`ತತ್ವ ಸಿದ್ಧಾಂತದ ಚೌಕಟ್ಟಿಗೆ ಒಳಪಡದ ತೇಜಸ್ವಿ'

7

`ತತ್ವ ಸಿದ್ಧಾಂತದ ಚೌಕಟ್ಟಿಗೆ ಒಳಪಡದ ತೇಜಸ್ವಿ'

Published:
Updated:

ಬೆಂಗಳೂರು: `ತತ್ವ ಸಿದ್ಧಾಂತಗಳ ಚೌಕಟ್ಟಿನಿಂದ ಬದುಕನ್ನು ಗ್ರಹಿಸದೇ, ಸಾಮಾನ್ಯ ಜನರ ಜೀವನದಲ್ಲಿ ಅಡಗಿರುವ ತತ್ವವನ್ನು ಅನುಭವದ ಮೂಲಕ ಅರಿಯುವ ಪಥಕ್ಕೆ ತೇಜಸ್ವಿ ಒಡ್ಡಿಕೊಂಡಿದ್ದರು' ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.ಕನ್ನಡ ಜನಶಕ್ತಿ ಕೇಂದ್ರವು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ `ತೇಜಸ್ವಿ ನೆನಪು'  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ವಿಚಾರಗಳ ಭಾರದಿಂದ 20ನೇ ಶತಮಾನ ತತ್ತರಿಸಿಹೋಗಿತ್ತು. ಪಾಶ್ಚಿಮಾತ್ಯ ವಿಚಾರಧಾರೆಯೂ ಈ ನೆಲವನ್ನು ಬಹುವಾಗಿ ಆಕ್ರಮಿಸಿಕೊಂಡು ಒಂದು ರೀತಿಯಲ್ಲಿ ನಿರ್ವಾತವನ್ನೇ ಸೃಷ್ಟಿಸಿತ್ತು. ಈ ಹಂತದಲ್ಲಿ ಶ್ರೀಸಾಮಾನ್ಯನ ಬದುಕಿನ ಸೂಕ್ಷ್ಮ ವಿಚಾರಗಳನ್ನು ಹೆಣೆಯಲು ತೇಜಸ್ವಿ ಅವರಿಗೆ ಮಾತ್ರ ಸಾಧ್ಯವಾಗಿತ್ತು' ಎಂದ ಅವರು, `ಜನಪ್ರಿಯ ಸಾಹಿತ್ಯ'ದ ಭರಾಟೆಯ ನಡುವೆಯೂ ಓದು ಉಲ್ಲಾಸದ ಅನುಭವ ಆಗಬೇಕು ಅನ್ನುವ ಪಥವನ್ನು ಪ್ರತಿಪಾದಿಸಿದರು' ಎಂದರು.`ಈ ಹೊತ್ತಿನ ಅಗತ್ಯ ಹಾಗೂ ಸವಾಲುಗಳನ್ನು ಅರಿತು ಕನ್ನಡ ಭಾಷೆಯನ್ನು ಕಟ್ಟಬೇಕೆಂಬ ನಿಲುವು ಅವರದ್ದಾಗಿತ್ತು. ಕನ್ನಡ ತಂತ್ರಾಶಗಳ ಕುರಿತು ತೇಜಸ್ವಿ ನೀಡಿದ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಆದರೆ, ಮೂಡಿಗೆರೆಯ ಕಾಡಿನಲ್ಲಿ ಕೂತು ಇಡೀ ಜಗತ್ತನ್ನು ಒಳಗೊಂಡ ಕ್ರಮವೇ ಇತರರಿಗೆ ಮಾದರಿ ಎನಿಸಿದೆ' ಎಂದರು.ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, `ಕುವೆಂಪು ಅವರು `ವಿಶ್ವಮಾನವ ತತ್ವ'ವನ್ನು ಏರಬೇಕಾದ ಶಿಖರ ಎಂದುಕೊಂಡರೆ, ತೇಜಸ್ವಿ ಅನಾವರಣ ಮಾಡಿಕೊಳ್ಳಬೇಕಾದ ತತ್ವವಾಗಿ ಕಂಡಿದ್ದರು. ಮೂಲ ನಾಗರಿಕ ಸಂಸ್ಥೆಗಳಾದ ಮದುವೆ, ಶಿಕ್ಷಣ, ದಾಂಪತ್ಯ, ನ್ಯಾಯಾಂಗ ಹೀಗೆ ಭಿನ್ನ ವ್ಯವಸ್ಥೆಗಳಾಚೆಗೆ ಒಂದು ಅರಾಜಕತೆಯ ನೆಲೆಯಿದೆ. ಅದನ್ನು ಸಿನಿಕತೆಯಿಂದ ಮುಕ್ತಗೊಂಡ ಶೋಧನೆಗೆ ಒಳಪಡಿಸಿದ್ದರು' ಎಂದು ಹೇಳಿದರು.`ಮನುಷ್ಯ, ಪ್ರಕೃತಿ ಬೇರೆ ಎನ್ನುವ ದ್ವೈತ ಸಿದ್ಧಾಂತದಿಂದ ಮನುಷ್ಯ ಮತ್ತು ಪ್ರಕೃತಿ ಒಂದೇ ಎನ್ನುವ ಅದ್ವೈತ ಸಿದ್ದಾಂತದೆಡೆಗೆ ತೇಜಸ್ವಿ ಕೃತಿಗಳು ನೆಲೆ ಕಂಡುಕೊಂಡಿವೆ. ಸಮಾಜವಾದ ಮತ್ತು ಪರಿಸರವಾದ ಚಿಂತನೆಗಳಿಂದ ಅವರ ತಾತ್ವಿಕತೆಯನ್ನು ಗುರುತಿಸಬಹುದಾದರೂ ಅನುಭವದ ಮೂಲಕ ಚೈತನ್ಯ ಧಾತುವನ್ನು ಶೋಧಿಸುವ ಪ್ರಕ್ರಿಯೆ ಅವರಿಗೆ ಹೆಚ್ಚು ಆಪ್ತವೆನಿಸಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry