ತನಿಖೆಗೆ ಸಿದ್ಧ, ರಾಜೀನಾಮೆ ಇಲ್ಲ- ಖುರ್ಷಿದ್

7

ತನಿಖೆಗೆ ಸಿದ್ಧ, ರಾಜೀನಾಮೆ ಇಲ್ಲ- ಖುರ್ಷಿದ್

Published:
Updated:
ತನಿಖೆಗೆ ಸಿದ್ಧ, ರಾಜೀನಾಮೆ ಇಲ್ಲ- ಖುರ್ಷಿದ್

ನವದೆಹಲಿ (ಪಿಟಿಐ/ಐಎಎನ್‌ಎಸ್):  ತಾವು ಹಾಗೂ ತಮ್ಮ ಪತ್ನಿ ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆಗೆ ಅಕ್ರಮವಾಗಿ ಹಣ ಹರಿದುಬಂದಿರುವ ಆರೋಪದ ಕುರಿತು ಯಾವುದೇ ರೀತಿಯ ತನಿಖೆ ಎದುರಿಸಲು ತಾವು ಸಿದ್ಧ ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಸ್ಪಷ್ಟಪಡಿಸಿದರಾದರೂ ರಾಜೀನಾಮೆ ನೀಡುವ ಸುಳಿವನ್ನು ಮಾತ್ರ ನೀಡಿಲ್ಲ.`ನಾವು ರೂ 71 ಲಕ್ಷವನ್ನು ದುರ್ಬಳಕೆ ಮಾಡಿಕೊಂಡಿದ್ದೇವೆ ಎಂದು ಯಾರೂ ಹೇಳಿಲ್ಲ. ಹಾಗೆ ಯಾರಾದರೂ ಹೇಳಿದ್ದರೆ ಅದು ದುರುದ್ದೇಶಪೂರಿತವಾದದ್ದು. ಇದಕ್ಕೆಲ್ಲ ಉತ್ತರ ನೀಡಬೇಕಿಲ್ಲ~ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಭಾರತ ಭ್ರಷ್ಟಾಚಾರ ವಿರೋದ್ಧದ ಸಂಸ್ಥೆ (ಐಎಸಿ) ಕಾರ‌್ಯಕರ್ತ ಅರವಿಂದ ಕೇಜ್ರಿವಾಲ್ ಈ ಸಂಬಂಧ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಖುರ್ಷಿದ್, ಧೈರ್ಯ ಇದ್ದಲ್ಲಿ ಅವರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ. ಸ್ವತಂತ್ರ ತನಿಖೆಯನ್ನೂ ನಡೆಸಿ~ ಎಂದು ಸವಾಲು ಹಾಕಿದರಲ್ಲದೆ ತಮ್ಮ ಟ್ರಸ್ಟ್ ವತಿಯಿಂದ ಅಂಗವಿಕಲರಿಗಾಗಿ ನಡೆಸಲಾದ ಶಿಬಿರದ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.`ನಮ್ಮ ಸಂಸ್ಥೆಯಾದ `ಝಕೀರ್ ಹುಸೇನ್ ಸ್ಮಾರಕ ಟ್ರಸ್ಟ್~ ವತಿಯಿಂದ ಯಾವುದೇ ಅಂಗವಿಕಲರಿಗೆ ಉಪಕರಣ ವಿತರಿಸಿಲ್ಲ, ಶಿಬಿರಗಳನ್ನೂ ನಡೆಸಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ನಾವು ಶಿಬಿರಗಳನ್ನು ನಡೆಸಿ ಉಪಕರಣಗಳನ್ನೂ ವಿತರಿಸಿದ್ದೇವೆ. ಕೆಲ ಶಿಬಿರಗಳನ್ನು ನಾನೇ ಉದ್ಘಾಟಿಸಿದ್ದರೆ ಉಳಿದವನ್ನು ನನ್ನ ಸಹೋದ್ಯೋಗಿಗಳು ಉದ್ಘಾಟಿಸಿದ್ದಾರೆ. ಶಿಬಿರಗಳ ಕುರಿತಾದ ಎಲ್ಲ ಅಂಕಿಸಂಖ್ಯೆಯ ಮಾಹಿತಿಯನ್ನು ಸಚಿವಾಲಯಕ್ಕೆ ನೀಡಲಾಗಿದೆ~ ಎಂದು ಖುರ್ಷಿದ್ ಸ್ಪಷ್ಟಪಡಿಸಿದರು.ಉತ್ತರ ಪ್ರದೇಶದ 17 ಜಿಲ್ಲೆಗಳ ಪೈಕಿ 10ರಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸದೆಯೇ ಖುರ್ಷಿದ್ ಹಾಗೂ ಅವರ ಪತ್ನಿ ಕೇಂದ್ರದ ಸಮಾಜ ಕಲ್ಯಾಣ ಸಚಿವಾಲಯದಿಂದ ರೂ 71.50 ಲಕ್ಷ ಹಣ ಪಡೆದಿದ್ದಾರೆ ಹಾಗೂ ಈ ಸಂಬಂಧ ಖುರ್ಷಿದ್ ನಕಲಿ ಸಹಿ ಮಾಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.

 

ಈ ನಡುವೆ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಪ್ರಸಾರ ಮಾಡಿರುವ ಟಿವಿ ವಾಹಿನಿಯೊಂದರ ವಿರುದ್ಧ ರೂ. 100 ಕೋಟಿ ಪರಿಹಾರಕ್ಕೆ ಒತ್ತಾಯಿಸಿ ಖುರ್ಷಿದ್ ಪತ್ನಿ ಲೂಸಿ ದೆಹಲಿ ಕೋರ್ಟ್ ಒಂದರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.ಸುಮಾರು ಒಂದೂವರೆ ಗಂಟೆ ಕಾಲ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಂಯಮ ಕಳೆದುಕೊಂಡ ಖುರ್ಷಿದ್ ಒಂದು ಹಂತದಲ್ಲಿ ಕೆಲ ಟಿವಿ ಪತ್ರಕರ್ತರಿಗೆ `ಬಾಯಿ ಮುಚ್ಚಿಕೊಂಡು ಹೊರಕ್ಕೆ ಹೋಗಿ~ ಎಂದು ಗದರಿಸಿದ ಘಟನೆಯೂ ನಡೆಯಿತು.ಆರೋಪಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರಾ ಎಂಬ ಪ್ರಶ್ನೆಗೆ ಕೆಂಡಾಮಂಡಲವಾದ ಖುರ್ಷಿದ್ `ಇಂತಹ ಪ್ರಶ್ನೆ ಪತ್ರಿಕೋದ್ಯಮದ ನೀತಿಸಂಹಿತೆಗೇ ವಿರುದ್ಧವಾದದ್ದು~ ಎಂದರು.ಉ.ಪ್ರ. ಸರ್ಕಾರದ ತನಿಖಾ ವರದಿ: ಈ ನಡುವೆ ಖುರ್ಷಿದ್ ರಾಜೀನಾಮೆ ನೀಡಲೇಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿರುವ ಅರವಿಂದ ಕೇಜ್ರಿವಾಲ್, ಖುರ್ಷಿದ್ ಪತ್ನಿ ಒಡೆತನದ ಝಕೀರ್ ಹುಸೇನ್ ಟ್ರಸ್ಟ್ ಹಣ ದುರ್ಬಳಕೆ ಮಾಡಿಕೊಡಿರುವ ಕುರಿತು ಉತ್ತರ ಪ್ರದೇಶ ಸರ್ಕಾರ ನಡೆಸಿದ ತನಿಖೆಯ ಆಧಾರದಲ್ಲೇ ತಾವು ಆರೋಪ ಮಾಡಿದ್ದು, ಅವರು ಇಂದೇ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.ಅಂಗವಿಕಲರಿಗಾಗಿ ಶಿಬಿರಗಳನ್ನು ನಡೆಸದೆಯೇ ಈ ಸಂಬಂಧ ಉತ್ತರ ಪ್ರದೇಶದ ಅಧಿಕಾರಿಯೊಬ್ಬರ ಸಹಿಯನ್ನು ನಕಲಿ ಮಾಡಿ ಟ್ರಸ್ಟ್ ಕೇಂದ್ರ ಸರ್ಕಾರದಿಂದ ಹಣ ಪಡೆದಿದೆ. ಖುರ್ಷಿದ್ ಸಂಸ್ಥೆಯ ಪತ್ರಕ್ಕೆ ತಾವು ಸಹಿ ಮಾಡಿಲ್ಲ ಎಂದು ಈ ಅಧಿಕಾರಿ ಹೇಳಿದ್ದಾರೆ.ಈ ಸಂಬಂಧ ಖುರ್ಷಿದ್ ಪತ್ನಿಗೆ ಕಾರಣ ಕೇಳಿ ನೋಟಿಸ್ ಅನ್ನು ಸಹ ನೀಡಲಾಗಿತ್ತು. ಇದೆಲ್ಲ ಸುಳ್ಳು ಮಾಹಿತಿಯೇ ಎಂದು ಪ್ರಶ್ನಿಸಿರುವ ಕೇಜ್ರಿವಾಲ್, ಖುರ್ಷಿದ್ ರಾಜೀನಾಮೆ ನೀಡಲೇಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಅಗ್ಗದ ಜನಪ್ರಿಯತೆಗಾಗಿ: ಕಾಂಗ್ರೆಸ್

ಚೆನ್ನೈ (ಪಿಟಿಐ):
`ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ಅರವಿಂದ ಕೇಜ್ರಿವಾಲ್ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ಕೇಜ್ರಿವಾಲ್ ಅಗ್ಗದ ಜನಪ್ರಿಯತೆಯಾಗಿ ಇಂತಹ ಕೆಲಸಕ್ಕೆ ಇಳಿದಿದ್ದಾರೆ~ ಎಂದು ಕಾಂಗ್ರೆಸ್ ನಾಯಕ, ಪ್ರಧಾನಿ ಕಚೇರಿ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಟೀಕಿಸಿದ್ದಾರೆ.`ಅವರಿಗೆ ಪ್ರಜಾಪ್ರಭುತ್ವವೇ ತಿಳಿದಿಲ್ಲ, ಅವರಿಗೆ ಬರಿ ಪ್ರಚಾರ ಬೇಕಿದ್ದು ಇದಕ್ಕೆಲ್ಲ ಮಾಧ್ಯಮವನ್ನು ಬಳಸಿಕೊಳ್ಳುತ್ತಿದ್ದಾರೆ ಅಷ್ಟೆ~ ಎಂದು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry