ಬುಧವಾರ, ನವೆಂಬರ್ 20, 2019
28 °C
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ

ತನಿಖೆಯಲ್ಲಿ ಹಸ್ತಕ್ಷೇಪ: `ಸುಪ್ರೀಂ'ಗೆ ದೂರು

Published:
Updated:

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಸಿಬಿಐ ತನಿಖೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದರಿಂದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ನಿರ್ದೇಶನ ನೀಡಬೇಕು ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.ಕೇಂದ್ರ ಸರ್ಕಾರ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ನ್ಯಾಯಾಲಯ ನಿಂದನೆ ಎಸಗಿದೆ ಮತ್ತು ಕಾನೂನಿಗೆ ವಿರುದ್ಧವಾಗಿ ವರ್ತಿಸಿದೆ. ಆದ್ದರಿಂದ ವಿಶೇಷ ತನಿಖಾ ತಂಡಕ್ಕೆ ಹಗರಣದ ತನಿಖೆಯನ್ನು ವಹಿಸಬೇಕು ಎಂದು `ಕಾಮನ್ ಕಾಸ್' ಸ್ವಯಂ ಸೇವಾ ಸಂಸ್ಥೆಯು ಸಲ್ಲಿಸಿರುವ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.ನ್ಯಾಯಾಲಯಕ್ಕೆ ಸಲ್ಲಿಸಲು ಸಿಬಿಐ ಸಿದ್ಧಪಡಿಸಿರುವ ಯಥಾಸ್ಥಿತಿ ವರದಿಯನ್ನು ಸರ್ಕಾರ ಮನಬಂದಂತೆ ತಿರುಚಿದ್ದು, ಸರ್ಕಾರದ ಕಾನೂನು ಅಧಿಕಾರಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.ಹಗರಣದ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮತ್ತು ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದ ಸಿಬಿಐ ಅಧಿಕಾರಿಯನ್ನು ಈಗ ಬದಲಾಯಿಸಲಾಗಿದೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ವಿಶೇಷ ತನಿಖಾ ತಂಡ ರಚನೆ ಅಗತ್ಯವಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.ಹಗರಣದ ತನಿಖೆಗೆ ಕಾರಣರಾದ ವಕೀಲ ಎಂ. ಎಲ್. ಶರ್ಮಾ ಅವರು ಇದಕ್ಕೂ ಮೊದಲು ನ್ಯಾಯಮೂರ್ತಿ ಆರ್. ಎಂ. ಲೋಧಾ ನೇತೃತ್ವದ ಪೀಠದ ಎದುರು ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ದೂರು ನೀಡಿದರು.ಪ್ರಕರಣದ ವಿಚಾರಣೆ ಈ ತಿಂಗಳ 30ಕ್ಕೆ ನಿಗದಿಯಾಗಿರುವುದರಿಂದ ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲಾ ವಿಷಯಗಳನ್ನು 30ರಂದೇ ವಿಚಾರಣೆ ಮಾಡಲಾಗುವುದು ಎಂದು ನ್ಯಾಯಪೀಠ ತಿಳಿಸಿತು.ರಾಜೀನಾಮೆಗೆ ಆಗ್ರಹ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಸಿಬಿಐ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದರಿಂದ ಕಾನೂನು ಸಚಿವ ಅಶ್ವನಿ ಕುಮಾರ್ ಅವರು ರಾಜೀನಾಮೆ ನೀಡಬೇಕು ಮತ್ತು ಹಗರಣದ ತನಿಖೆಗೆ ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಪ್ರತಿಕ್ರಿಯಿಸಿ (+)