ತತ್ವ-ಸಿದ್ಧಾಂತ ಬಿಡದ ಎಸ್. ಬಂಗಾರಪ್ಪ

7

ತತ್ವ-ಸಿದ್ಧಾಂತ ಬಿಡದ ಎಸ್. ಬಂಗಾರಪ್ಪ

Published:
Updated:

ಶಿವಮೊಗ್ಗ: ಬಡವರ ಬಗ್ಗೆ ಬಂಗಾರಪ್ಪ ಅವರಿಗೆ ಆಂತರ್ಯದಲ್ಲಿ ಕಾಳಜಿ ಇದ್ದಿದ್ದರಿಂದ ಆಶ್ರಯ, ಆರಾಧಾನಾ, ಅಕ್ಷಯ, ವಿಶ್ವ ಯೋಜನೆಗಳನ್ನು ಜಾರಿಗೆ ತಂದು ಈ ಮೂಲಕ ಬಡವರ ಬದುಕಿನಲ್ಲಿ ಭರವಸೆ ಹುಟ್ಟಿಸುವ ಕೆಲಸ ನಡೆಯಿತು ಎಂದು ರಾಜ್ಯಸಭಾಸದಸ್ಯ ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಸಮಾಜವಾದಿ ಆಂದೋಲನ ಮಂಚ್ ಹಮ್ಮಿಕೊಂಡಿದ್ದ `ಎಸ್. ಬಂಗಾರಪ್ಪ ನೆನಪು~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಂಗಾರಪ್ಪ ರಾಜಕೀಯವನ್ನು ಎಂದಿಗೂ ವ್ಯಕ್ತಿಗತವಾಗಿ ತೆಗೆದುಕೊಂಡು ಹೋದವರಲ್ಲ. ತನ್ನ ಪ್ರತಿಸ್ಪರ್ಧಿಯನ್ನು ಕೂಡ ಸ್ನೇಹಿತನಂತೆ ಗೌರವಿಸುತ್ತಿದ್ದರು. ಯಾವ ಪಕ್ಷಕ್ಕೆ ಹೋದರೂ ತಮ್ಮ ತತ್ವ - ಸಿದ್ಧಾಂತಗಳನ್ನು ಬಿಡಲಿಲ್ಲ. ನೇರ, ನಿಷ್ಠುರ ನಡೆಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ ಎಂದು ಬಣ್ಣಿಸಿದರು.ಈಗಿನ ಯುವ ರಾಜಕಾರಣಿಗಳಲ್ಲಿ ತತ್ವ- ಸಿದ್ಧಾಂತಗಳಿಲ್ಲ. ಕೇವಲ ಹಣದಿಂದಲೇ ಚುನಾವಣೆ ಗೆಲ್ಲುವ ಮನಸ್ಥಿತಿಯಲ್ಲಿದ್ದಾರೆ. ಇಂತವರು ಗೆದ್ದರೂ ಸಮಾಜಕ್ಕೆ ಏನನ್ನೂ ಮಾಡುವುದಿಲ್ಲ. ಸಿದ್ಧಾಂತ ರಹಿತ ರಾಜಕಾರಣ ದೇಶದ ಭವಿಷ್ಯ ಮಸುಕು ಮಾಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಸರ್ಕಾರಗಳನ್ನೇ ಅಲ್ಲಾಡಿಸುವ ತಾಕತ್ತು ಬಂಗಾರಪ್ಪ ಅವರಿಗಿತ್ತು. ಅಂತಹ ಗಟ್ಟಿ ಧ್ವನಿಯ ನಾಯಕನ ಎದುರು ಸ್ಪರ್ಧಿಸುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ. ಅವರನ್ನು ಟೀಕಿಸಲು ಎಲ್ಲರೂ ಹೆದರುತ್ತಿದ್ದ ಕಾಲದಲ್ಲಿ ತಾವು ಅವರನ್ನು ಟೀಕಿಸಿದ್ದೆವು. ಆದರೆ ಎಂದಿಗೂ ಅವರ ಬಗ್ಗೆ ಎಲ್ಲಿಯೂ ಹಗುರವಾಗಿ ಮಾತನಾಡಿಲ್ಲ ಎಂದು ಮೆಲುಕು ಹಾಕಿದರು.ಬಂಗಾರಪ್ಪ ಅನೇಕರಿಗೆ ರಾಜಕೀಯವಾಗಿ ಜನ್ಮಕೊಟ್ಟರು. ಆದರೆ, ಅವರ‌್ಯಾರು ಅವರೊಂದಿಗೆ ಇರಲಿಲ್ಲ ಎಂಬುದು ಅಷ್ಟೇ ಸತ್ಯ. ಎಚ್.ಎಂ. ಚಂದ್ರಶೇಖರ್, ನಗರದ ಮಹಾಲಿಂಗಪ್ಪ, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್, ಡಿ.