ಸೋಮವಾರ, ಮೇ 23, 2022
26 °C

ತನು-ಮನ-ಧನ ಹೂಡಿಕೆ

ಡಾ.ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

ತನು-ಮನ-ಧನ ಹೂಡಿಕೆ

ಮಾನಸಿಕ ಆರೋಗ್ಯಕ್ಕೂ, ದೈಹಿಕ ಆರೋಗ್ಯಕ್ಕೂ ಇರುವ ನಂಟು ಹಿಂದೆಂದಿಗಿಂತಲೂ ಇಂದು  ಹೆಚ್ಚು ನಿಚ್ಚಳವಾಗಿದೆ. ಮನಸ್ಸು-ದೇಹಗಳು ಒಂದನ್ನೊಂದು ಬಿಟ್ಟು ಸುಖ-ದುಃಖಗಳನ್ನು ಅನುಭವಿಸಲು ಸಾಧ್ಯವಿಲ್ಲವಷ್ಟೆ.ಆದ್ದರಿಂದಲೇ ದೈಹಿಕ ಆರೋಗ್ಯಕ್ಕಾಗಿ ನಿರಂತರವಾಗಿ ಆಸೆ ಪಡುವ, ದೇಹಕ್ಕೆ ಸಣ್ಣ ನೋವು ಉಂಟಾದರೂ ವೈದ್ಯರ ಬಳಿ ಓಡುವ ನಾವು ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಲೇಬೇಕು.ಈ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 4 ರಿಂದ 10 ರವರೆಗಿನ ವಿಶ್ವಮಾನಸಿಕ ಆರೋಗ್ಯದ ಸಪ್ತಾಹ ಈ ಬಗ್ಗೆ ಅಂದರೆ ಛಿ ಎ್ಟಛಿಠಿ ಟ್ಠ ; ಐ್ಞಛಿಠಿಜ್ಞಿಜ ಜ್ಞಿ ಞಛ್ಞಿಠಿಚ್ಝ ಛಿಚ್ಝಠಿ ಮಾನಸಿಕ ಆರೋಗ್ಯಕ್ಕಾಗಿ ತನು-ಮನ-ಧನಗಳ ಹೂಡಿಕೆ ಎಂಬ ಬಗ್ಗೆ ಹೆಚ್ಚಿನ ಒತ್ತು ನೀಡುವ ಧ್ಯೇಯವನ್ನು ತನ್ನದಾಗಿಸಿಕೊಂಡಿದೆ.`ಖಿನ್ನತೆ~ ಈಗಾಗಲೇ ಜಗತ್ತಿನ ಅತಿ ಸಾಮಾನ್ಯ ಪ್ರಾಣಾಂತಿಕ ಕಾಯಿಲೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, ಜೀವನದ ಗುಣಮಟ್ಟಕ್ಕೆ ಕುಂದು ತರುವ, ಪ್ರಾಣಾಪಾಯಕ್ಕೆ ಕಾರಣವಾಗುವ ಕಾಯಿಲೆಗಳಲ್ಲಿ ಪ್ರಮುಖ ಸ್ಥಾನ ಗಳಿಸಿರುವ ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧೀ ಕಾಯಿಲೆಗಳು, ಬೊಜ್ಜು ಮತ್ತು ಶ್ವಾಸಕೋಶ ಸಂಬಂಧೀ ಕಾಯಿಲೆಗಳಿಗೂ ಮಾನಸಿಕ ಆರೋಗ್ಯಕ್ಕೂ ನಿಕಟ ಸಂಬಂಧವಿದೆ. ಈ ರೋಗಿಗಳ ವ್ಯಕ್ತಿತ್ವ, ಅವರಲ್ಲಿ ಕಂಡುಬರುವ ದೋಷಪೂರಿತ ಜೀವನ ಶೈಲಿ ಮತ್ತು ಖಿನ್ನತೆಗಳ ಸರಿಯಾದ ಚಿಕಿತ್ಸೆ ಈ ಕಾಯಿಲೆಗಳ ನಿಯಂತ್ರಣ ಸಾಧಿಸುವಲ್ಲಿ ಸಹಾಯಕ.ಹಾಗಾಗಿ ಇವೆಲ್ಲದರ ಚಿಕಿತ್ಸೆಯಲ್ಲಿ ರೋಗಿಯ ಮತ್ತು ಕುಟುಂಬದವರ ಮಾನಸಿಕ ಆರೋಗ್ಯದ ಬಗೆಗೆ ಗಮನ ಅತ್ಯಗತ್ಯ. ಅವರ ಭಾವನಾತ್ಮಕ ಅಗತ್ಯಗಳು, ವ್ಯಕ್ತಿತ್ವ-ಜೀವನ ಶೈಲಿ, ಖಿನ್ನತೆಯ ನಿವಾರಣೆ, ಸಾಂತ್ವನ- ಧೈರ್ಯ ನೀಡುವ ಮನೋಚಿಕಿತ್ಸೆ ಈ ಕಾಯಿಲೆಗಳನ್ನು ಸಹನೀಯಗೊಳಿಸಬಹುದು. ಹಲವೊಮ್ಮೆ ಔಷಧಿಗಳಿಗೆ ಸುಧಾರಿತ ಪ್ರತಿಕ್ರಿಯೆ ನೀಡುವಂತೆ ಮಾಡಬಹುದು.

ಮಧುಮೇಹ ಮತ್ತು ಮಾನಸಿಕ ಆರೋಗ್ಯ

* ಪ್ರತಿ ನಾಲ್ವರು ಮಧುಮೇಹಿಗಳಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಖಿನ್ನತೆ ಅವರಲ್ಲಿನ ಪ್ರಾಣಾಪಾಯವನ್ನು ಶೇಕಡ 30ರಷ್ಟು ಹೆಚ್ಚಿಸುತ್ತದೆ.* ಮಧುಮೇಹಿಗಳು ಪಾಲಿಸಬೇಕಾದ ಪಥ್ಯ, ವ್ಯಾಯಾಮ, ಜೀವನ ಕ್ರಮಕ್ಕೂ ಮನಸ್ಸಿನ ದೃಢತೆಗೂ ನಿಕಟ ಸಂಬಂಧವಿದೆ.* ಉತ್ತಮ ಮಾನಸಿಕ ಆರೋಗ್ಯ ಅತ್ಯವಶ್ಯ.

ಶ್ವಾಸಕೋಶ ಸಂಬಂಧೀ ಕಾಯಿಲೆ- ಮಾನಸಿಕ ಆರೋಗ್ಯ

* ಶೇಕಡ 20ರಷ್ಟು ಶ್ವಾಸಕೋಶ ಸಂಬಂಧೀ ಕಾಯಿಲೆಗಳ ರೋಗಿಗಳು ಖಿನ್ನತೆ-ಆತಂಕದ ಮಾನಸಿಕ ಕಾಯಿಲೆಗಳಿಂದ ನರಳುತ್ತಾರೆ.* ಈ ಕಾಯಿಲೆಗಳಲ್ಲಿ ಇರಬಹುದಾದ ಆತಂಕ-ಖಿನ್ನತೆಗಳ ಚಿಕಿತ್ಸೆ ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

ಬೊಜ್ಜು ಮತ್ತು ಮಾನಸಿಕ ಆರೋಗ್ಯ

ಇಂದಿನ ಜಗತ್ತಿನ ಎಲ್ಲಾ ಕಾಯಿಲೆಗಳ ಪ್ರಮುಖ ಕಾರಣವಾದ ಬೊಜ್ಜಿಗೂ ಮನಸ್ಸಿಗೂ ಸಂಬಂಧವಿದೆ. ಬೊಜ್ಜಿರುವವರಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚು ಕಾಣಿಸುವಂತೆಯೇ, ಖಿನ್ನತೆ, ಆತಂಕಗಳಿಂದ ನರಳುವ ವ್ಯಕ್ತಿಗಳು, ಚಿತ್ತವಿಕಲತೆಯ ಋಣಾತ್ಮಕ ಲಕ್ಷಣಗಳಿಂದ ನರಳುವ ರೋಗಿಗಳು ಬೊಜ್ಜಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಹಸಿವಿನ ಮೇಲೆ ನಿಯಂತ್ರಣ ಇರದಿರುವುದು, ಆಹಾರದಲ್ಲಿ ಅತಿ ಎಣ್ಣೆ, ಕೊಬ್ಬಿನಂಶಗಳು, ಬೇಸರ ನೀಗಲು ತಿನ್ನುವಿಕೆ, ವ್ಯಾಯಾಮ ಮಾಡದಿರುವುದು, ಇವೆಲ್ಲವೂ ಮನಸ್ಸಿನ ಕ್ಷಮತೆ-ಸಾಮರ್ಥ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಿದ್ದು. ಒಮ್ಮೆ ಬೊಜ್ಜು ಕಾಲಿಟ್ಟಿತೆಂದ ಮೇಲೆ ಅನಾರೋಗ್ಯಗಳ ಸರಮಾಲೆ ಆರಂಭ.ಬೊಜ್ಜಿಲ್ಲದ ಆರೋಗ್ಯಕರ ದೇಹದ ಸ್ಥಿತಿಗೆ ಸರಿಯಾದ ಮಾನಸಿಕ ಆರೋಗ್ಯವೂ ಅಗತ್ಯ. ನಿಯಮಿತ ಆಹಾರ ತೆಗೆದುಕೊಳ್ಳುವ ಮನಸ್ಸಿನ ನಿಯಂತ್ರಣ, ಸರಿಯಾದ ರೀತಿಯಲ್ಲಿ ಪ್ರತಿದಿನ ವ್ಯಾಯಾಮ ಮಾಡುವ ಮನಸ್ಸಿನ ಶ್ರದ್ಧೆ ನಮ್ಮೆಲ್ಲರಿಗೂ ಅಗತ್ಯ.

ಹೃದಯ ಸಂಬಂಧೀ ಕಾಯಿಲೆ ಮತ್ತು ಮಾನಸಿಕ ಆರೋಗ್ಯ

ಮಾದಕ ದ್ರವ್ಯ ವ್ಯಸನಗಳು, ವ್ಯಾಯಾಮದ ಕೊರತೆ, ಅತಿಯಾದ ಒತ್ತಡಮಯ ಜೀವನ ಶೈಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ. ಹಾಗೆಯೇ ಹೃದಯಾಘಾತದ ನಂತರದಲ್ಲಿ ಖಿನ್ನತೆ- ಆತಂಕಗಳು ಸರ್ವೇಸಾಮಾನ್ಯ. ಆರೋಗ್ಯಕರ ಜೀವನಶೈಲಿ, ಮಾನಸಿಕ ಸದೃಢತೆ, ಅತಿ ಒತ್ತಡ ರಹಿತ ಜೀವನ ಶೈಲಿ ಹೃದಯ ಸಂಬಂಧೀ ಕಾಯಿಲೆಗಳ ಸಾಧ್ಯತೆಯನ್ನು ಕಡಿತಗೊಳಿಸುತ್ತದೆ. ಹಾಗೆಯೇ ಹೃದಯಾಘಾತವಾದ ವ್ಯಕ್ತಿಗಳಲ್ಲಿ ಇರಬಹುದಾದ ಆತಂಕ -ಖಿನ್ನತೆ ಪ್ರಾಣಾಪಾಯ ತರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ಮತ್ತು ಮಾನಸಿಕ ಆರೋಗ್ಯ

ಕ್ಯಾನ್ಸರ್ ತರಬಹುದಾದ ಪ್ರಾಣಾಪಾಯದ ಭೀತಿ, ಜೀವನದ ಗುಣಮಟ್ಟದ ಮೇಲೆ ಅದು ಮಾಡಬಹುದಾದ ಹಾನಿಗಳು ಹೆಚ್ಚಿನ ಕ್ಯಾನ್ಸರ್ ರೋಗಿಗಳಿಗೆ ಖಿನ್ನತೆ-ಆತಂಕಗಳನ್ನು ತರುತ್ತವೆ. ಈ ಖಿನ್ನತೆ-ಆತಂಕಗಳು ದೇಹದ ರೋಗ-ನಿರೋಧಕ ಶಕ್ತಿಯನ್ನು ಮತ್ತಷ್ಟು ಕುಗ್ಗಿಸುತ್ತವೆ. ಕ್ಯಾನ್ಸರ್ ರೋಗಿಗಳಂತೆಯೇ, ಅವರನ್ನು ನಿರಂತರವಾಗಿ ನೋಡಿಕೊಳ್ಳಬೇಕಾದ ಕುಟುಂಬ ವರ್ಗವೂ ಮಾನಸಿಕ ದಣಿವು -ಖಿನ್ನತೆ-ಭೀತಿ -ಪಾಪ ಪ್ರಜ್ಞೆಗಳನ್ನು ಅನುಭವಿಸುತ್ತದೆ. ಕ್ಯಾನ್ಸರ್ ರೋಗಿಗಳ ಮತ್ತು ಕುಟುಂಬ ವರ್ಗದವರ ಮಾನಸಿಕ ಆರೋಗ್ಯದ ಬಗೆಗಿನ ಗಮನ ಅತಿ ಮುಖ್ಯ. `ಕ್ಯಾನ್ಸರ್ ಬಂದಿದೆ~ ಎಂಬ ಸತ್ಯವನ್ನು ಸ್ವೀಕರಿಸುವುದರಿಂದ ಆರಂಭಿಸಿ, ಚಿಕಿತ್ಸೆಯ ಪ್ರತಿ ಹಂತದಲ್ಲಿಯೂ ರೋಗಿಯ `ಮನಸ್ಸಿ~ಗೆ ಆದ್ಯತೆ  ನೀಡಬೇಕಾಗುತ್ತದೆ.ಒಟ್ಟಿನಲ್ಲಿ  ಕಾಯಿಲೆ ಯಾವುದೇ ಆಗಲಿ, `ರೋಗ~ಕ್ಕಿಂತ `ರೋಗಿ~ಗೆ ಚಿಕಿತ್ಸೆ ನೀಡಬೇಕಷ್ಟೆ. ಜೀವನ ಶೈಲಿಯ ಸುಧಾರಣೆ, ನಾಲ್ಕು ಸಾಂತ್ವನದ ಮಾತುಗಳು, ರೋಗದ ಬಗೆಗೆ ಸರಿಯಾದ ಮಾಹಿತಿ, ಕುಟುಂಬದವರಿಗೆ ಬೆಂಬಲ, ಅಗತ್ಯವಿದ್ದಲ್ಲಿ ಖಿನ್ನತೆ ನಿವಾರಕ ಔಷಧಿಗಳು ಇವೆಲ್ಲವೂ ಚಿಕಿತ್ಸೆಯ ಭಾಗಗಳೇ. ಇನ್ನು ಇವ್ಯಾವುದೇ ಕಾಯಿಲೆಗಳು ನಿಮಗಿಲ್ಲವೆಂದರೂ, ಮಾನಸಿಕ ಆರೋಗ್ಯಕ್ಕಾಗಿ ತನು-ಮನ-ಧನಗಳ ಹೂಡಿಕೆ ನಮ್ಮೆಲ್ಲರಿಗೂ ಲಾಭದಾಯಕವೇ. ದೇಹದ ವ್ಯಾಯಾಮದಿಂದ ತನುವಿನ ಹೂಡಿಕೆ, ಮನಸ್ಸಿನ ಹೂಡಿಕೆ, ಮನಸ್ಸಿನ ಶ್ರದ್ಧೆ-ಕಲಿಕೆ- ನೆಮ್ಮದಿಗಳಿಂದ ಮನಸ್ಸಿನ ಆರೋಗ್ಯ ಕಾಪಾಡಲು ಹವ್ಯಾಸಗಳ ಕಲಿಕೆ-ವಿಶ್ರಾಂತಿ- ಪ್ರವಾಸ ಇತ್ಯಾದಿಗಳಿಗೆ ಧನದ ಹೂಡಿಕೆ ಖಂಡಿತವಾಗಿ ಲಾಭದಾಯಕ!  ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ-ದಿನಗಳಂದು ಈ ಲಾಭದಾಯಕ ಹೂಡಿಕೆಗಳಿಂದ ದೀರ್ಘಾಯುಷ್ಯ, ಉತ್ತಮ ಗುಣಮಟ್ಟದ ಜೀವನ ನಿಮ್ಮದಾಗಿಸಿಕೊಳ್ಳಿ !

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.