ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಗುಂಡಿಗೆ ಇಳಿದು ಮಣ್ಣನ್ನು ಹೊರಗೆ ಎತ್ತಿ ಹಾಕುತ್ತಿದ್ದಾಗ ತಡೆಗೋಡೆ ಸಂಪೂರ್ಣ ಕುಸಿದು ಅವರ ಮೇಲೆ ಬಿದ್ದಿದೆ. ತಡೆಗೋಡೆ ಅವಶೇಷಗಳಡಿ ಸಿಲುಕಿದ ಅವರನ್ನು ಇತರೆ ಕೂಲಿ ಕಾರ್ಮಿಕರು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಆ ವೇಳೆಗಾಗಲೇ ತೀವ್ರ ಪೆಟ್ಟಾಗಿ ಅವರು ಅವಶೇಷಗಳಡಿಯೇ ಸಾವನ್ನಪ್ಪಿದ್ದರು ಎಂದು ಕೆಂಗೇರಿ ಪೊಲೀಸರು ತಿಳಿಸಿದ್ದಾರೆ.ಆ ನಂತರ ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸಿ ಸಂಜೆ ವೇಳೆಗೆ ಶವಗಳನ್ನು ಹೊರತೆಗೆಯಲಾಯಿತು. ಮೃತರ ಬೆನ್ನು ಮೂಳೆಗಳು ಮುರಿದಿದ್ದು, ತಲೆ ಒಡೆದು ತೀವ್ರ ರಕ್ತಸ್ರಾವವಾಗಿದೆ. ಘಟನೆ ಸಂಬಂಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಅಪಾರ್ಟ್‌ಮೆಂಟ್‌ನ ಮಾಲೀಕ ಬಾಲಾಜಿ ಮತ್ತು ಗುತ್ತಿಗೆದಾರ ಭಾಸ್ಕರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಮ್ಮ, ಪತಿ ಮಾರಪ್ಪ ಮತ್ತು ಐದು ಮಕ್ಕಳೊಂದಿಗೆ ಕೆಂಗೇರಿ ಉಪನಗರದ ಧನಗಾನಹಳ್ಳಿಯಲ್ಲಿ ವಾಸವಿದ್ದರು.ಮಂಗಮ್ಮ ಅವರು ಪತಿ ಬಸವರಾಜು ಮತ್ತು ಇಬ್ಬರು ಮಕ್ಕಳೊಂದಿಗೆ ಧನಗಾನಹಳ್ಳಿಯಲ್ಲೇ ನೆಲೆಸಿದ್ದರು. ಸಹೋದರರಾದ ಮಾರಪ್ಪ ಹಾಗೂ ಬಸವರಾಜು, ಪತ್ನಿಯರ ಜತೆ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ವೇಳೆ ಅವರು ಅಪಾರ್ಟ್‌ಮೆಂಟ್ ಕಟ್ಟಡದ ಮತ್ತೊಂದು ಬದಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ಗೋಡೆ ಕುಸಿದ ಸದ್ದು ಜೋರಾಗಿ ಕೇಳಿಸಿತು. ಕಟ್ಟಡದ ಮತ್ತೊಂದು ಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾನು ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದಿರಬಹುದೆಂದು ಕೂಡಲೇ ಆ ಕಡೆಗೆ ಓಡಿ ಹೋದೆ. ಆದರೆ, ಪಕ್ಕದ ನಿವೇಶನದ ತಡೆಗೋಡೆ ಕುಸಿದು ಬಿದ್ದಿತ್ತು. ರಾಜಮ್ಮ ಮತ್ತು ಮಂಗಮ್ಮ ಅವಶೇಷಗಳಡಿ ಸಿಲುಕಿದ್ದರು. ಅವಶೇಷಗಳನ್ನು ತೆರವುಗೊಳಿಸಿ ಅವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ' ಎಂದು ಮೃತರ ಸಂಬಂಧಿ ಮಂಜುನಾಥ್ ಹೇಳಿದರು.`ಸುಮಾರು 70 ಮಂದಿ ಕೂಲಿ ಕೆಲಸಕ್ಕೆಂದು ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ನಗರಕ್ಕೆ ಬಂದಿದ್ದೆವು. ಸಂಬಂಧಿಕರಾದ ನಾವು ನಗರದ ವಿವಿಧೆಡೆ ಕಟ್ಟಡಗಳ ನಿರ್ಮಾಣದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು' ಎಂದರು.`ಒಂದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರೂ ಪತ್ನಿಯನ್ನು ಸಾವಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಪತ್ನಿಯ ಸಾವಿನಿಂದ ಮಕ್ಕಳು ಅನಾಥರಾಗಿದ್ದಾರೆ' ಎಂದು ಮಾರಪ್ಪ ಕಣ್ಣೀರಿಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.