ತನ್ನ ಪಾಲಿನ ಹಂಬಲದ ನವಸೂರ್ಯ

7

ತನ್ನ ಪಾಲಿನ ಹಂಬಲದ ನವಸೂರ್ಯ

Published:
Updated:
ತನ್ನ ಪಾಲಿನ ಹಂಬಲದ ನವಸೂರ್ಯ

ಕಾವ್ಯಕಾರಣ

ಕವಿ ಮಹಾದೇವ ಶಂಕನಪುರ ಅವರ ಸರಳ ಕವಿತೆ `ಅಪ್ಪನಿಗೊಂದು ಪತ್ರ~. ಅವರ ಇನ್ನೂ ಉತ್ತಮ ಕವಿತೆಗಳು ಸುದೀರ್ಘವಾದವು. ಈ ಮಾಲಿಕೆಯ ಪುಟಮಿತಿಗೊಳಗಾಗಿ ಈ ಕವಿತೆಯನ್ನು ನಾನು ಆಯ್ಕೆಮಾಡಿಕೊಳ್ಳಬೇಕಾಯಿತು.ಒಟ್ಟು ಕವಿತೆಯ ಹಿಂದೆ ಎರಡು ತಲೆಮಾರುಗಳ ಸಂವಾದವಿದೆ. ಆ ತಲೆಮಾರುಗಳ ಆರ್ದ್ರ ಬದುಕಿನ ಚಿತ್ರ ಅನಾವರಣಗೊಳ್ಳುತ್ತದೆ. ಗೋರಿಗಳ ಮುಂದೆ ನಿಂತು ಇತಿಹಾಸದ ಪಾಠ ಹೇಳುವಾಗ ವರ್ತಮಾನಕ್ಕೆ ನ್ಯಾಯ ಸಲ್ಲಿಸಲಾಗುವುದಿಲ್ಲವೆಂಬ ಅರಿವಿದೆ. ಆದರೆ ಇತಿಹಾಸ ತಿಳಿಯದವನು ಭವಿಷ್ಯವನ್ನು ಕಟ್ಟಿಕೊಡಲಾರನೆಂಬ ದಾರ್ಶನಿಕ ತತ್ವದ ದರ್ಶನವಿದೆ.ಕವಿಯ ಅಥವಾ ಕವಿ ಪ್ರತಿನಿಧಿಸುವ ಸಮುದಾಯದ ಗೋಳಿನ ಚರಿತ್ರೆಗೆ ಕಾರಣವಾದ ವ್ಯವಸ್ಥೆಯ ಪರಿಚಯ ಓದುಗರಿಗಾಗುತ್ತದೆ. ಬಾಲ್ಯದ ಸವಿಯನ್ನು ಉಣ್ಣಲಾಗದೆ, ದುಃಖದ ಕಟ್ಟೆಯಲ್ಲಿ ಕೈತೊಳೆದ ಅಪ್ಪ-ಅಮ್ಮರ ಬದುಕಿನ ಕರಾಳ ಪುಟಗಳನ್ನು ಮರೆಯಲೂ ಆಗದೆ, ಅಲ್ಲಿ ಬದುಕಲೂ ಆಗದಂತಹ ತೊಳಲಾಟ ಇಡೀ ಕವಿತೆಯ ತುಂಬ ಹಾಸುಹೊಕ್ಕಾಗಿದೆ. ಅಮ್ಮನ ಬೇಡಿಕೆಗಳನ್ನು ಈಡೇರಿಸಲಾಗದ ಅಪ್ಪನ ದೈನೇಸಿ ಸ್ಥಿತಿ ಧುತ್ತನೆ ಕಣ್ಣ ಮುಂದೆ ಬರುತ್ತದೆ. ಅಪ್ಪನ ಕಂಠದಲ್ಲೇ ಹೂತೋದ ಮಾತುಗಳು, ಅಮ್ಮನ ಕಣ್ಣಲ್ಲಿ ಕುಸಿದುಹೋದ ಕನಸು ಈಗ ಕವಿಯ ಒಡಲಿನಲ್ಲಿ ಚಿಗುರುತ್ತಿವೆ. ಈ ಚಿಗುರು ಸಾಧಾರಣವಾದದ್ದಲ್ಲ. ಒಂದು ಊಳಿಗಮಾನ್ಯ ವ್ಯವಸ್ಥೆಯನ್ನೇ ದಾಟಿ ಬಂದ ಸಾಹಸವಿದೆ. ಅಕ್ಷರದ ಸುಳಿವೂ ಇಲ್ಲದ ಕುಟುಂಬದಿಂದ ಬಂದ ಕವಿ ಅಕ್ಷರ ಕಲಿತು, ಹೊಸ ಲೋಕದ ಪರಿಚಯ ಪಡೆದು, ಅದರ ಮೂಲಕ ಹೊಸ ಕನಸುಗಳನ್ನು ಕಾಣುವ ತವಕದಲ್ಲಿದ್ದಾನೆ. ಆದರೂ ಹೊಸ ಕನಸುಗಳನ್ನು ಸಾಕಾರಗೊಳಿಸಲಾಗದ ವಿಷಾದವಿದೆ.ಕಳೆದುಹೋದ ದುಃಖಪರ್ವದ ಅಂತ್ಯವಾಗದಿರುವ ಬಗ್ಗೆ ತೀವ್ರ ನಿರಾಶೆಯಿದೆ. ಈ ವಿಷಾದ, ನಿರಾಶೆಗಳು ಮೊಳೆತು ಕ್ರಾಂತಿ ಕಿಡಿಗಳನ್ನು ಹಚ್ಚಬಲ್ಲ ಶಕ್ತಿಯಿದೆಯೇ ಎಂಬ ಪರೀಕ್ಷೆಗೆ ತನ್ನನ್ನೇ ಒಡ್ಡಿಕೊಂಡಿರುವ ಪ್ರಯೋಗಶಾಲೆಯಾಗಿದ್ದಾನೆ ಕವಿ. ಓದು ಕಲಿತು ಪದವೀಧರನಾದೆ ನಿಜ -- ಅದರಿಂದ ನಿನ್ನ ಕಣ್ಣುಗಳಲ್ಲಿನ ದುಃಖದ ಹನಿಗಳನ್ನು ಹಿಂಗಿಸಲಾಗಲಿಲ್ಲ. ನನ್ನ ಓದಿನಿಂದ ಸಂತಸಗೊಂಡದ್ದು ತೋರಿಕೆಯದು ಮಾತ್ರ. ಅದರ ಫಲಗಳನ್ನು ನಾನೇ ಪಡೆಯಲಾಗದೆ ಪರದಾಡುತ್ತಿರುವಾಗ, ಇದರ ಕಿಂಚಿತ್ತು ಅರಿವೂ ಇಲ್ಲದ ನೀನು ಏನು ತಾನೆ ಮಾಡಬಲ್ಲೆಯಪ್ಪ ಎಂಬ ನಿಟ್ಟುಸಿರಿನ ಪೊಟ್ಟಣವಿದೆ.ಈ ಕಾವ್ಯದ ಜೊತೆಗೆ ವ್ಯವಸ್ಥೆಯ ಕರಾಳ ಮುಖ ತನ್ನನ್ನು ಬೆತ್ತಲೆ ಮಾಡಿಕೊಳ್ಳುತ್ತದೆ. ಬೆವರಲ್ಲದೆ ಬೇರಾವ ಆಸ್ತಿ ಇಲ್ಲದ ಅಸಂಖ್ಯ ತಂದೆ ತಾಯಿಯರ ಪ್ರತಿನಿಧಿಗಳಾದ ಅಪ್ಪ-ಅಮ್ಮ ಒಡೆಯನ ಹಟ್ಟಿಯ ಹಬ್ಬದೂಟಕ್ಕೆ ತಮ್ಮ ಖಂಡವಿದುಕೋ, ಮಾಂಸವಿದುಕೋ ಎಂದವರು. ಅವ್ವನ ಬೆವರಿಗೆ ಬೆಲೆಕಟ್ಟದ ಊಳಿಗಮಾನ್ಯ ವ್ಯವಸ್ಥೆಯ ಲಿಂಗಭೇದ ನೀತಿಯ ಪರಿಚಯವನ್ನೂ ಕವಿತೆ ಮಾಡಿಸುತ್ತದೆ. ತಮ್ಮ ಕಷ್ಟಗಳ ಪರಿಹಾರಕ್ಕೆ ತಾಳಿ-ಕಾಲುಂಗುರಗಳನ್ನೂ, ಕಳಾವಾರ, ಅತ್ತಂಟಿಗಳನ್ನು -- ಅಂದರೆ, ತಮ್ಮ ಬದುಕನ್ನು ಮಾತ್ರವಲ್ಲ, ಪಾರಂಪರಿಕವಾಗಿದ್ದ ತಮ್ಮ ಅಸ್ತಿತ್ವವನ್ನೇ ಅಡವಿಟ್ಟರೂ ಮುಗಿಯಲಾಗದ ಜೀವನದ ಜೀತನದಿಯ ನಿರಂತರ ಹರಿಯುವಿಕೆಯ ಜುಳುಜುಳು ಶಬ್ದದ ಅನುರಣನ ಕೇಳಿಸುತ್ತಿದೆ.ಅಕ್ಷರ ಹೊಸ ಕಾಲದ ಸಂಕೇತ, ಪ್ರಜಾಪ್ರಭುತ್ವವೆಂಬ ನವಸೂರ್ಯನ ಉದಯಕಾಲ. ಈ ಪ್ರಜಾಪ್ರಭುತ್ವದ ಮೂಲವೆಂದು ನಂಬಿರುವ ಅಕ್ಷರದೇವನ ಬೆಳಕಲ್ಲೂ ದಲಿತ ಸಮುದಾಯದ ಕತ್ತಲು ಹರಿದಿಲ್ಲವೆಂಬ ಸತ್ಯವಿದೆ. ಅಕ್ಷರ ಕಲಿತು ತನ್ನ ಪಾಲನ್ನು ಕೇಳುವ ಹಕ್ಕೊತ್ತಾಯದ ಸುಳಿವು ನೀಡಿದರೂ, ತನಗೆ ಸಿಕ್ಕಿರುವುದು ಬರಿ ಬಟ್ಟಲು ಮಾತ್ರ. ಚಿಪ್ಪಿನೊಳಗಿನ ಕಾಯಿ, ಎಳನೀರು ಇಂದಿಗೂ ಬೇರೆಯವರ ಪಾಲಾಗಿದೆ.ಉಳ್ಳವರ ತೋಟದಲ್ಲಿ ಅಸ್ಪೃಶ್ಯರಿಗೆ ಚಿಪ್ಪು ಮಾತ್ರ ಎಂಬ ಸತ್ಯವನ್ನು ಹೇಳತೊಡಗಿದೆ. ಪ್ರಜಾಪ್ರಭುತ್ವ ಕೂಡ ಶೋಷಿತರಿಗೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ ಎಂಬುದನ್ನು ಸೂಕ್ಷ್ಮವಾಗಿ, ಪ್ರತಿಮಾತ್ಮಕವಾಗಿ ಹೇಳುವ ಕಲೆಗಾರಿಕೆ ಈ ಕವಿತೆಯಲ್ಲಿದೆ.ಕವಿತೆಯ ಅಂತ್ಯ ಆಶಾದಾಯಕವಾಗಿದೆ. ನೀನು ಬಸಿದ ಬೆವರಿಗೆ ತಕ್ಕ ಬೆಲೆ ತರದೆ, ನೀನು ಅಡವಿಟ್ಟಿರುವ ತಾಳಿ, ಕಾಲುಂಗುರ, ಕಳಾವರ-ಅತ್ತಂಟಿಗಳನ್ನು ಬಿಡಿಸಿಕೊಂಡೇ ಬರುತ್ತೇನೆಂಬ ಛಲವಿದೆ. ನನ್ನ ಪಾಲನು ಪಡೆಯದಿದ್ದರೆ ಅಥವಾ ನನಗೆ ಕೊಡದಿದ್ದರೆ ಅವರನ್ನು ಬಿಡುವುದಿಲ್ಲವೆಂಬ ನವಚೈತನ್ಯದೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.ಶತಮಾನಗಳ ಕಾಲ ಶೋಷಣೆಗೆ ತುತ್ತಾಗಿದ್ದ ತಲೆಮಾರಿನಿಂದ ಕಲಿತಿರುವ ಪಾಠವೇ ನಮ್ಮ ಪಾಲನ್ನು ನಾವು ಪಡೆಯುವುದು. ಸಹಜ ನ್ಯಾಯವನ್ನು ಪಡೆಯದೆ ವಿರಮಿಸುವುದಿಲ್ಲವೆಂಬ ಪ್ರತಿಜ್ಞಾವಿಧಿ ಕಾವ್ಯದ ಮುಕ್ತಾಯವಾಗಿರುವುದು ಕವಿಯ ಸದಾಶಯವನ್ನು ಹೇಳುತ್ತದೆ ಮತ್ತು ಕಾವ್ಯನ್ಯಾಯವನ್ನು ಒದಗಿಸುತ್ತದೆ. ದಲಿತ ಕಾವ್ಯದ ಮುಖ್ಯ ಲಕ್ಷಣವಾದ ದೀನಸ್ಥಿತಿಯನ್ನು ಚಿತ್ರಿಸುವುದು ಮಾತ್ರವಾಗಿದೆ, ತನ್ನ ಮುಂದಿರುವ ವಿಮೋಚನೆಯ ಆಯ್ಕೆಗಳನ್ನು ಕವಿತೆ ತನ್ನೊಳಗಿನಿಂದಲೇ ಸೂಚಿಸುವಂತಿರಬೇಕು. ಅಂತಹ ಸೂಕ್ಷ್ಮ ಸಂವೇದನಾಶೀಲತೆಯೇ ಕವಿತೆಯ ಮುಖ್ಯ ಗುಣ.ತಮ್ಮ ಸಂಸ್ಕೃತಿಯ ಆಳದಿಂದಲೇ ತನ್ನ ಸ್ಥಿತಿಗಳನ್ನು ಚಿತ್ರಿಸುವ ಮತ್ತು ಸಾಂಸ್ಕೃತಿಕ ಪ್ರತಿಮೆಗಳಿಂದಲೇ ಹೊಸ ಹೊಳಹುಗಳನ್ನು ನೀಡಬಲ್ಲ ಶಕ್ತಿ ಈ ಕವಿಗಿದೆ. ಅಸ್ಪೃಶ್ಯ ಸಮುದಾಯದ ಸಾಂಸ್ಕೃತಿಕ ಹಿರಿಮೆ, ಪಾರಂಪರಿಕ ಪ್ರತಿಮೆಗಳನ್ನು ಬಳಸುವತ್ತ ವಚನ ಮೂಲದ ಭಾಷೆಯನ್ನು ಹೆಡೆಮುರಿಕಟ್ಟಿ ಬಳಸುವ ಮಹಾದೇವ ಶಂಕನಪುರ ಹೊಸ ತಲೆಮಾರಿನ ಭರವಸೆಯ ಕವಿ. ತಾವು ಹೇಳಬೇಕಾದ ವಿಚಾರಗಳಿಗೆ ದೇಸೀ ಮೂಲದ ಭಾಷೆಯ ಬನಿಯಿಂದ ಆಕರ್ಷಕಗೊಳಿಸುತ್ತಾರೆ. ಆದ್ದರಿಂದ ಅವರ ಕಾವ್ಯ ಹೊಸ ರೀತಿಯ ಅಭಿವ್ಯಕ್ತಿಗೆ ತುಡಿಯುತ್ತಿರುವಂತೆ ಆಧುನಿಕ ಚಿಂತನೆಗಳಿಗೂ ಒಡ್ಡಿಕೊಂಡಿದೆ. ಕಾವ್ಯದ ಸಫಲತೆ ಇರುವುದೇ ಮೂಲಭಾಷೆಯ ವಯ್ಯಾರದಿಂದ ಆಧುನಿಕ ಚಿಂತನೆಗಳ ಗೋಡೆ ಕಟ್ಟುವುದರಿಂದ. ಆ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವ ಕವಿ ತನ್ನ ಕುಸುರಿ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಬಹುದೊಡ್ಡ ಅಸ್ಪೃಶ್ಯ ಸಮುದಾಯದ ದನಿಯಾಗಿದ್ದಾರೆ.

---------------------------------------------------------------------

ಅಪ್ಪನಿಗೊಂದು ಪತ್ರ

ಮಹಾದೇವ ಶಂಕನಪುರ

ಎದೆಯಾಳದಿ ಬಿಗಿದಪ್ಪಿಕೊಂಡಿದ್ದ ನೆನಪುಗಳು

ತೆವಳಾಡಿದವು ಬಿಚ್ಚಿಕೊಂಡು ಮೊನ್ನೆ

ಇತಿಹಾಸ ಪಾಠ ಹೇಳುವಾಗ ಗೋರಿಗಳ ಮುಂದೆ ನಿಂತು

ಅಪ್ಪ, ನಿನ್ನ ನರಳಾಟಕೆ ಕಣ್ಣೀರಿಗೆ ಸಾವಿಲ್ಲ

ಉಸಿರಾಡುತಿವೆ ನನ್ನೆದೆಯಲಿ ಜೀವ ಪಡೆದು

ನಿನ್ನೊಡಲ ಕಿಚ್ಚಿಗೆ ನನ್ನೆದೆಯ ಅಗ್ನಿಕುಂಡವಿದೆ

ಕತ್ತಲಲಿ ಕೂತು ಅತ್ತು ಕರೆದ ಮೂಕವೇದನೆಗೆ

ನನ್ನ ಕಣ್ಣು ನಾಲಿಗೆ ತುಂಬ ಬೆಂಕಿ ಮಳೆ ಇದೆ

ಗುಡುಗು ಸಿಡಿಲಿನ ಉತ್ತರವಿದೆ!

ನೆನಪಿದೆ ಅಪ್ಪ...

ಪ್ರತಿ ರಾತ್ರಿ ನಿನ್ನೆದೆ ಏರಿ ನಾ ಆಡುವಾಗ

ಅವ್ವ ತೋಡಿಕೊಳ್ಳುತ್ತಿದ್ದ ಹಾಡು-ಪಾಡುಗಳು

ಕಂಠದಲೆ ಹೂತು ಹೋದ ಎಷ್ಟೋ ಮಾತುಗಳು

ಕಣ್ಣಲೇ ಕುಸಿದು ಬಿದ್ದ ಎಷ್ಟೋ ಕನಸುಗಳು

ಚಿಗುರೊಡೆದಿವೆ ನನ್ನೆದೆಯಲೀಗ

ಎಷ್ಟೋ ಆ ನಿಮ್ಮ ಕನವರಿಕೆಗಳು ಕೆಂಡ ಸಂಪಿಗೆಯಾಗಿ!

ಅಪ್ಪ ನಿನ್ನ ತೊಡೆ - ತೋಳ ಖಂಡಗಳ ಕತ್ತರಿಸಿ

ಒಡೆಯನಟ್ಟಿ ಹಬ್ಬದೌತಣಕೆ ತೂಗಿ

ಅವ್ವನ ಬೆವರಿಗೂ ಬೆಲೆ ಕಟ್ಟಿಸಿ ಸಾಲದೆ

ಕಾಲುಂಗುರ ಕಳಾವಾರಗಳ ಅಡವಿಟ್ಟು

ಕರುಳಿಗೂ ಕತ್ತರಿ ಹಾಕಿ ಪಳ್ಳಿ ಕಲಿಸಿದೆ ನೀನು!

ನಾನು ಓದು ಕಲಿತೆ, ಪದವಿ ಪಡೆದೆ ನಿಜ

ನೀನದಕೆ ಹಿಗ್ಗಿಗ್ಗಿ ಹೀರೆಕಾಯಿಯಾದೆ

ನಿನಗೆ ತಕ್ಕ ಪಾಲು ಸಿಗಲಿಲ್ಲ ಹೆಗ್ಗಳಿಕೆಯಷ್ಟೆ ಸಿಕ್ಕಿದ್ದು

ಅಪ್ಪ ನಿಜ ಹೇಳುತ್ತೇನೆ

ನನಗೂ ಸಿಕ್ಕಿದ್ದು ಬರಿ ಬಟ್ಟಲು

ನನ್ನ ಪಾಲನು ನನಗೆ ಕೊಟ್ಟಿಲ್ಲ.

ನನ್ನ ಜಾಗವ ನನಗೆ ಬಿಟ್ಟಿಲ್ಲ!

ಅಪ್ಪ, ಅದಕ್ಕಾಗಿ ಬರೆಯುತ್ತೇನೆ ಪತ್ರ

ನೀ ಬಸಿದ ಬೆವರಿಗೆ ತಕ್ಕ ಬೆಲೆ ತರದೆ

ಅಡವಿಟ್ಟ ಒಡವೆಗಳ ಬಿಡಿಸಿಕೊಳ್ಳದೆ

ನಾನು ಬರುವುದಿಲ್ಲ, ನನ್ನ ಪಾಲನು ಪಡೆಯದೆ

ಯಾರನೂ ಬಿಡುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry