ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶ

7
ತ್ಯಾಜ್ಯ ವಿಲೇವಾರಿ: ಗುತ್ತಿಗೆಯಲ್ಲಿ ಅವ್ಯವಹಾರ ಆರೋಪ

ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶ

Published:
Updated:

ಬೆಂಗಳೂರು: ನಗರದ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮಾಜಿ ಮೇಯರ್ ಪಿ.ಆರ್. ರಮೇಶ್ ಸಲ್ಲಿಸಿರುವ ದೂರಿನ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.ತ್ಯಾಜ್ಯ ವಿಲೇವಾರಿಗೆ ಗುರುತಿಸಲಾಗಿದ್ದ ಐದು ಸ್ಥಳಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣ ಸಲ್ಲದು ಎಂಬ ನಿಯಮ ಇತ್ತು. ರಾಜ್ಯ ಸರ್ಕಾರ ಒಂದು ಕಿ.ಮೀ. ಮಿತಿಯನ್ನು 50 ಮೀಟರ್‌ಗೆ ಇಳಿಸಿತು. ಇಲ್ಲಿ ಅವ್ಯವಹಾರ ನಡೆದಿದೆ ಎಂದು ರಮೇಶ್ ಅವರು ಆರೋಪ ಮಾಡಿದ್ದರು.1 ಕಿ.ಮೀ. ಮಿತಿಯನ್ನು 50 ಮೀಟರ್‌ಗೆ ಇಳಿಸಿದ್ದೇ ತ್ಯಾಜ್ಯ ವಿಲೇವಾರಿ ಘಟಕಗಳ ಸುತ್ತಲಿನ ಜನ ಪ್ರತಿಭಟನೆಗೆ ಮುಂದಾಗಲು ಕಾರಣ. ಅಲ್ಲದೆ, ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ  ಕೂಡ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎಂದು ಅವರು ದೂರಿನಲ್ಲಿ ಹೇಳಿದ್ದರು. ಘನ ತ್ಯಾಜ್ಯ ನಿರ್ವಹಣೆಗೆ ಸೆಪ್ಟೆಂಬರ್ 18ರಂದು ಟೆಂಡರ್ ಕರೆಯುವ ಪ್ರಕ್ರಿಯೆಯಲ್ಲಿ `ಸಾರ್ವಜನಿಕ ಖರೀದಿಗಳಲ್ಲಿ ಪಾರದರ್ಶಕತೆ ಕಾಯ್ದೆ'ಯನ್ನು ಉಲ್ಲಂಘಿಸಲಾಗಿದೆ.ಸ್ಥಾಪಿತ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಟೆಂಡರ್‌ನಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ ಎಂದೂ ದೂರಿನಲ್ಲಿ ಆರೋಪ ಮಾಡಲಾಗಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಜನೀಶ ಗೋಯಲ್, ಘನ ತ್ಯಾಜ್ಯ ನಿರ್ವಹಣೆಯ ಮುಖ್ಯ ಎಂಜಿನಿಯರ್ ಅನಂತಸ್ವಾಮಿ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತಾ ಪ್ರಸಾದ್ ಮತ್ತು ಇತರರು ಕಾರಣ ಎಂದು ಆರೋಪ ಮಾಡಲಾಗಿದೆ.ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್  ಅವರು, ತನಿಖೆಗೆ ಆದೇಶ ನೀಡಿದರು. ವರದಿಯನ್ನು ಜನವರಿ 24ರ ಒಳಗೆ ಸಲ್ಲಿಸಬೇಕು ಎಂದು ಅವರು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry