ತನು ಕರಗದವರಲ್ಲಿ...

7
ಸಂಕ್ರಾಂತಿ ಪ್ರಬಂಧ ಸ್ಪರ್ಧೆ 1ನೇ ಬಹುಮಾನ

ತನು ಕರಗದವರಲ್ಲಿ...

Published:
Updated:

‘ಕನ್ನಡ ಮಾತಿಗೆ ಹನ್ನೆರಡು ಅರ್ಥ’ ಎಂಬ ಗಾದೆಯನ್ನು ಕೇಳಿ ಬಲ್ಲವರು ನನ್ನನ್ನು ಕ್ಷಮಿಸುತ್ತಾರೆಂಬ ನಂಬಿಕೆಯಿಂದ ಅಕ್ಕನ ವಚನದ ಈ ಸಾಲನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ. ‘ತನು ಕರಗದವರಲ್ಲಿ ಪುಪ್ಪವನೊಲ್ಲೆಯಯ್ಯಾ ನೀನು... ಅಕ್ಕಮಹಾದೇವಿ ಹಾಡುವ ಆ ಕಾಲಕ್ಕೇ ‘ತನು ಕರಗಿಸುವ’ (ತೂಕ ಇಳಿಸುವ?) ಕಲ್ಪನೆ ಇರಬಹುದೇ? ಆಗಿನ ಭಕ್ತ ಭಕ್ತೆಯರು ದೇಹ  ದಂಡನೆಯನ್ನು ಉಪಾಸನೆಯ ಒಂದು ಭಾಗವಾಗಿ ಪರಿಗಣಿಸಿದ್ದರೆಂಬುದಕ್ಕೆ ಪುರಾವೆಗಳು ಸಿಗುತ್ತವೆ.

(ಅನ್ನಾಹಾರ ತ್ಯಜಿಸಿ ಒಂದೇ ಕಾಲಲ್ಲಿ ನಿಲ್ಲುವುದು ಇತ್ಯಾದಿ ನೆನಪಿಸಿಕೊಳ್ಳಿ) ಆದರೆ ಈಗಿನ ಡಯಟ್‌, ಜಾಗಿಂಗ್‌, ವಾಕಿಂಗ್‌ಗಳ ಮೂಲಕ ತನು ಕರಗಿಸುವ ಕಲ್ಪನೆ ಅಂದಿನವರಿಗೆ ಇದ್ದಂತಿರಲಿಲ್ಲ. ಹಿತಮಿತವಾಗಿ ತಿಂದುಂಡು ‘ಕಾಯಕವೇ ಕೈಲಾಸ’ ಎನ್ನುತ್ತಾ ದುಡಿದು ಉಣ್ಣುತ್ತಿದ್ದ ಜನರೇ ಜಾಸ್ತಿ. ತೀರಾ ರಾಣೀವಾಸದವರು, ರಾಜಕುಮಾರಿಯರು ಸಖಿಯರ ಜತೆ ಉದ್ಯಾನಗಳಿಗೆ ತೆರಳಿ ‘ವಿಹಾರ’ಗೈಯುತ್ತಿದ್ದರೇ ವಿನಹ ಅದು ಈಗಿನಂತೆ ವೈದ್ಯ ನಿರ್ದೇಶಿತ ‘ವಾಕಿಂಗ್‌’ಗೋಸ್ಕರ ಆಗಿರಲಿಲ್ಲ. ಅದೊಂದು ವಿನೋದಕ್ಕಾಗಿ ನಡೆಸುವ ವಾಯು ವಿಹಾರವಾಗಿರುತ್ತಿತ್ತು ಅಷ್ಟೆ.

ವನವಿಹಾರ, ಚೆಂಡಾಟ, ಜಲಕ್ರೀಡೆಗಳಿದ್ದವಾದರೂ ಅವು ದೇಹ ದಂಡನೆಗಳಾಗಿರಲಿಲ್ಲ, ಮನರಂಜನೆಗಾಗಿತ್ತು. ಹಾಗೆ ವಾಯುವಿಹಾರಕ್ಕೆ ತೆರಳಿದ ರಾಜಕುಮಾರಿಯರು ಪ್ರೇಮ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ‘ವಿಹಾರ ವಾಂಗ್ಮಯ’ಗಳೂ ಬೇಕಾದಷ್ಟಿವೆ. ಬಡಪಾಯಿ ವನವಾಸಿ ಶಕುಂತಲೆ ಕಾಡಲ್ಲಿ  ವಿಹಾರ ನಡೆಸಿದ್ದಾ ಗ ದುಷ್ಯಂತ ಬಂದು ದುರಂತಕ್ಕೆಳಸುವ ಪ್ರಸಂಗ ನಡೆಯಿತಷ್ಟೆ.

ಪಾಪ, ಶಕುಂತಲೆ ನಾಗರಿಕ ಪ್ರಪಂಚದ ನಖರಾಗಳನ್ನು ಅರಿಯದ ಮುಗ್ಧೆ (ದುಂಬಿ ಬಂದರೆ ಓಡಿಸಲೂ ಅರಿಯದವಳು) ಸಾಕು ತಂದೆ ಕಣ್ವರ ಆಶ್ರಮ­ದಲ್ಲಿ ಕಂದಮೂಲಗಳನ್ನು ತಿಂದು ಬೆಳೆದ ತರಳೆ. ಎಂಥೆಂಥ ಅಪವಾದ, ಅವಮಾನ, ಶಾಪ ತಾಪಗಳನ್ನು ಎದುರಿಸಬೇಕಾಯ್ತು. ಜತೆಗಿದ್ದ ಸಖಿಯರು ಅನಸೂಯ, ಪ್ರಿಯಂವದೆಯರು ತಿಳಿ ಹೇಳಲಿಲ್ಲವೆಂದಲ್ಲ. ಪಾಪ ಅವರೂ ಮಹಾ ತಿಳಿವಳಿಕೆಯುಳ್ಳ­ವ­ರೇನಲ್ಲ. ಆದರೂ ಒಂದಿಷ್ಟು ಬುದ್ಧಿವಾದ ಹೇಳುತ್ತಾರೆ. ಅಂತೂ ಅವರ ವನವಿಹಾರ ಮುಂದೊದಗಲಿರುವ ‘ದುಷ್ಯಂತ ದುರಂತ’ಕ್ಕೆ ಕಾರಣವಾಗಿ ಬಿಡುತ್ತದೆ.ಹೀಗೆ ‘ಕಾವ್ಯಗಳಲ್ಲಿ ವನವಿಹಾರ’ದ ಬೆನ್ನು ಹತ್ತಿದರೆ ಸ್ವಾರಸ್ಯಕರ ಸಂಗತಿಗಳನೇಕ ಸಿಗುತ್ತವೆ. ಉದಾ: ಚಂದ್ರಹಾಸ – ವಿಷಯೆ ಪ್ರಕರಣ. ಚಂದ್ರಹಾಸನನ್ನು ಕೊಲ್ಲಿಸುವ ಉದ್ದೇಶದಿಂದ ದುಷ್ಟಬುದ್ಧಿ ತನ್ನ ಮಗನಿಗೆ ಒಂದು ಪತ್ರ ಬರೆದು ಆ ಪತ್ರವನ್ನು ಚಂದ್ರಹಾಸನ ಬಳಿಯೇ ಕಳಿಸಿಕೊಡುತ್ತಾನೆ. ಅದರಲ್ಲಿ ಮಗನಿಗೆ ‘ಈ ಪತ್ರ ತಂದ ಚಲುವನಿಗೆ ವಿಷವನ್ನು ನೀಡಿ ಮುಗಿಸು’ ಎಂಬ ಸೂಚನೆ ಇರುತ್ತದೆ. ಪತ್ರ ತಂದ ಮುಗ್ಧ ಯುವಕ ಚಂದ್ರಹಾಸ ಪ್ರಯಾಣದ ಬಳಲಿಕೆಯಿಂದ ಊರ ಹೊರಗಿನ ಉದ್ಯಾನದಲ್ಲಿ ಮಲಗಿ ನಿದ್ದೆ ಹೋಗಿರುವಾಗ, ದುಷ್ಟಬುದ್ಧಿಯ ಮಗಳು ‘ವಿಷಯೆ’ ಆ ಉದ್ಯಾನವನಕ್ಕೆ ಸಖಿಯರ ಜತೆ ವಿಹಾರ ಬರುತ್ತಾಳೆ.

ಈ ಯುವಕನತ್ತ ಆಕರ್ಷಿತಳಾಗಿ ಯಾರಿರಬಹುದೆಂಬ ಕುತೂಹಲದಿಂದ ಪರೀಕ್ಷಿಸುತ್ತಾಳೆ. ಆತನ ಉತ್ತರೀಯಕ್ಕೆ ಕಟ್ಟಲಾದ ಪತ್ರ ಅವಳಿಗೆ ದೊರಕುತ್ತದೆ. ಓದಲಾಗಿ ಅವಳಪ್ಪನ ಕೈಬರಹ ಅಣ್ಣನಿಗೆ ಬರೆದದ್ದು! ‘ಈ ಪತ್ರ ತಂದಾತ ಬಲು ಒಳ್ಳೆಯ ಹುಡುಗ. ನೀನು ತಡಮಾಡದೆ ಇವನಿಗೆ ವಿಷವನ್ನು ಕೊಡುವುದು’ ಎಂದು ಬರೆದಿರುತ್ತದೆ. ಇಷ್ಟು ಚಂದದ ಹುಡುಗ ಒಳ್ಳೆಯವನು ಅಂತ ಶಿಫಾರಸು ಬೇರೆ. ವಿಷ ಕೊಡು... ಇರಲಿಕ್ಕಿಲ್ಲ. ಬರೆಯುವಾಗ ಏನೋ ಮಿಸ್ಟೇಕು ಆಗಿರಬೇಕು ಎಂದು ತರ್ಕಿಸಿದ ರಾಜಕುಮಾರಿ ತನ್ನ ಕಣ್ಣಿನ ಕಾಡಿಗೆಯಿಂದ ಆ ಪತ್ರವನ್ನು ತಿದ್ದಿ ಬಿಡುತ್ತಾಳೆ. ಅದೂ ಏನಂತ?– ‘ಈ ಪತ್ರ ತಂದ ಚೆಲುವನಿಗೆ ‘ವಿಷಯೆ’ಯನ್ನು ಕೊಡುವುದು’.

ನಿದ್ರಿಸಿದ್ದ ಚಂದ್ರಹಾಸನ ಭಾಗ್ಯರೇಖೆಯನ್ನೇ ಈ ತಿದ್ದುಪಡಿ ತಿದ್ದುಬಿಟ್ಟಿದೆ. ವಿಷ ಹೋಗಿ ವಿಷಯೆ ದೊರೆಯುತ್ತಾಳೆ. ಅದ್ದೂರಿ ವಿವಾಹ ನೆರವೇರಿಬಿಡುತ್ತದೆ. ವಿಧಿಲಿಖಿತದೆದುರು ದುಷ್ಟಬುದ್ಧಿಯ ಲಿಖಿತ ಪತ್ರದ ಆಟ ನಡೆಯುವುದಿಲ್ಲ. ದುಷ್ಟಬುದ್ಧಿಗೆ ಕೈಕೊಟ್ಟ ವಿಧಿಯನ್ನು ನೆನೆದು ಕೈಕೈ ಹಿಚುಕಿಕೊಳ್ಳುವುದೊಂದೇ ಉಳಿದಿರುತ್ತದೆ. ವಿಷಯೆಯ ವನವಿಹಾರದ ವಿಷಯ ಇದು.ಇರಲಿ ‘ತನು ಕರಗಿಸುವ’ ವಿಚಾರಕ್ಕೆ ಹೊರಟ ನಾವು ‘ವನವಿಹಾರ’ದತ್ತ ಹೊರಳಿಬಿಟ್ಟೆವು. (‘ವಿಷಯೆ’ಯಿಂದಾಗಿ ವಿಷಯಾಂತರವಾಗಿ ಬಿಟ್ಟಿತು ಕ್ಷಮಿಸಿ) ಅಂದಿನಿಂದಲೂ ವನವಿಹಾರಕ್ಕೆ ತೆರಳುವವರಿಗೆ ಇಂಥ ರೋಚಕ ಅನುಭವಗಳು ಆಗುತ್ತಲೇ ಇದ್ದವು ಎಂಬುದನ್ನು ಓದುಗ ಬಂಧುಗಳ ಗಮನಕ್ಕೆ ತರುವುದಷ್ಟೇ ನನ್ನ ಉದ್ದೇಶ. ಇಂದಿನ ನಮಗೆ ‘ವಿಹಾರ ಮಾಡಲು’ ಸಮಯವಾದರೂ ಎಲ್ಲಿ? ಸಮಯವಿದ್ದರೂ ವನಗಳಾದರೂ ಎಲ್ಲಿವೆ?ಇಂದು ಜಗತ್ತನ್ನು ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಅತಿ ಹೆಚ್ಚು ಚರ್ಚಿತವಾಗುವುದು ಯಾವುದು ಎಂಬ ಪ್ರಶ್ನೆ ಕೇಳಿದರೆ ನಾನಂತೂ ‘ಬೊಜ್ಜು ನಿರ್ವಹಣೆ’ ಎಂದೇ ಹೇಳಬಹುದು. ಶ್ರೀಮಂತ ರಾಷ್ಟ್ರಗಳ ‘ಅತಿ’ಗಳಲ್ಲಿ ಈ ‘ಅತಿ ಕಾಯರದ್ದು’ ಮೇಲ್ಪಂಕ್ತಿ. ನಾವೇನೋ ಬಡಪಾಯಿ ರಾಷ್ಟ್ರಗಳವರು. ನಮ್ಮ ಸಮಸ್ಯೆಯೇನಿದ್ದರೂ ಮಾಲ್‌ನ್ಯೂಟ್ರಿಶನ್‌ ಎಂಬ ಕೊರತೆ ಕಾರಣದಿಂದ ಬರುವ ನಿಶ್ಶಕ್ತಿಪರ ಕಾಯಿಲೆಗಳು ಎಂದು ತಿಳಿದಿದ್ದೆವು. ಆದರೆ ಉಹೂಂ, ನಮ್ಮಲ್ಲಿಯೂ ಆಹಾರದ ಕೊರತೆಯಿಂದ ಬಳಲುವ ಬಡವರಿಗಿಂತಲೂ ಅತಿ ಆಹಾರ ಸೇವನೆಯಿಂದ ಬರುವ ಎಕ್ಸೆಸ್‌ ಕ್ಯಾಲೊರಿಗಿರಿಯ ಪ್ರತಾಪವೂ ಅಷ್ಟೇ ಇದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.ನನ್ನ ಸಹಪಾಠಿ ಸ್ನೇಹಿತೆಯೊಬ್ಬಳು ವೈದ್ಯಕೀಯ ಓದಿ ಗೋಲ್ಡ್ ಮೆಡಲ್‌ ಪಡೆದವಳು. ಸ್ವಂತ ನರ್ಸಿಂಗ್‌ ಹೋಮ್‌ ಇಟ್ಟುಕೊಂಡು, ರೋಗಿಗಳೇ ಬರದ್ದರಿಂದ ಒಂದೆರಡು ವರ್ಷ ಕಂಗಾಲಾಗಿ ಆ್ಯಂಟಿ ಡಿಪ್ರೆಶನ್‌ ಮಾತ್ರೆ ತೆಗೆದುಕೊಳ್ಳುವ ಹಂತ ತಲುಪಿದ್ದಳು. ನನಗೋ ಅವಳ ಸ್ಥಿತಿಗೆ ಏನಾದರೂ ಸಹಾಯ ಮಾಡುವ ಆಸೆ. ಆದರೆ ವೈದ್ಯವೃತ್ತಿಯ ಹೊರಗಿರುವ ಸಮಾಜಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡ ನಾನಾದರೂ ಏನು ಮಾಡಬಹುದು ಎಂಬ ಚಿಂತೆ ನನ್ನನ್ನು ಬಾಧಿಸತೊಡಗಿತು. ಆಗ ನೆರವಿಗೆ ಬಂದಿದ್ದೇ, ಪೇಪರಿನಲ್ಲಿ ದಿನಾ ಓದುವ ಸಚಿತ್ರ ಜಾಹೀರಾತುಗಳು. ಪೇಜಿನ ಮೇಲ್ಭಾಗದಲ್ಲಿ ‘ನೀವು ತುಂಬಾ ತೆಳ್ಳಗಿದ್ದೀರಾ? ನಮ್ಮ ಮಾಂಸವರ್ಧಿನಿ ಕಷಾಯ ಕುಡಿಯಿರಿ.

ದಷ್ಟಪುಷ್ಟರಾಗಿ ಹಿಮಾಲಯ ಏರುವ ಭಾಗ್ಯಶಾಲಿಗಳಾಗುತ್ತೀರಿ...’ ಎಂದೂ, ಅದೇ ಪೇಜಿನ ಕೆಳಭಾಗದಲ್ಲಿ ‘ನೀವು ತುಂಬಾ ದಪ್ಪ ಇದ್ದೀರಾ? ಚಿಂತೆ ಬೇಡ ನಮ್ಮಲ್ಲಿ ಬನ್ನಿ. ಸ್ಥೌಲ್ಯಹರ ಶ್ವಾಧ ಕುಡಿಯಿರಿ, ತೆಳುವಾಗಿ ತೇಲಿರಿ, ಜಿಂಕೆಯಂತೆ ಜಿಗಿಯಿರಿ...’ ಎಂದಿರುತ್ತಿತ್ತು. ‘ನೀನು ಈ ಕ್ಷೇತ್ರದಲ್ಲಿ ಸ್ಪೆಷಲಿಸ್‌್ಟ ಎಂದು ಬೋರ್ಡು ತಗುಲಿಸಿಕೋ. ಜನ ಕ್ಯೂ ನಿಲ್ಲದಿದ್ದರೆ ಹೇಳು’ ಎಂದೊಂದು ಸಲಹೆ ಕೊಟ್ಟೆ.ಸರಿ ನನ್ನೀ ಸ್ಥೂಲ ಸಲಹೆಯನ್ನು ಸ್ವೀಕರಿಸಿದ ನನ್ನ ಸ್ನೇಹಿತ ವೈದ್ಯೆ ಅದಕ್ಕೆ ಸಂಬಂಧಿಸಿದ ಕೋರ್ಸೊಂದನ್ನು ಮಾಡಿ ಬಂದು ದೊಡ್ಡದಾಗಿ ‘ಇಲ್ಲಿ ಬೊಜ್ಜು ಕರಗಿಸಲಾಗುತ್ತದೆ’ (ತನು ಕರಗದವರಿಗೆ ಸ್ವಾಗತ ಎಂದು ಬರಿಯೇ ತಾಯಿ ಎಂದು ನಾನು ಒತ್ತಾಯಿಸಿದರೆ, ಜಾಹೀರಾತಿಗೆ ಕಾವ್ಯದ ಶೈಲಿ ಸಲ್ಲದು ಎಂದು ತಿರಸ್ಕರಿಸಿಬಿಟ್ಟಳು) ಎಂದು ಒಂದು ಡುಮ್ಮಣ್ಣನ ಚಿತ್ರದ ಸಮೇತ, ಒಂದು ಪಾರ್ಶ್ವದಲ್ಲಿ ಕಟೌಟ್‌ ನಿಲ್ಲಿಸಿದಳು. ಕಾಂಪೌಂಡಿನ ಇನ್ನೊಂದು ಬದಿಗೆ, ತೆಳ್ಳಗೆ ಕಡ್ಡಿಯಂತಿರುವ ಹುಡುಗಿಯ ಚಿತ್ರ ಬರೆಸಿ ‘ತೆಳ್ಳಗಿದ್ದು ಚಿಂತೆಯೇ?, ಬನ್ನಿ ದಪ್ಪಗಾಗಿಸುತ್ತೇವೆ’ ಎಂದು ಬರೆಸಿದಳು.ಒಂದು ವಾರವಾಗುವಷ್ಟರಲ್ಲಿ ಎರಡು ಕ್ಯೂಗಳು ಹಚ್ಚಲ್ಪಟ್ಟವು. ಡುಮ್ಮ ಡುಮ್ಮಿಯರ (ಹಾಗೆ ಕರೆಯಲು ನನ್ನ ಸ್ನೇಹಿತೆ ವೈದ್ಯೆಯ ಆಕ್ಷೇಪವಿದೆಯಾದ್ದರಿಂದ ಅವರನ್ನು ‘ಒಬೆಸ್ಸ್’ ಎಂದರೆ ಎಸ್ಸೆಸ್ಸ್ ಎನ್ನುತ್ತಾಳೆ) ಸಾಲು ಇದ್ದಷ್ಟು ಉದ್ದ ನರಪೇತಲ ಕಡ್ಡಿಗಳ (ಲೀನ್‌ ಆಗಿರುವ ‘ಲೀನೆ’ಯರು) ಸಾಲು ಬಲು ಚಿಕ್ಕದಿತ್ತು. ನಾನು ಸಮಯ ಸಿಕ್ಕಾಗೆಲ್ಲ ಅವಳ ನರ್ಸಿಂಗ್‌ ಹೋಮಿಗೆ ಹೋಗಿ ಕುಳಿತು ನಾನು ಯಾವ ಸಾಲಿಗೆ ಸೇರುತ್ತೇನೆಂದು ಚಿಂತಿಸುತ್ತಾ, ಕ್ಯೂನಲ್ಲಿ ನಿಂತು ಕಾಯುವ ‘ಕಾಯ’ಗಳನ್ನೇ ಅಧ್ಯಯನ ಮಾಡುತ್ತಿದ್ದೆ. ಎರಡು ಅತಿಗಳ ನಡುವೆ ಹದಾ ಇರುವವರನ್ನು ಕಂಡರೆ ಹಾಯೆನಿಸುತ್ತಿತ್ತು.ಸ್ವಾರಸ್ಯಕರ ಅಂಶಗಳನೇಕ ಅಲ್ಲಿ ಅನಾವರಣಗೊಳ್ಳುತ್ತಿದ್ದವು. ಸಾಮಾನ್ಯವಾಗಿ ಗಂಡ ‘ಅತಿಕಾಯ’ನಾಗಿದ್ದರೆ ಹೆಂಡತಿ ಹೈರಾಣಾದ ಹರಿಣಿಯಂತಿರುತ್ತಿದ್ದಳು. ಹೆಂಡತಿ ಗಜಗಮನೆಯಾಗಿದ್ದರೆ ಗಂಡ ನರಪೇತಲನಂತೆ ಪೇಲವನಾಗಿರುತ್ತಿದ್ದ. ಮುಟ್ಟಿದರೆ ರಕ್ತ ಚಿಮ್ಮುವುದೇನೋ ಎಂಬಂತೆ ಊದಿಕೊಂಡಿದ್ದ ಚಿನ್ನಾರಿ ಮುತ್ತುಗಳೂ ಬರುತ್ತಿದ್ದವು. ಆ ಕಡೆ ಸಾಲಿನ ‘ಲೀನೆ’ಯರಿಗೆ ಒಂದಿಷ್ಟು ಧಾನ್ಯ ದವಸಗಳ ಪುಡಿ ಕುಡಿಯಲು ಕಷಾಯ ನೀಡಿ, ಸೇಂಗಾ ನೆನೆಸಿ ತಿನ್ನಿ, ಸಖತ್‌ ಹಾಲು– ಜ್ಯೂಸು ಕುಡಿದು (ಮಜಾ ಮಾಡಿ) ತೂಕ ಹೆಚ್ಚಿಸಿಕೊಳ್ಳಿ’ ಎಂಬ ಸಲಹೆ  ನೀಡಲಾಗುತ್ತಿದ್ದುದರಿಂದ ಅಲ್ಲಿಂದ ಹೊರ ಬೀಳುವ ಕಡ್ಡಿಗಳ ಮುಖ, ಕಣ್ಣುಗಳಲ್ಲಿ ಆನಂದದ ಕಿರಣಗಳು ಸೂಸುತ್ತಿದ್ದವು.ಸಮಸ್ಯೆ ಬರುತ್ತಿದ್ದುದು ಈ ಕಡೆ ಒಬೆಸ್ಸುಗಳು ಬುಸು ಬುಸು ಎನ್ನುತ್ತಾ ಮೆಟ್ಟಿಲೇರಿ ಬಂದು ಉಸ್ಸಪ್ಪ ಎಂದ ಬಳಿಕ. ಅಷ್ಟರಲ್ಲಾಗಲೇ ರಿಸೆಪ್ಶನಿಸ್ಟ್ ಬಳಿ ಬಂದು ಪ್ರಶ್ನಾವಳಿಯನ್ನು ಆತ/ಆಕೆ ತುಂಬಿ ತರಬೇಕಿತ್ತು. ಅದರಲ್ಲಿ ನೋಡಲು ತಲೆಹರಟೆಯಂತೆ ಕಾಣುತ್ತಿದ್ದ ಕೆಲ ಪ್ರಶ್ನೆಗಳಿರುತ್ತಿದ್ದವು. ಲಿಂಗ, ವಯಸ್ಸು, ವರಮಾನ, ಸಸ್ಯಾ ಹಾರಿಗಳೇ ಮಾಂಸಾಹಾರಿಗಳೇ, ಮದುವೆ­ಯಾಗಿ (ಪಶ್ಚಾತ್ತಾಪಿತರೇ) ಹಾಯಾಗಿರುವ ಬ್ರಹ್ಮಚಾರಿಗಳೇ ಮೊದಲಾದ ನಾರ್ಮಲ್‌ ಪ್ರಶ್ನೆಗಳಲ್ಲದೆ, ಈ ಕೆಳಗಿನ ಕೆಲವು ಅಧಿಕ ಪ್ರಸಂಗದ್ದೆಂಬಂತೆ ತೋರುವ ಪ್ರಶ್ನೆಗಳಿದ್ದವು.

* ಮನೆ ಸ್ವಂತದ್ದೇ? (ಮನೆ ಮಾಲೀಕರ ಕಾಟ – ಉಂಟು/ ಇಲ್ಲ)

* ಮನೆಯಲ್ಲಿ ಪ್ರಾಮುಖ್ಯತೆ ಯಾವ  ಭಾಗಕ್ಕೆ? – ಅಡುಗೆ ಮನೆ/ ಬಚ್ಚಲು/ ದೇವರ ಮನೆ/ ಕಕ್ಕಸು/ ಬಾಲ್ಕನಿ/ ಟಿ.ವಿ. ಮುಂದಿನ ಸೋಫಾ.

* ಅಡುಗೆ ಮಾಡುವವರು ಯಾರು? – ಗಂಡ/ ಹೆಂಡತಿ/ ಕುಕ್ಕು/ ಹೋಟೆಲ್ಲು

* ತಿಂಗಳಿಗೆ ಎಷ್ಟು ಸಕ್ಕರೆ ಖರೀದಿಸುತ್ತೀರಿ? – ಕ್ವಿಂಟಲ್ಲು/ ಕೆ.ಜಿ.?

* ಯಾವ್ಯಾವ ಖುಶಿಗೆ ಐಸ್‌ಕ್ರೀಂ ತಿನ್ನುತ್ತೀರಿ?– ಎಲ್ಲರ ಹುಟ್ಟುಹಬ್ಬಕ್ಕೂ?/ ವಾರಾಂತ್ಯದಲ್ಲಿ/ ಸ್ನೇಹಿತರು ಬಂದಾಗ... ಇತ್ಯಾದಿ ತಿಳಿಸಿ.

* ಮನೆಗೆ ಮೆಟ್ಟಿಲುಗಳಿವೆಯೇ? – ಹಿಂಬಾಗಿಲ ಪ್ರವೇಶವಿದೆಯೇ?

* ಲಿಫ್ಟು ಇರುವ ಮನೆಯೇ? – ಕರೆಂಟ್‌ ಹೋದಾಗ ಏನು ಸೌಲಭ್ಯ?

