ತಡೆಗೋಡೆ ಕುಸಿದು ಮೂವರಿಗೆ ಗಾಯ

7
ರವಿತೇಜ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಘಟನೆ

ತಡೆಗೋಡೆ ಕುಸಿದು ಮೂವರಿಗೆ ಗಾಯ

Published:
Updated:

ಬೆಂಗಳೂರು: ನಗರದ ಕಂಠೀರವ ಸ್ಟುಡಿಯೋ ರಸ್ತೆಯಲ್ಲಿರುವ ರವಿತೇಜ ಪೆಟ್ರೋಲ್ ಬಂಕ್‌ನ ತಡೆಗೋಡೆ ಗುರುವಾರ ಕುಸಿದು ಬಿದ್ದ ಪರಿಣಾಮ ಇಬ್ಬರು ನೌಕರರು ಸೇರಿ ಮೂರು ಮಂದಿ ಗಾಯಗೊಂಡಿದ್ದಾರೆ. ಬಂಕ್‌ನ ಏರ್‌ ಕೌಂಟರ್‌ ವಿಭಾಗಕ್ಕೆ ಹೊಂದಿಕೊಂಡಂತೆ ಸುಮಾರು ಹತ್ತು ಅಡಿ ಎತ್ತರದ ತಡೆಗೋಡೆ ಇದೆ.

ಮಧ್ಯಾಹ್ನ 12.30ರ ಸುಮಾರಿಗೆ ಆ ತಡೆಗೋಡೆ ಕುಸಿದು  ಸ್ಥಳದಲ್ಲೇ ಇದ್ದ ಬಂಕ್‌ ನೌಕರರಾದ ರಸೂಲ್ (26), ಚಂದ್ರಶೇಖರ್‌ (46) ಹಾಗೂ ಬೈಕ್‌ನ ಚಕ್ರಕ್ಕೆ ಗಾಳಿ ತುಂಬಿಸುತ್ತಿದ್ದ ಆರ್‌.ವಿ. ವಿಜಯ್‌ ಅರಸ್‌ ಅವರ ಮೇಲೆ ಬಿದ್ದಿತು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ಹೇಳಿದ್ದಾರೆ.‘ತಡೆಗೋಡೆಯ ಜತೆಗೆ  ವಿದ್ಯುತ್‌ ಕಂಬವೂ ರಸೂಲ್‌ ಮೇಲೆ ಬಿದ್ದಿದ್ದರಿಂದ ಅವರಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಹಾಸ್ಮ್ಯಾಟ್‌ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಕಂಬ ಮುರಿದು ಬಿದ್ದಾಗ ತಂತಿ ತುಂಡಾಗಿದ್ದರಿಂದ ಅದರಲ್ಲಿ ವಿದ್ಯುತ್‌ ಪ್ರವಹಿಸುತ್ತಿರಲಿಲ್ಲ.  ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿತು’ ಎಂದು ಪೊಲೀಸರು ಮಾಹಿತಿ ನೀಡಿದರು.‘1995ರಲ್ಲಿ ಬಂಕ್ ಆರಂಭಿಸಿ ದಾಗ ಈ ತಡೆ ಗೋಡೆಯನ್ನು ನಿರ್ಮಿಸಲಾಗಿತ್ತು. ಬಂಕ್‌ನ ಹಿಂಭಾ ಗದಲ್ಲಿರುವ ಜಾಗ ಸರ್ಕಾರಕ್ಕೆ ಸೇರಿದ್ದು ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಇತ್ತೀಚೆಗೆ ಆ ಜಾಗದಲ್ಲಿ ಮಣ್ಣು ಸುರಿದು, ತಾತ್ಕಾಲಿಕ ಲಾರಿ ನಿಲ್ದಾಣ ವನ್ನಾಗಿ ಮಾಡಲಾಗಿದೆ. ಆದರೆ, ಜಾಗವನ್ನು ಸಮತಟ್ಟು ಮಾಡುವ ಯತ್ನದಲ್ಲಿ ತಡೆಗೋಡೆಗೆ ಹಾನಿಯಾ ಗಿತ್ತು.

ಈ ನಡುವೆ ಸತತ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆ ಮತ್ತಷ್ಟು ಶಿಥಿಲಗೊಂಡು ಕುಸಿದು ಬಿದ್ದಿದೆ’ ಎಂದು ಬಂಕ್‌ ಮಾಲೀಕ ರಾಜೇಶ್‌ ‘ಪ್ರಜಾವಾಣಿ’ ತಿಳಿಸಿದರು. ಘಟನೆ ಸಂಬಂಧ ಯಾರೂ ದೂರು ಕೊಟ್ಟಿಲ್ಲ. ಹೀಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರ್‌ಎಂಸಿ ಯಾರ್ಡ್‌ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry