ಶುಕ್ರವಾರ, ಮೇ 7, 2021
26 °C
ಥಳುಕು ಬಳುಕು

ತನ್ನತನವ ತೊರೆಯದ ಸೊಗಸು

-ಎನ್ವಿ Updated:

ಅಕ್ಷರ ಗಾತ್ರ : | |

ಒಂದಿಷ್ಟು ತುಂಡಾಗಿಯೇ ಕತ್ತರಿಸಿದ ಕೂದಲು. ಮುಖದ ಮೇಲೆ ಎಳೆ ಬಿಸಿಲು. ಕಡುಗೆಂಪು ತುಟಿರಂಗು. ಒಂದಿಷ್ಟು ಎಲೆಗಳನ್ನು ಹಾಕಿದ ತೊಟ್ಟಿಯ ಪಕ್ಕ ಎರಡೂ ಕೈಗಳನ್ನು ಹಿಂದಕ್ಕೆ ಚಾಚಿ ನಟೀಮಣಿ ನಿಸ್ಸಂಕೋಚವಾಗಿ ಪೋಸು ಕೊಟ್ಟಾಗ ಮೆಲ್ಲ ಗಾಳಿ.ಕ್ಯಾಮೆರಾಮನ್ ಸಿದ್ಧಗೊಂಡ ನಂತರ ಉಗುರುಬಣ್ಣಕ್ಕೆ ಅಂತಿಮ ಟಚ್. ನಟೀಮಣಿ ಹಾಕಿದ್ದದ್ದು ಕ್ರೀಮ್ ಬಣ್ಣದ ಬಿಕಿನಿ. ಕ್ಯಾಮೆರಾಮನ್ ಇಶಾರೆಗೆ ತಕ್ಕಂತೆ ತುಟಿ ಮೇಲೆ ಸಣ್ಣ ನಗು ಮೂಡಿಸಿಕೊಂಡಿದ್ದೂ ಆಯಿತು. ಪಕ್ಕದಲ್ಲಿ ಮೂರ‌್ನಾಲ್ಕು ಯುವಕರಿಗೆ ಹಿಂದೆ ಇದ್ದ ಈಜುಕೊಳಕ್ಕೆ ಧುಮುಕುವಂತೆ ಸೂಚಿಸಿದ್ದು ಫೋಟೊ ಸಹಜವಾಗಿರಲಿ ಎಂಬ ಕಾರಣಕ್ಕೆ.ಎರಡು ಮೂರು ಸಲ ಯುವಕರು ನೀರಿಗೆ ಧುಮುಕಿದ ಶಬ್ದ ಕೇಳಿ ನಟಿಯ ಭಂಗಿ ಬದಲಾಯಿತು. ಒಂದೊಮ್ಮೆ ಕೊಳದ ನೀರು ಚಿಮ್ಮಿ, ಮುಖಕ್ಕೆ ಸಿಂಚನಗೊಂಡಿದ್ದರಿಂದ ಬೆಚ್ಚಿಬಿದ್ದ ನಟಿ, `ಸಹಜತೆ ಇಷ್ಟು ಕಷ್ಟವೇ' ಎಂದು ಉದ್ಗರಿಸಿದರು.ಎರಡು ತಾಸು ಕಷ್ಟಪಟ್ಟ ನಂತರ ಕೊನೆಗೂ ಅಂದುಕೊಂಡ ಪೋಸು ಕ್ಯಾಮೆರಾಮನ್‌ಗೆ ಸಿಕ್ಕಿತು. ತೆಗೆದ ಐನೂರು ಚಿತ್ರಗಳಲ್ಲಿ ಪ್ರಕಟಣೆಗೆ ಯೋಗ್ಯವೆಂದು ಆತ ಆರಿಸಿಕೊಂಡದ್ದು ಐದನ್ನು ಮಾತ್ರ. ಪೋಸ್ ಕೊಟ್ಟ ನಂತರ ಬಿಂದಾಸ್ ಆಗಿ ಮಾತನಾಡಿದ ಆ ನಟಿಯ ಹೆಸರು ಸೋನಂ ಕಪೂರ್. ಇಂಥದೊಂದು ಫೋಟೊ ಶೂಟ್‌ಗೆ ಹಿನ್ನೆಲೆ ಇದೆ.`ಯಶ್‌ರಾಜ್ ಫಿಲ್ಮ್ಸ್‌ನ ಚಿತ್ರವೊಂದರಲ್ಲಿ ಬಿಕಿನಿ ತೊಡಲಿದ್ದೀರಂತೆ, ಕಷ್ಟವಾಗುವುದಿಲ್ಲವೇ?' ಎಂದು ಸಿನಿಮಾಗೆ ಮೀಸಲಾದ ಇಂಗ್ಲಿಷ್ ನಿಯತಕಾಲಿಕೆಯೊಂದರ ಸುದ್ದಿಮಿತ್ರರು ಕೇಳಿದರು. ಆಗ ಸೋನಂ, `ನಿಮ್ಮ ಕ್ಯಾಮೆರಾಮನ್‌ನ ಕರೆಸಿ. ಬಿಕಿನಿ ಹಾಕಿಯೇ ಪೋಸು ಕೊಡುತ್ತೇನೆ. ನಿಮಗೂ ಆಗ ಬಿಕಿನಿ ತೊಡುವುದು ಅಶ್ಲೀಲತೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ' ಎಂದರು. ಸುದ್ದಿಮಿತ್ರರಿಗೆ ತಮ್ಮ ಫೋಟೋಗ್ರಾಫರನ್ನು ಕರೆಸದೇ ವಿಧಿ ಇರಲಿಲ್ಲ. ಆಗ ಸೋನಂ ಸಿನಿಮಾ ಫೋಟೊ ಶೂಟ್‌ಗೆ ಸಿದ್ಧರಾಗುವಷ್ಟೇ ಶ್ರದ್ಧೆಯಿಂದ ನಿಯತಕಾಲಿಕೆಯ ಫೋಟೊ ಶೂಟ್‌ಗೂ ಸಜ್ಜಾದರು.ಫೋಟೊಗಳನ್ನೆಲ್ಲಾ ತೆಗೆದ ನಂತರ, `ಈಗಲೂ ನಿಮಗೆ ಅದೇ ಪ್ರಶ್ನೆ ಕೇಳಬೇಕು ಅನಿಸುತ್ತಿದೆಯೇ' ಎಂದು ಸೋನಂ ಮರುಪ್ರಶ್ನೆ ಹಾಕಿದಾಗ ಸುದ್ದಿಮಿತ್ರರು ಇಲ್ಲ ಎಂಬಂತೆ ತಲೆಯಾಡಿಸಿದರಷ್ಟೆ. ಮನೆಗೆ ಹೋದಮೇಲೆ ಸೋನಂ ಈ ವಿಷಯವನ್ನು ಅಪ್ಪ ಅನಿಲ್ ಕಪೂರ್ ಮುಂದೆ ಹೇಳಿಕೊಂಡು ನಕ್ಕರಂತೆ.`ನಮ್ಮ ದೇಶದಲ್ಲಿ ರೇಪ್‌ಗಳು ಆಗುತ್ತಿರುವುದು ಇದೇ ಕಾರಣಕ್ಕೆ. ಮಹಿಳೆ ಬಿಕಿನಿ ತೊಟ್ಟರೆ ಹೇಗೆ ಕಾಣುತ್ತಾಳೆ ಎಂಬ ಕುತೂಹಲ ಅನೇಕರಿಗೆ ಇದೆ. ದೇಹ ಸೌಂದರ್ಯ ನೋಡಲು ಬಯಸುವ ಮನಸ್ಸುಗಳಿಗೆ ಎಲ್ಲೋ ಒಂದು ಕಡೆ ಅದು ಕಾಣಬೇಕು. ಅದು ನಮ್ಮಂಥ ನಟಿಯರಿಂದ ಸಾಧ್ಯವಾಗುತ್ತದೆ. ಗೊತ್ತಿಲ್ಲದ ವ್ಯಕ್ತಿಯೊಬ್ಬ ಬಿಕಿನಿ ತೊಟ್ಟ ನನ್ನ ಫೋಟೊ ನೋಡಿದಾಕ್ಷಣ ನನ್ನ ಪಾವಿತ್ರ್ಯವೇನೂ ಹಾಳಾಗುವುದಿಲ್ಲ. ಆ ಫೋಟೊ ನೋಡಿದವರೆಲ್ಲಾ ನನ್ನ ಮೇಲೆ ಎರಗಿಬರುವುದೂ ಸಾಧ್ಯವಿಲ್ಲ. ಮಹಿಳೆಯನ್ನು ಆಧುನಿಕ ಜಗತ್ತಿನ ಚೌಕಟ್ಟಿನಲ್ಲಿ ಸೌಂದರ್ಯವತಿಯಾಗಿ ನೋಡುವ ಮನಸ್ಸುಗಳು ಹೆಚ್ಚಾಗಬೇಕು'- ಸೋನಂ ಆಡುವ ಈ ಮಾತು ಬಿಸಿ ಚರ್ಚೆಯೊಂದಕ್ಕೆ ಕಾರಣವಾಗಬಲ್ಲಷ್ಟು ಸತ್ವಯುತವಾಗಿದೆಯಲ್ಲವೇ?ಸ್ಪಷ್ಟ ಅಭಿಪ್ರಾಯಗಳನ್ನು ತೇಲಿಬಿಡುವುದಕ್ಕಷ್ಟೇ ಸೋನಂ ಹೆಸರುವಾಸಿಯಾಗಿಲ್ಲ, ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಅವರು ತೋರುತ್ತಿರುವ ಸಂಯಮ ಕೂಡ ಗಮನಾರ್ಹ. `ಮೌಸಮ್' ಹಾಗೂ `ಪ್ಲೇಯರ್ಸ್‌' ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ನಂತರ ಒಂದು ವರ್ಷ ಅವರು ಯಾವ ಚಿತ್ರಗಳಿಗೂ ಬಣ್ಣ ಹಚ್ಚಿರಲಿಲ್ಲ.“ಪ್ಲೇಯರ್ಸ್‌ ಶೂಟಿಂಗ್ ಮುಗಿದ ಮೇಲೆ ನನ್ನನ್ನು ನಾನೇ ತಿದ್ದಿಕೊಳ್ಳಬೇಕು ಎಂದು ತೀವ್ರವಾಗಿ ಅನ್ನಿಸಿತು. ಅದಕ್ಕೇ ಸ್ವಲ್ಪ ದಿನ ಚಿತ್ರೀಕರಣದಿಂದ ದೂರ ಇರಬೇಕು ಎಂದು ನಿರ್ಧರಿಸಿದೆ. ಪ್ಲೇಯರ್ಸ್‌ ತೆರೆಕಾಣುವ ಆರು ತಿಂಗಳು ಮೊದಲು ಹಾಗೂ ತೆರೆಕಂಡ ನಂತರದ ಆರು ತಿಂಗಳು ನಾನು ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಹೆಚ್ಚು ಚಿತ್ರಗಳಲ್ಲಿ ನಾವು ನಟಿಸುತ್ತಿದ್ದಂತೆ ಅವಕಾಶಗಳು ತಂತಾವೇ ಬರುತ್ತವೆ. ಹಣ ಒಂದನ್ನೇ ದೃಷ್ಟಿಯಲ್ಲಿಟ್ಟುಕೊಂಡರೆ ಅವನ್ನು ನಾವು ಒಪ್ಪಿಕೊಂಡು ಬಿಡುತ್ತೇವೆ. ದೊಡ್ಡ ಬ್ಯಾನರ್‌ನ ಚಿತ್ರ ಎಂಬ ಆಮಿಷವೂ ಆಕರ್ಷಿಸುತ್ತದೆ. ಅವನ್ನೆಲ್ಲಾ ಮೀರಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಾನು ಸಂಕಲ್ಪ ಮಾಡಿದೆ.`ಭಾಗ್ ಮಿಲ್ಖಾ ಭಾಗ್' ಹಿಂದಿ ಚಿತ್ರದಲ್ಲಿ ಸಣ್ಣ ಪಾತ್ರವಾದರೂ ಇಡೀ ಚಿತ್ರಕ್ಕೆ ಅದು ಕಲ್ಪಿಸಿಕೊಡುವ ತಿರುವು ಅದನ್ನು ಒಪ್ಪಿಕೊಳ್ಳಲು ನನಗೆ ಸ್ಫೂರ್ತಿ ನೀಡಿತು. ಈಗ `ರಾಂಝನಾ' ಹಿಂದಿ ಸಿನಿಮಾ ಸಿದ್ಧವಾಗಿದೆ. ಅದರ ನಾಯಕ ಧನುಷ್ ತಮಿಳು ಚಿತ್ರಗಳಲ್ಲಿ ಸ್ಟಾರ್. ಅಭಯ್ ದೇವಲ್, ಇಮ್ರಾನ್ ಖಾನ್, ಆಯುಷ್ಮಾನ್ ಖುರಾನಾ, ಅರ್ಜುನ್ ಕಪೂರ್ ಎಲ್ಲರೂ, ನಾನು ಅವರೊಟ್ಟಿಗೆ ಅಭಿನಯಿಸಲು ಒಪ್ಪಿದ ಕಾಲಘಟ್ಟದಲ್ಲಿ ಚಿತ್ರರಂಗಕ್ಕೆ ಹೊಸಬರೇ ಆಗಿದ್ದರು. ಅಭಿಷೇಕ್ ಬಚ್ಚನ್ ಜೊತೆ ಎಲ್ಲಾ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಿಲ್ಲವಷ್ಟೆ. ಖಾನ್ ದಿಗ್ಗಜರ ಸಿನಿಮಾಗಳಲ್ಲಿ ನಟಿಸುವುದು ನನ್ನ ಕನಸು ಎಂದು ಪಿಳಿಪಿಳಿ ಕಣ್ಣು ಬಿಡುತ್ತಾ ಹೇಳಲಾರೆ.ಅವರ ಚಿತ್ರಗಳಲ್ಲಿ ಅವಕಾಶ ಸಿಕ್ಕರೆ ಡಬ್ಬಲ್ ಸಂತೋಷ. ಸಿಗದಿದ್ದರೆ ದುಃಖವಿಲ್ಲ. ಚಿತ್ರರಂಗಕ್ಕೆ 200 ವರ್ಷ ತುಂಬಿದ ಮೇಲೆ `ತನ್ನದೇ ನಿರ್ಧಾರದಿಂದ ವೃತ್ತಿಬದುಕು ರೂಪಿಸಿಕೊಂಡ ಅಪರೂಪದ ನಟಿ ಸೋನಂ' ಎಂಬ ಟಿಪ್ಪಣಿಯನ್ನು ಯಾರಾದರೂ ನನ್ನ ಕುರಿತು ಬರೆದರೆ ಅಲ್ಲಿಗೆ ನನ್ನ ಬದುಕು ಸಾರ್ಥಕವಾಯಿತು ಎಂದು ಭಾವಿಸುತ್ತೇನೆ...”ಸೋನಂ ಕಪೂರ್ ಲಹರಿಯಂತೆ ಮಾತನಾಡಿದರೂ ಎಲ್ಲದರಲ್ಲೂ ಸ್ವಂತಿಕೆಯ ಛಾಪು ಎದ್ದುಕಾಣುತ್ತದೆ. ಅಂದಹಾಗೆ, ಈ ವರ್ಷ ಅವರು ನಟಿಸಿರುವ ಮೂರು ಅಥವಾ ನಾಲ್ಕು ಚಿತ್ರಗಳು ತೆರೆ ಕಾಣಲಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.