ತನಿಖೆಗೆ ಹೆದರುವುದೇಕೆ?

7

ತನಿಖೆಗೆ ಹೆದರುವುದೇಕೆ?

Published:
Updated:

ಮುಖ್ಯಮಂತ್ರಿ ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಲು ಅನುಮತಿ ನೀಡಬಾರದು ಎಂಬ ಮನವಿಯನ್ನು ರಾಜ್ಯಪಾಲರಿಗೆ ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಹೊಸದೊಂದು ಸಂಪ್ರದಾಯವನ್ನು ಹಾಕಿದೆ. ರಾಜ್ಯ ಸಂಪುಟ ಇಂಥ ನಿರ್ಣಯವನ್ನು ಕೈಗೊಳ್ಳುವುದಕ್ಕೆ ರಾಜ್ಯಪಾಲರ ವರ್ತನೆಯೂ ಕಾರಣ.ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಮೈಸೂರು ವಿವಿಯ ಹಿಂದಿನ ಕುಲಪತಿ ವಿರುದ್ಧದ ತನಿಖೆಗೆ ತಡೆ ನೀಡಿದ ರಾಜ್ಯಪಾಲರು  ಕಾನೂನು ಪಾಲನೆಗೆ ಸಂಬಂಧಿಸಿ ಎಷ್ಟರಮಟ್ಟಿಗೆ ನಿಷ್ಪಕ್ಷಪಾತವಾಗಿ  ವರ್ತಿಸಬಹುದು ಎಂಬುದು ಚರ್ಚಾಸ್ಪದ. ಆದರೂ ರಾಜ್ಯ ಸಂಪುಟದ ನಿರ್ಣಯ ರಾಜ್ಯಪಾಲರ ನಿರ್ಧಾರದ ಮೇಲೆ ಪ್ರಭಾವ ಬೀರಲು ನಡೆಸಿದ ಪ್ರಯತ್ನ ಎಂಬುದು ನಿರ್ವಿವಾದ. ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಯೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಕ್ಕೆ ವಕೀಲರ ವೇದಿಕೆಯೊಂದು ರಾಜ್ಯಪಾಲರ ಅನುಮತಿ ಕೋರಿದ್ದರ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಂಡಿರುವುದನ್ನು ನೋಡಿದರೆ ಇಡೀ ಸಂಪುಟವೇ ಭ್ರಷ್ಟಾಚಾರದ ಆರೋಪಿಗಳ ರಕ್ಷಣೆಗಾಗಿ ಪಣತೊಟ್ಟು ನಿಂತಿದೆಯೇ ಎಂಬ ಅನುಮಾನಕ್ಕೆ ಆಸ್ಪದ ನೀಡಿದೆ.ಈ ಆರೋಪಗಳ ಕುರಿತಾಗಿ ಲೋಕಾಯುಕ್ತ ಮತ್ತು ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆಯುತ್ತಿರುವುದರಿಂದ ಮತ್ತೂ ಒಂದು ಬಗೆಯ ತನಿಖೆಗೆ ಆಸ್ಪದ ಕಲ್ಪಿಸುವುದು ಅನವಶ್ಯಕ ಎಂಬ ವಾದವನ್ನು ಸಂಪುಟ ಸಭೆಯ ನಿರ್ಣಯದಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯಮಂತ್ರಿಯೇ ಆರೋಪ ಎದುರಿಸಿರುವ ಪ್ರಕರಣಗಳಲ್ಲಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕಿರುವ ರಾಜ್ಯಪಾಲರು ರಾಜ್ಯ ಸಂಪುಟದ ಮನವಿ ರೂಪದ ನಿರ್ಣಯದಂತೆ ವರ್ತಿಸಬೇಕೇ ಅಥವಾ ಸಂವಿಧಾನದ ಚೌಕಟ್ಟಿನಲ್ಲಿ ನಿರ್ದೇಶಿಸಿದಂತೆ ತೀರ್ಮಾನ ಕೈಗೊಳ್ಳಬೇಕೇ ಎಂಬುದು ಸ್ವತಃ ಅವರೇ ನಿರ್ಧರಿಸಬೇಕಾದ ಪ್ರಶ್ನೆ.ತಮ್ಮ ವಿರುದ್ಧ ಮಾಡಿರುವ ಆರೋಪಗಳೆಲ್ಲ ಆಧಾರರಹಿತ ಎಂದೇ ಹೇಳಿಕೊಂಡು ಬಂದಿರುವ ಮುಖ್ಯಮಂತ್ರಿಯವರು ಅವುಗಳ ಪರಿಶೀಲನೆಗೆ ನ್ಯಾಯಾಂಗ ತನಿಖಾ ಆಯೋಗವನ್ನೇ ನೇಮಕ ಮಾಡಿದ್ದಾರೆ. ‘ಆರೋಪಗಳಲ್ಲಿ ಹುರುಳಿಲ್ಲ; ಅವೆಲ್ಲ ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ಸಹಿಸಲಾಗದ ವಿರೋಧಿಗಳ ಅಸಹನೆಯ ಮಾತು’ ಎಂಬುದನ್ನೇ ಪ್ರತಿಪಾದಿಸುತ್ತಿರುವ ಅವರು ರಾಜ್ಯಪಾಲರು ಇನ್ನೊಂದು ಬಗೆಯ ತನಿಖೆಗೆ ಅನುಮತಿ ನೀಡುವುದಕ್ಕೆ ಯಾಕೆ ವಿಚಲಿತರಾಗಬೇಕು ಎಂಬುದೇ ಅರ್ಥವಾಗದ ಸಂಗತಿ.ತಮ್ಮ ತೀರ್ಮಾನಗಳೆಲ್ಲ ಕಾನೂನು ವ್ಯಾಪ್ತಿಯಲ್ಲಿಯೇ ನಡೆದಿವೆ ಎಂಬುದು ಖಚಿತವಾಗಿದ್ದರೆ ಅದಕ್ಕೆ ಆತಂಕಪಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ವಿರುದ್ಧ ಸೂಕ್ತ ದಾಖಲೆಗಳ ಆಧಾರ ಇಲ್ಲದೆ ಮೊಕದ್ದಮೆ ಹೂಡುವಂತೆ ಅನುಮತಿ ನೀಡುವುದು ರಾಜ್ಯಪಾಲರಿಗೂ ಕಷ್ಟ. ತಮ್ಮ ಪರವಾಗಿ ಇಷ್ಟೆಲ್ಲ ಅನುಕೂಲ ಪರಿಸ್ಥಿತಿ ಇದ್ದರೂ ಸಂಪುಟ ಸಭೆಯ ನಿರ್ಣಯ ಕೈಗೊಂಡು ರಾಜ್ಯಪಾಲರಲ್ಲಿ ಮನವಿ ಮಾಡಿಕೊಳ್ಳುವುದು ಮುಖ್ಯಮಂತ್ರಿ ಅವರ ಸ್ಥಾನಕ್ಕೆ ಶೋಭೆ ತರುವ ಸಂಗತಿಯೂ ಅಲ್ಲ.ತಮ್ಮ ಆಡಳಿತ ಸ್ವಚ್ಛವಾಗಿದ್ದು, ಎಲ್ಲ ನಿರ್ಧಾರಗಳನ್ನೂ ಕಾನೂನು ವ್ಯಾಪ್ತಿಯಲ್ಲಿಯೇ ಕೈಗೊಂಡಿದ್ದರೆ ಮುಖ್ಯಮಂತ್ರಿಗಳು ಯಾವ ತನಿಖೆಗೂ ಏಕೆ ಹೆದರಬೇಕು? ರಾಜ್ಯಪಾಲರ ನಿರ್ಧಾರದ ಮೇಲೆ ಪ್ರಭಾವ ಬೀರುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳುವ ಮೇಲ್ಪಂಕ್ತಿ ಅನವಶ್ಯಕ ಕಸರತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry