ತನಿ ಹಬ್ಬ: ಹುತ್ತಕ್ಕೆ ಕೋಳಿ ರಕ್ತದ ನೈವೇದ್ಯ

7

ತನಿ ಹಬ್ಬ: ಹುತ್ತಕ್ಕೆ ಕೋಳಿ ರಕ್ತದ ನೈವೇದ್ಯ

Published:
Updated:

ಚಾಮರಾಜನಗರ: ಹುತ್ತಕ್ಕೆ ಹಾಲು ಎರೆದು ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಗಡಿ ಜಿಲ್ಲೆಯಲ್ಲಿ ಹುತ್ತಕ್ಕೆ ಕೋಳಿಯ ಬಿಸಿರಕ್ತದ ನೈವೇದ್ಯ ಅರ್ಪಿಸಿ 'ತನಿ ಹಬ್ಬ' ಆಚರಿಸುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಂಗಳವಾರ 'ತನಿಹಬ್ಬ'ದ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆಯೇ ಹೊಸಬಟ್ಟೆ ಧರಿಸಿದ್ದ ಮಕ್ಕಳು, ಮಹಿಳೆಯರು ಹುತ್ತದತ್ತ ಪೂಜಾ ಸಾಮಗ್ರಿಗಳೊಂದಿಗೆ ಹೆಜ್ಜೆ ಹಾಕಿದರು. ಕೈಯಲ್ಲಿ ಕೋಳಿ ಹಾಗೂ  ಮೊಟ್ಟೆಯೂ ಇತ್ತು. ಸಾಂಪ್ರದಾಯಿಕವಾಗಿ ಹುತ್ತಕ್ಕೆ ಪೂಜೆ ಸಲ್ಲಿಸಿದ ನಂತರ, ಕೋಳಿಯ ಕತ್ತುಕೊಯ್ದು ರಕ್ತವನ್ನು ಹುತ್ತದ ಕೋವಿಗಳಿಗೆ ಬಿಟ್ಟರು. ಬಳಿಕ, ಮೊಟ್ಟೆ, ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಸಣ್ಣದಾದ `ನಾಗರಹೆಡೆ' ಆಭರಣವನ್ನು ಕೋವಿಗೆ ಹಾಕಿದರು.ಷಷ್ಠಿ ದಿನದಂದು ಕೋಳಿ ಬಲಿ ನೀಡಿದರೆ ನಾಗರಹಾವು ಕಾಣಿಸಿಕೊಳ್ಳುವುದಿಲ್ಲ. ಈ ಹಬ್ಬ ಆಚರಣೆ ಮಾಡದಿದ್ದರೆ ಹಾವು ಕಾಣಿಸಿಕೊಂಡು ನಾಗದೋಷ ಕಾಡುತ್ತದೆ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ಈ ಹಿನ್ನೆಲೆಯಲ್ಲಿ ಹಲವು ತಲೆಮಾರುಗಳಿಂದಲೂ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.ಕೋಳಿ ಬಲಿ ನೀಡದಿರುವ ಜನರು ಕೂಡ ಹಬ್ಬ ಆಚರಿಸುವುದು ಉಂಟು. ಅಂತಹ ಭಕ್ತರು ಕೋಳಿ ಬದಲಿಗೆ ಹುತ್ತಕ್ಕೆ ಬಾಳೆಹಣ್ಣು-ಸಕ್ಕರೆ, ಹಾಲು-ಸಕ್ಕರೆಯ ನೈವೇದ್ಯ ಅರ್ಪಿಸಿದರು.ಹುತ್ತದ ಕೋವಿಗಳಿಗೆ ನಾಗರಹೆಡೆ ಆಕಾರದ ಆಭರಣ ಹಾಕಿದರು. ಕೆಲವು ಗ್ರಾಮಗಳಲ್ಲಿ ಒಂದೇ ಹುತ್ತದ ಬಳಿಯಲ್ಲಿಯೇ ಕೋಳಿ ಬಲಿ ಹಾಗೂ ಸಿಹಿ ಪದಾರ್ಥ ಅರ್ಪಿಸಿ ಹಬ್ಬ ಆಚರಿಸುವ ಸಂಪ್ರದಾಯವೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry