ತಡೆಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

7

ತಡೆಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Published:
Updated:
ತಡೆಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಬೆಂಗಳೂರು/ಆನೇಕಲ್: ಬನ್ನೇರುಘಟ್ಟ ಸಮೀಪದ ಟುಲಿಪ್ಸ್ ರೆಸಾರ್ಟ್‌ನಲ್ಲಿ ಗುರುವಾರ ಬೆಳಿಗ್ಗೆ ಗೋಡೆ ಕುಸಿದು ಬೆಂಗಳೂರಿನ ಫ್ಲಾರೆನ್ಸ್ ಪ್ರೌಢ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಅಬ್ದುಲ್ ವಾಸೀಂ, ಸೈಯದ್ ಇಮ್ರಾನ್, ಮಹಮ್ಮದ್ ಆಸೀಂ ಅಲ್ತಾಫ್ ಮತ್ತು ಮಹಮ್ಮದ್ ಫೈಜಲ್ ಗಾಯಗೊಂಡವರು.ಫ್ಲಾರೆನ್ಸ್ ಪ್ರೌಢ ಶಾಲೆ ಫ್ರೇಜರ್‌ಟೌನ್‌ನ ಬಳಿ ಇದೆ. ಆ ಶಾಲೆಯ 88 ವಿದ್ಯಾರ್ಥಿಗಳು, ಭೋದಕ ಸಿಬ್ಬಂದಿ ಜತೆ ಟುಲಿಪ್ಸ್ ರೆಸಾರ್ಟ್‌ಗೆ ಲಘು ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಸೈಯದ್ ಇಮ್ರಾನ್‌ನ ಕಾಲಿಗೆ, ವಾಸೀಂ ಮತ್ತು ಅಲ್ತಾಫ್‌ನ ಹಣೆಗೆ ಹಾಗೂ ಫೈಜಲ್‌ನ ಕೈಗೆ ಪೆಟ್ಟಾಗಿದೆ.

`ವಿದ್ಯಾರ್ಥಿಗಳೆಲ್ಲಾ ಜಾದೂ ಪ್ರದರ್ಶನ ನೋಡಲು ಕೆಳಗೆ ಕಾಯುತ್ತಿದ್ದರು. ಈ ವೇಳೆ ಎಂಟು ವಿದ್ಯಾರ್ಥಿಗಳು ಫೋಟೊ ತೆಗೆಸಿಕೊಳ್ಳಲು ರೆಸಾರ್ಟ್ ಕಟ್ಟಡದ ಒಂದನೇ ಮಹಡಿಗೆ ಹೋಗಿದ್ದರು. ಅವರಲ್ಲಿ ನಾಲ್ಕು ಮಂದಿ ಮಹಡಿಯ ಅಂಚಿನ ತಡೆಗೋಡೆಗೆ ಒರಗಿಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದಾಗ ತಡೆಗೋಡೆ ಕುಸಿದಿದೆ. ಪರಿಣಾಮ ಆ ನಾಲ್ಕು ಮಂದಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ' ಎಂು ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದ ಶಾಲೆಯ ಸಿಬ್ಬಂದಿ ಪದ್ಮಿನಿ ಹೇಳಿದರು.`ರೆಸಾರ್ಟ್‌ನ ಕಾರ್ಮಿಕರ ನೆರವಿನಿಂದ ಗಾಯಾಳು ವಿದ್ಯಾರ್ಥಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆವು. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಈ ಲಘು ಪ್ರವಾಸ ಹಮ್ಮಿಕೊಳ್ಳಲಾಗಿತ್ತು' ಎಂದು ಶಿಕ್ಷಕಿ ಕಲ್ಪನಾ `ಪ್ರಜಾವಾಣಿ'ಗೆ ತಿಳಿಸಿದರು. `ಮಣ್ಣಿನಿಂದ ನಿರ್ಮಿಸಿದ್ದ ಆ ತಡೆಗೋಡೆ ಶಿಥಿಲಾವಸ್ಥೆಯಲ್ಲಿತ್ತು. ಆ ಗೋಡೆಗೆ ಒರಗಿಕೊಳ್ಳುತ್ತಿದ್ದಂತೆ ಕುಸಿದಿದ್ದರಿಂದ ಕೆಳಗೆ ಬಿದ್ದೆವು' ಎಂದು ಗಾಯಾಳು ವಾಸೀಂ ಹೇಳಿದ.ರೆಸಾರ್ಟ್‌ನಲ್ಲಿ ತಡೆಗೋಡೆ ಕುಸಿದು ವಿದ್ಯಾರ್ಥಿಗಳು ಗಾಯಗೊಂಡ ಸುದ್ದಿ ತಿಳಿದ ಪೋಷಕರು ಆತಂಕದಿಂದ ಕಾಲೇಜು ಬಳಿ ಜಮಾಯಿಸಿದ್ದರು. ಸಂಜೆ ಐದು ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಕಾಲೇಜಿಗೆ ವಾಪಸ್ ಬಂದ ನಂತರ ಪೋಷಕರ ಆತಂಕ ದೂರವಾಯಿತು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಬನ್ನೇರುಘಟ್ಟ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry