ಸೋಮವಾರ, ಜೂನ್ 21, 2021
29 °C

ತನಿಖೆಗೆ ಆಯೋಗದ ಐಜಿಪಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬೆಂಗಳೂರು ಪೊಲೀಸರು ನಗರದ ಇರಾನಿ ಗಲ್ಲಿಯ ಮೇಲೆ ನಡೆಸಿದ ದಾಳಿಯ ವೇಳೆ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಸಿದ್ದಾರೆ ಎನ್ನಲಾದ ಹಲ್ಲೆಯ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಐ.ಜಿ.ಪಿ. ಸುನೀಲ ಅಗ್ರವಾಲ್ ಅವರು ಗಾಂಧಿಗಂಜ್ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದರು.ಇರಾನಿ ಗಲ್ಲಿಯ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಅಗ್ರವಾಲ್ ಅವರು ಗುರುವಾರ ನಗರದ ಇರಾನಿ ಗಲ್ಲಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅನೇಕ ಇರಾನಿ ಮಹಿಳೆಯರು ಪೊಲೀಸರು ತಮ್ಮಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಕೆಲವರು ಗಾಯಗಳನ್ನು ಸಹ ತೋರಿಸಿದರು.ಇದಕ್ಕೆ ಸ್ಪಂದಿಸಿದ ಅವರು ಗಾಂಧಿಗಂಜ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವರನ್ನು ಸ್ಥಳಕ್ಕೆ ಕರೆಸಿದರು. ಮಹಿಳೆಯರಿಗೆ ಆಗಿರುವ ಗಾಯಗಳ ಬಗ್ಗೆ ವೈದ್ಯರಿಂದ ತಪಾಸಣೆ ನಡೆಸಬೇಕು. ಗಾಯಗಳು ಆದದ್ದು ಯಾವಾಗ ಎನ್ನುವುದನ್ನು ಪರಿಶೀಲಿಸಬೇಕು. ಬೆಂಗಳೂರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿದರು.ಪೊಲೀಸರು ದಾಳಿಯ ವೇಳೆ ಕಾರಣ ತಿಳಿಸಿಲ್ಲ. ನಿರಪರಾಧಿಗಳನ್ನು ಜೈಲಿಗೆ ತಳ್ಳಿದ್ದಾರೆ. 6-7 ಕೆ.ಜಿ. ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಾರೆ. ಮಾನವ ಹಕ್ಕುಗಳನ್ನು ಉಲ್ಲಂಘಿ ಸಿದ್ದಾರೆ ಎಂದು ಕಾಲೋನಿ ನಿವಾಸಿಗಳು ಆಪಾದಿಸಿದರು.ನಗರಸಭೆ ಸದಸ್ಯೆ ಫಾತೀಮಾ ಅನ್ವರ್ ಅಲಿ ಅವರು ದಾಳಿಗೊಳಗಾದ ಮನೆಗಳನ್ನು ಅಗ್ರವಾಲ್ ಅವರಿಗೆ ತೋರಿಸಿದರು. ಅನೇಕರು ನಮ್ಮ ಬಳಿ ಬಂಗಾರದ ರಸೀದಿ ಇದ್ದರೂ ಪೊಲೀಸರು ತಮ್ಮ ಮನೆಯಲ್ಲಿದ್ದ ಲಾಕರ್‌ಗಳನ್ನು ಒಡೆದು ಬಂಗಾರ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.ನಂತರ ಬಂಗಾರ ಎಲ್ಲಿ ಖರೀದಿ ಮಾಡಿದ್ದು ಎನ್ನುವ ಬಗ್ಗೆ ಪರಿಶೀಲನೆ ನಡೆಸುವಂತೆ ಅಗ್ರವಾಲ್ ಅವರು, ಮಾನವ ಹಕ್ಕುಗಳ ಆಯೋಗದ ಡಿ.ವೈ.ಎಸ್.ಪಿ. ಅಶ್ವಥ್ ನಾರಾಯಣ್ ಹಾಗೂ ತಂಡಕ್ಕೆ ಸೂಚಿಸಿದರು.

ತಂಡವು ನಗರದ ನರೇಶ ಜುವೆಲ್ಲರ್ಸ್ ಮತ್ತು ಬಾಲಾಜಿ ಜುವೆಲ್ಲರ್ಸ್‌ಗೆ ಭೇಟಿ ನೀಡಿತು.ನರೇಶ ಜುವೆಲ್ಲರ್ಸ್‌ನವರು ಇರಾನಿಗಳಿಗೆ ಕಳೆದ 10 ವರ್ಷಗಳಲ್ಲಿ ಸುಮಾರು 2 ಕೆ.ಜಿ.ಯ ಚಿನ್ನಾಭರಣಗಳನ್ನು ಮಾಡಿಕೊಟ್ಟಿದ್ದಾಗಿ ತಿಳಿಸಿದರು. ಬಾಲಾಜಿ ಜುವೆಲ್ಲರ್ಸ್‌ನವರು ಸಹ ಇರಾನಿಗಳಿಗೆ ಬಂಗಾರ ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಆಯೋಗವು ದಾಳಿಯ ವೇಳೆ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆಯೇ ಎನ್ನುವ ಕುರಿತು ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.