* ಟಿಕ್‌ ಮಾಡಿ – ಬದುಕಲಿಕ್ಕಾಗಿ ತಿನ್ನು/ ತಿನ್ನಲಿಕ್ಕಾಗಿ ಬದುಕು

* ಆಫೀಸಿನ ಕೆಲಸದ ಬಗ್ಗೆ– ಕೂತು ಮಾಡುವ/ ಮಾಡಿಸುವ/ ಮುಂದೂಡುವ ನೋಡುವ/ ಮಾಡದೇ ಆಡುವ

ಈ ಮಾದರಿಯಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ತುಂಬಲು ಗೊತ್ತಾಗದೇ ಕೆಲವರು ಒದ್ದಾಡುತ್ತಿದ್ದರು. ನಾನು ಕೂತು ಕುತೂಹಲದಿಂದ ಅವರಿಗೆ ಸಹಾಯ ಮಾಡಿ ಮಜಾ ತಗೊಳ್ಳುತ್ತಿದ್ದೆ. ‘ನಿಮ್ಮ  ಬೊಜ್ಜಿಗೆ ಕಾರಣ ಕಂಡುಹಿಡಿಯಲು ಹೀಗೆಲ್ಲ ಕೇಳಿದ್ದಾರೆ’ ಎಂದು ಸಮಾಧಾನ ನೀಡಿ ಅವರಿಂದ ಉತ್ತರ ಪಡೆಯುತ್ತಿದ್ದೆ. ನನ್ನ ಯಾವ ಕ್ಷೇತ್ರ ಕಾರ್ಯದಲ್ಲೂ ಸಿಗದ ಸ್ವಾರಸ್ಯಕರ ಅನುಭವ ಅಲ್ಲಿ ಸಿಗತೊಡಗಿತು.ಕೆಲವು ಸುಖ ಪುರುಷರ ಕೆಲಸವೇ ತಿನ್ನುವುದು/ ಅವರ ಅರ್ಧಾಂಗಿಯರದ್ದು ಬೇಯಿಸಿ ತಿನ್ನಿಸುವುದು/ಕೆಲವು ಘನ ಘನಾಂಗನೆಯರು ಮನೆಯಲ್ಲಿ ಬೇಯಿಸಿದ ಯಾವುದು ಹೆಚ್ಚುಳಿದರೂ ಹಾಳಾಗಬಾರದೆಂದು ‘ತಿಂದು ಉಳಿಸುವ’ ಕಾಳಜಿ. ಹಲವು ಮಕ್ಕಳಿಗೆ ಹೋಂವರ್ಕ್ ಮಾಡಿದರೆ ಚಾಕೊಲೇಟ್‌, ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್‌ ಬಂದರೆ ಐಸ್‌ಕ್ರೀಂ, ಕ್ಲಾಸಿಗೆ ಫಸ್ಟ್ ಬಂದರೆ ಪಿಜ್ಜಾ... ಮಾದರಿಯ ಲಂಚಪೀಡಿತರ ಪರಿಣಾಮವಾಗಿ ಊದಿದ ಕುಂಬಳಕಾಯಿಗಳಂತಾಗಿದ್ದರು.ನನ್ನ ಸ್ನೇಹಿತ ವೈದ್ಯೆ ವಿಷಯದ ಗಾಂಭೀರ್ಯವನ್ನು ಅರಿತವಳು. ಅವರವರ ಗಾತ್ರಕ್ಕೆ ತಕ್ಕ ಪ್ರಮಾಣದಲ್ಲಿ ಮುಖದಲ್ಲಿ ಗಾಂಭೀರ್ಯ ಪ್ರಕಟಿಸುತ್ತಾ ‘ನಿಮಗೆ ಇನ್ನೂ ಎಷ್ಟು ವರ್ಷ ಬದುಕಬೇಕೆಂಬ ಬಯಕೆ ಇದೆ?’ ಎಂದೊಂದು ಪ್ರಶ್ನೆ ಕೇಳಿದರೆ, ಯಾರೂ ಸಹ ‘ಈ ವಾರಾಂತ್ಯದಲ್ಲೇ ನನಗೆ ಸಾವು ಬರಲಿ ಸಿದ್ಧ’ ಎಂಬ ಉತ್ತರ ಕೊಡುತ್ತಿರಲಿಲ್ಲ. ‘ಸರಿ ಇನ್ನು ಹತ್ತು/ ಇಪ್ಪತ್ತು/ ಐವತ್ತು ವರ್ಷ ಕೈಕಾಲು ಸಮೇತ ಓಡಾಡಿಕೊಂಡು ಬದುಕಬೇಕೆಂದರೆ ಈ ಕೆಳಗಿನ ಪ್ರಿಸ್ಕ್ರಿಪ್ಶನ್‌ ಪಾಲಿಸಿ, ಒಪ್ಪಿಗೆಯಿದ್ದರೆ ಮಾತ್ರ  ಮುಂದುವರಿಯೋಣ, ಇಲ್ಲವಾದಲ್ಲಿ ಬೇರೆ ಡಾಕ್ಟರ ಬಳಿ ಧಾರಾಳವಾಗಿ ಹೋಗಬಹುದು’ ಎಂದು ನಿಷ್ಠುರ ಸ್ವರದಲ್ಲಿ ಹೇಳುತ್ತಿದ್ದಳು.‘ಇಲ್ಲ ಡಾಕ್ಟ್ರೆ ನನಗೆ ತೆಳ್ಳಗಾಗಲೇಬೇಕು. ಹೇಳಿದ್ದೆಲ್ಲ ಮಾಡ್ತೀನಿ’ ಎನ್ನುವವರಿಗೆ ಮಾತ್ರ ಚಿಕಿತ್ಸೆ. ನೋಡೋಣ, ಮಾಡೋಣ ಎನ್ನುವವರಿಗೆ ಗೇಟ್‌ಪಾಸ್‌. ಹೀಗೆ ಆಯ್ಕೆಯಾದ ಆಸಕ್ತರಿಗೆ ಪಕ್ಕದ ರೂಮಿನಲ್ಲಿ ಒಂದು ಚಿಕ್ಕ ಕುತ್ತಿಗೆ ವ್ಯಾಯಾಮವನ್ನು ಪರದೆಯಲ್ಲಿ ತೋರಿಸಲಾಗುತ್ತಿತ್ತು. ಅವರಲ್ಲಿ ಒಬ್ಬ ವ್ಯಕ್ತಿಯ ಮುಂದೆ ಐಸ್‌ಕ್ರೀಂ, ಪಿಜ್ಜಾ, ಬರ್ಗರ್‌ ಚಿಪ್ಸು, ತಂಪು ಪಾನೀಯ... ಹೀಗೆ ಒಂದಾದ ಮೇಲೊಂದರಂತೆ ವಸ್ತುಗಳನ್ನು ಎದುರು ಹಿಡಿಯುವುದು, ಆಗ ಆತ ಬ್ರೀದಿನ್‌, ಬ್ರೀದೌಟ್‌ ಮಾಡುತ್ತಾ ಕುತ್ತಿಗೆಯನ್ನು ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಿರುಗಿಸುವುದು... ಅಷ್ಟೆ.

‘ಈ ವ್ಯಾಯಾಮ ಸಾಧ್ಯವೇ?’ ಎಂದು ಕೇಳಿದಾಗ ‘ಇದು ಜೋಕು ಮಾತ್ರ ಅಂದುಕೊಂಡಿದ್ದೆವು. ಈಗ ಮಾಡೋದು ಎಷ್ಟು ಕಷ್ಟ ಅಂತ ಗೊತ್ತಾಯ್ತು’ ಎಂದು ನಗುತ್ತಾ ತೆರಳುವ, ಅದೊಂದೇ ವ್ಯಾಯಾಮದಿಂದ ನಿಧಾನವಾಗಿ ಕೆ.ಜಿ.ಗಳನ್ನು ಕರಗಿಸುತ್ತಾ ತನು ಕರಗಿದವರಾಗಿ ಬಂದು ‘ಥ್ಯಾಂಕ್ಸ್ ಡಾಕ್ಟ್ರೆ’ ಎನ್ನುವುದನ್ನು ಕಂಡಾಗ, ನಗೆ ಹನಿಗಳಂತೆ ತೋರುವ ಜೀವನದ ಕಟುಸತ್ಯಗಳು ಶ್ರದ್ಧೆಯಿಂದ ಪಾಲಿಸಲ್ಪಟ್ಟಾಗ ಪವಾಡಗಳೇ ಜರುಗಬಹುದಲ್ಲವೇ ಎನ್ನಿಸದಿರದು.ಆದ್ದರಿಂದ ತನು ಕರಗಿಸಬಯಸುವ ನನ್ನ ಘನದೇಹಿ ಸ್ನೇಹಿತರಿಗೆ ನನ್ನದೊಂದೇ ಸಲಹೆ. ನೀವು ಬೆಳಿಗ್ಗೆ ಎದ್ದು ಗೊಣಗಿಕೊಳ್ಳುತ್ತಾ, ಕೆಟ್ಟ ಮಾರಿ ಹೊತ್ತು ವಾಕಿಂಗ್‌ ಹೋಗುತ್ತೀರೋ ಬಿಡುತ್ತೀರೋ, ಲಿಫ್ಟಿದ್ದೂ  ಮೆಟ್ಟಿಲೇರುವುದು, ಮಾಡಲು ಕೆಲಸವಿಲ್ಲದಾಗೆಲ್ಲ ಕಾಲೆತ್ತಿ ಸೊಂಟ ತಿರುಗಿಸಿ, ಕೂತೆದ್ದು ಮಾಡುತ್ತಾ ಆಫೀಸಿನಲ್ಲಿ ಮನರಂಜನೆ ಒದಗಿಸುತ್ತೀರೋ, ಹಂಡೆಗಟ್ಟಲೆ ನೀರು ಕುಡಿಯುತ್ತ ಟಾಯ್ಲೆಟ್‌ಗೆ ಸೀಸನ್‌ ಟಿಕೆಟ್‌ ತಗೊಂಡಿರುತ್ತೀರೋ, ಸೊಪ್ಪುಸದೆ ತಿನ್ನುತ್ತಾ ದಯನೀಯ ಡಯೆಟ್‌ ನಡೆಸಿ ಹೈರಾಣಾಗುತ್ತೀರೋ... ನಿಮಗೆ  ಬಿಟ್ಟದ್ದು. ನಿಮ್ಮ ತೂಕಾತಿರೇಕಕ್ಕೆ ಬಿಟ್ಟಿದ್ದು.ಆದರೆ ಅಕ್ಕ ಹೇಳಿರುವಂತೆ ಚೆನ್ನಮಲ್ಲಿಕಾರ್ಜುನ ಸಂಪ್ರೀತಿಗೊಂಡು, ನಿಮ್ಮ ಭಕ್ತಿ ಕುಸುಮವನ್ನು ಸ್ವೀಕರಿಸಬೇಕೆಂದರೆ ನೀವು ‘ತನು ಕರಗಿದವ’ರಾಗಬೇಕು ಮತ್ತು ಮೇಲೆ ಹೇಳಿದ ಒಂದೇ ಒಂದು ಕುತ್ತಿಗೆ ವ್ಯಾಯಾಮವನ್ನು ನಿತ್ಯವೂ ಮಾಡುವುದೊಂದೇ ನಿಮಗುಳಿದ ದಾರಿ.

ನಮಸ್ಕಾರ, ಗಾತ್ರಹರೋ ಭವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry