ಗುರುವಾರ , ಮೇ 13, 2021
22 °C

ತನಿಖೆ, ಗುಪ್ತಚರ ಸಂಸ್ಥೆ ಬಲವರ್ಧನೆ: ಪ್ರಧಾನಿ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್ ಎಸ್): ರಾಷ್ಟ್ರದ ತನಿಖೆ ಮತ್ತು ಜಾಗೃತಾ ಸಂಸ್ಥೆಗಳನ್ನು ಮಾವೋವಾದಿಗಳು ಮತ್ತು ಭಯೋತ್ಪಾದಕರನ್ನು ಎದುರಿಸಲು ಸಾಧ್ಯವಾಗುವಂತೆ ಬಲಪಡಿಸಬೇಕಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ಇಲ್ಲಿ ಹೇಳಿದರು.ರಾಷ್ಟ್ರೀಯ ಭಾವೈಕ್ಯ ಮಂಡಳಿಯ 15ನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ~ನಮ್ಮ ತನಿಖಾ ಸಂಸ್ಥೆ ಮತ್ತು ಗುಪ್ತಚರ ಸಂಸ್ಥೆಗಳನ್ನು ನಿರಂತರವಾಗಿ ಸುಧಾರಿಸುತ್ತಿರಬೇಕು. ಭಯೋತ್ಪಾದಕರು ಮತ್ತು ನಕ್ಷಲೀಯರು ಅನುಸರಿಸುವ ಹೊಸ ವಿಧಾನಗಳು ಮತ್ತು ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ತವಾಗುವಂತೆ ಮೇಲ್ದರ್ಜೆಗೆ ಏರಿಸುತ್ತಿರಬೇಕು~ ಎಂದು ಅಭಿಪ್ರಾಯಪಟ್ಟರು.ಗುಪ್ತಚರ ವ್ಯವಸ್ಥೆಯಲ್ಲಿ ಸ್ವಲ್ಪವೂ ಲೋಪ ಉಂಟಾಗಬಾರದು ಎಂಬುದನ್ನು ದೆಹಲಿ ಬಾಂಬ್ ಸ್ಫೋಟ ತೋರಿಸಿಕೊಟ್ಟಿದೆ. ನಮ್ಮ ಭದ್ರತಾ ವಿಧಾನಗಳ ಆತ್ಮವಿಮರ್ಶೆ ನಡೆಸುತ್ತಿರಬೇಕು. ವಿಭಾಜಕ ಶಕ್ತಿಗಳು  ಯುವಕರನ್ನು ದಾರಿತಪ್ಪಿಸದಂತೆ ನಿರಂತರ ಎಚ್ಚರಿಕೆ ಅಗತ್ಯ ಎಂದೂ ಪ್ರಧಾನಿ ಹೇಳಿದರು.ಪ್ರೀತಿಪಾತ್ರರ ಜೀವ ಹಾನಿಯನ್ನು ಯಾವುದೇ ನಾಗರಿಕ ಸಮಾಜವೂ ತಾಳಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟಿನ ಹೊರಭಾಗದಲ್ಲಿ 13 ಮಂದಿಯನ್ನು ಬಲಿತೆಗೆದುಕೊಂಡ ಬಾಂಬ್ ಸ್ಫೋಟವನ್ನು ಪ್ರಸ್ತಾಪಿಸುತ್ತಾ ಸಿಂಗ್ ಹೇಳಿದರು.ರಾಷ್ಟ್ರೀಯ ಭಾವೈಕ್ಯ ಮಂಡಳಿ ಸಭೆಯು ಕೋಮುಸೌಹಾರ್ದ ವೃದ್ಧಿ ಕ್ರಮಗಳು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟರ ಬಗೆಗಿನ ತಾರತಮ್ಯ ನಿವಾರಣಾ ಕ್ರಮಗಳ ಬಗೆಗೂ ಚರ್ಚಿಸುವುದು. 2008ರ ಅಕ್ಟೋಬರ್ 13ರಂದು ಭಾವೈಕ್ಯ ಮಂಡಳಿಯ ಹಿಂದಿನ ಸಭೆ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.