ಕೆ. ಶಿವಕುಮಾರ್ ಕೊನೆಗೆ ತಮ್ಮ ಪುತ್ರ ಕುಮಾರ ಬಂಗಾರಪ್ಪ ಕೂಡ ಬಂಗಾರಪ್ಪ ಅವರ ಜತೆಗಿರಲಿಲ್ಲ. ಅವರಲ್ಲಿದ್ದ ಹಠದ ಸ್ವಭಾವದಿಂದಲೇ ಅತ್ಯಂತ ಎತ್ತರಕ್ಕೆ ವರ್ಣರಂಜಿತ ರಾಜಕಾರಣಿಯಾಗಿ ಬೆಳೆದರೂ, ಅದೇ ಸ್ವಭಾವದಿಂದಲೇ ಒಂಟಿಯಾದರು ಎಂದು ಬೇಸರ ವ್ಯಕ್ತಪಡಿಸಿದರು.ಬಂಗಾರಪ್ಪ ಅವರ ಸುತ್ತಲೂ ಹೊಗಳುಭಟ್ಟರು ಸೇರಿಕೊಂಡು ಅವರನ್ನು ದಾರಿ ತಪ್ಪಿಸಿದ್ದೂ ಉಂಟು. ಆದರೂ ರಾಜಕೀಯವಾಗಿ ಅವರ ಗ್ರಹಿಕೆ ಮಾತ್ರ ಅದ್ಭುತವಾಗಿತ್ತು. ಚುನಾವಣಾ ಕ್ಷೇತ್ರಕ್ಕೆ ಕಾಲಿಡದೆ ಗೆಲ್ಲುತ್ತೇನೆ ಎಂದು ಹೇಳುವ ಧೈರ್ಯ ಇದ್ದದ್ದು ಬಂಗಾರಪ್ಪಗೆ ಮಾತ್ರ ಎಂದು ಪ್ರಶಂಸಿಸಿದರು.ವಿಶೇಷ ಗುಣಲಕ್ಷಣ: ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ರಾಜ್ಯ ಕಂಡ ವಿಶೇಷ ಗುಣಲಕ್ಷಣದ ಮನುಷ್ಯ ಬಂಗಾರಪ್ಪ. ಅವರು ಪಕ್ಷಾಂತರ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ. ಸಭೆಯಲ್ಲಿ ನೂರಾರು ಜನರ ನಡುವೆಯೂ ಗುರುತಿಸಿ, ಹೆಸರಿಡಿದು ಕರೆದು ಮಾತನಾಡುವ ಗುಣ ಅವರದ್ದು. ಜಿಲ್ಲೆಯಲ್ಲಿ ಮೆಗ್ಗಾನ್ ಆಸ್ಪತ್ರೆ, ಎಂಎಡಿಬಿ, ತುಂಗಾ ಮೇಲ್ದಂಡೆ, ನಿವೇಶನ ಹಂಚಿಕೆ, ಬಗರ್‌ಹುಕುಂ ಜಮೀನು ಮಂಜೂರು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ ಕೀರ್ತಿ ಅವರದ್ದು ಎಂದು ಸ್ಮರಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮೀರ್ ಅಜೀಜ್ ಅಹ್ಮದ್, ಬಂಗಾರಪ್ಪ ಜಾರಿಗೆ ತಂದ ಅಕ್ಷಯ, ಆಶ್ರಯ, ಆರಾಧನ, ಆಶ್ರಯ, ಅಕ್ಷರ ತುಂಗಾ ಯೋಜನೆಗಳು ಜನರ ಹೃದಯ ಮುಟ್ಟಿದೆ. ನಂಬಿದವರನ್ನು ಎಂದಿಗೂ ಅವರು ಕೈಬಿಡಲಿಲ್ಲ. ಅನೇಕರನ್ನು ರಾಜಕೀಯವಾಗಿ ಬೆಳೆಸಿದ ಗುರು ಅವರು ಎಂದು ಹೇಳಿದರು.ಸಮಾಜವಾದಿ ಜನಾಂದೋಲನ ಮಂಚ್ ರಾಜ್ಯ ಸಂಚಾಲಕ ಎಂ.ಜಿ. ಸ್ವಾದಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ, ಎಐಎಡಿಎಂಕೆ ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಪಿ. ಸಂಪತ್, ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಮುಖಂಡ ಆರ್. ಮದನ್ ಮತ್ತಿತರರು  ಉಪಸ್ಥಿತರಿದ್ದರು.ಸಮಾಜವಾದಿ ಜನಾಂದೋಲನ ಮಂಚ್‌ನ ರಾಷ್ಟ್ರೀಯ ಸಂಚಾಲಕ ಪ.ರಾ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry