ತಡೆಯಾಜ್ಞೆ- 4 ವಾರ ವಿಸ್ತರಣೆ

7

ತಡೆಯಾಜ್ಞೆ- 4 ವಾರ ವಿಸ್ತರಣೆ

Published:
Updated:

ಬೆಂಗಳೂರು: ನ್ಯಾಯಮೂರ್ತಿ ಬಿ.ಪದ್ಮರಾಜ ಆಯೋಗವು ಭೂ ಹಗರಣಗಳ ತನಿಖೆಯನ್ನು ನಡೆಸದಂತೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಇನ್ನೂ ನಾಲ್ಕು ವಾರಗಳ ಕಾಲ ವಿಸ್ತರಿಸಿದೆ. ಈ ಅವಧಿಯಲ್ಲಿ ಆಯೋಗ ದೂರು ಸ್ವೀಕರಿಸುವುದಕ್ಕೂ ಅವಕಾಶ ಇಲ್ಲ.

‘ಕರ್ನಾಟಕ ಲೋಕಾಯುಕ್ತ ಕಾಯ್ದೆ’ಯನ್ನು ಮೀರಿ ಮುಖ್ಯಮಂತ್ರಿ ವಿರುದ್ಧದ ಭೂ ಹಗರಣಗಳ ತನಿಖೆಯನ್ನು ಆಯೋಗಕ್ಕೆ ವಹಿಸಲಾಗಿದೆ ಎಂದು ದೂರಿ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತು.

ಶುಕ್ರವಾರ ವಿಚಾರಣೆ ಆರಂಭವಾಗುತ್ತಿದ್ದಂತೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ ದತ್ತ ಪರ ವಕೀಲರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಲೋಕಾಯುಕ್ತರನ್ನೂ ಪ್ರಕರಣದ ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸುವಂತೆ ಕೋರಿದರು. ಈ ಸಂಬಂಧ ಸರ್ಕಾರ ಮತ್ತು ಪದ್ಮರಾಜ ಆಯೋಗಕ್ಕೆ ನೋಟಿಸ್ ಜಾರಿ ಮಾಡುವಂತೆ ನ್ಯಾಯಪೀಠ ಆದೇಶಿಸಿತು.

ಬಳಿಕ ಅರ್ಜಿಯೊಂದನ್ನು ಸಲ್ಲಿಸಿದ ಸರ್ಕಾರದ ವಕೀಲರು, ‘ತನಿಖಾ ಆಯೋಗ ನೇಮಿಸಿದ್ದ ಸಂದರ್ಭದಲ್ಲಿ 2011ರ ಜನವರಿ 31ರವರೆಗೂ ದೂರು ಸಲ್ಲಿಕೆಗೆ ಅವಕಾಶ ನೀಡಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಈಗ ಗಡುವು ಅಂತ್ಯಗೊಂಡಿದೆ. ಈ ಅವಧಿಯನ್ನು ವಿಸ್ತರಿಸುವಂತೆ ಸಾರ್ವಜನಿಕರಿಂದ ಕೋರಿಕೆ ಬಂದಿದೆ. ಆದ್ದರಿಂದ ದೂರು ಸ್ವೀಕರಿಸುವ ಅವಧಿ ವಿಸ್ತರಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಸರ್ಕಾರದ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾ.ಕೇಹರ್, ‘ಭೂ ಹಗರಣದ ತನಿಖೆಗೆ ಈಗಾಗಲೇ ತಡೆಯಾಜ್ಞೆ ನೀಡಲಾಗಿದೆ. ದೂರು ಸ್ವೀಕರಿಸುವುದೂ ಸಾಕ್ಷ್ಯ ಸಂಗ್ರಹಿಸುವುದಕ್ಕೆ ಸಮಾನ. ಆದ್ದರಿಂದ ತಡೆಯಾಜ್ಞೆ ನಡುವೆ ದೂರು ಸ್ವೀಕರಿಸುವುದಕ್ಕೆ ಅವಕಾಶ ನೀಡಲಾಗದು’ ಎಂದರು. ಅರ್ಜಿಯ ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿದ ನ್ಯಾಯಾಲಯ, ಅಲ್ಲಿಯವರೆಗೂ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry