ತಪ್ಪದ ಪುರೋಹಿತಶಾಹಿ ಹಿಡಿತ

7
ಉಪನ್ಯಾಸ ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಸ್ವಾಮೀಜಿ ವಿಷಾದ

ತಪ್ಪದ ಪುರೋಹಿತಶಾಹಿ ಹಿಡಿತ

Published:
Updated:

ಹರಪನಹಳ್ಳಿ: ಜನನ- ಮರಣ, ನಾಮಕರಣ, ವಿವಾಹ, ಗೃಹಪ್ರವೇಶ ಹಾಗೂ ಅದರಾಚೆಗೆ ಗಂಡ- ಹೆಂಡತಿಯ ಪ್ರಸ್ತವೂ ಸೇರಿದಂತೆ ಮನುಷ್ಯನ ಖಾಸಗೀ ಬದುಕಿನ ಮೇಲೆ ಪುರೋಹಿತಗಾಮಿ ಸಂಸ್ಕೃತಿ ವ್ಯವಸ್ಥಿತವಾಗಿ ಸವಾರಿ ಮಾಡುತ್ತಿರುವುದು ದುರ್ದೈವದ ಪರಮಾವಧಿ ಎಂದು ಬೆಂಗಳೂರು ನಿಡುಮಾಮಿಡಿ ಮಹಾಸಂಸ್ಥಾನದ ಮಾನವಧರ್ಮ ಪೀಠದ  ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಹೊಸ ಜೋಯಿಸರಗೇರಿಯಲ್ಲಿ ಭಾನುವಾರ ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಹಾಗೂ ಭಾರತೀಯ ಜನಕಲಾ ಮಂಡಳಿ (ಇಫ್ಟಾ) ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ `ಪ್ರಳಯದ ಭೀತಿ ಹಾಗೂ ವೈಜ್ಞಾನಿಕ ದೃಷ್ಟಿಕೋನ' ಕುರಿತು ಅವರು ಉಪನ್ಯಾಸ ಮಂಡಿಸಿದರು.ದೇಶದಲ್ಲಿ ಬಡತನದ ಭೂತಕ್ಕಿಂತ, ಅಜ್ಞಾನದ ಅಂಧತ್ವ ನೈಜ ಭೂತದ ರೀತಿಯಲ್ಲಿ ಅಮಾಯಕರ ಬದುಕನ್ನು ಹೊಸಕಿ ಹಾಕುತ್ತಿದೆ. ಬಡಕ್ಕಿಂತ ಕ್ರೂರವಾಗಿ ನಮ್ಮ ಜನರನ್ನು ಅಜ್ಞಾನ ಬಾಧಿಸುತ್ತಿದೆ. ಅಜ್ಞಾನದ ಪಾಪಕೂಪದಲ್ಲಿ ತೊಳಲಾಡುತ್ತಿರುವ ಸಾಮಾಜಿಕ ವ್ಯವಸ್ಥೆಗೆ ಮೊದಲು ವಿಮೋಚನೆಯ ಚಿಕಿತ್ಸೆ ಕೊಡಿಸಬೇಕಾಗಿದೆ. ವೈದಿಕ ಸಂಸ್ಕೃತಿಯ ದಾಸ್ಯತನದ ದಾರಿದ್ರ್ಯದಲ್ಲಿ ಮುಳುಗೇಳುತ್ತಿರುವ ವ್ಯವಸ್ಥೆಗೆ ಬಿಡುಗಡೆಗೊಳಿಸಬೇಕಾದ ಪ್ರಯತ್ನಗಳು ನಡೆಯಬೇಕಿದೆ. ಈ ಹಿಂದೆಯೂ ಜಿಡ್ಡುಗಟ್ಟಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಮನ್ವಂತರ ಹುಟ್ಟುಹಾಕುವ ನೆಲೆಗಟ್ಟಿನಲ್ಲಿ ವೈಚಾರಿಕ ಹಾಗೂ ಬೌದಿಕ ಸಂಘರ್ಷಗಳ ಹೋರಾಟ ನಡೆದಿರುವುದನ್ನು ನಾವು ಕಾಣುತ್ತೇವೆ ಎಂದು ಮೆಲುಕು ಹಾಕಿದರು.ದಲಿತ ಹಾಗೂ ಹಿಂದುಳಿದ ಬಹುಸಂಖ್ಯಾತ ತಳಸಮುದಾಯಗಳ ಬದುಕನ್ನು ನಿಕೃಷ್ಟವಾಗಿ ನಡೆಸಿಕೊಂಡು ಹೋಗುತ್ತಿದ್ದ ವೈದಿಕ ಸಂಸ್ಕೃತಿ ವಿರುದ್ಧ ಆರಂಭದಲ್ಲಿ ಸಮರ ಸಾರಿದವರು ಜಗತ್ತಿನ ಮೊಟ್ಟಮೊದಲ ಕಮ್ಯುನಿಸ್ಟರು ಎಂದೇ ಪ್ರತೀತಿ ಪಡೆದಿದ್ದ ಲೋಕಾಯತ ಪಂಥ. ನಂತರ, ಭಕ್ತಿಪಂಥದ ದಾರ್ಶನಿಕರು, ಅನುಭಾವಿಗಳು, ಸಾಧು- ಸಂತರು, ಸೂಫಿಗಳು ಶೋಷಿತ ವ್ಯವಸ್ಥೆಯ ವಿರುದ್ಧ ಹೋರಾಟದ ಕಹಳೆ ಮೊಳಗಿಸುತ್ತಲೇ ಬಂದಿದ್ದಾರೆ.ಆದರೂ, ಇದುವರೆಗೂ ಗಟ್ಟಿಯಾದ ನಮ್ಮತನವನ್ನು ರೂಢಿಸಿಕೊಳ್ಳಲು ಸಾಧ್ಯವಾಗಿಲ್ಲ. ವೈದಿಕ ಸಂಸ್ಕೃತಿಯ ಮಾಯಭ್ರಾಂತಿಯ ಮೋಹಕ ವಶೀಕರಣ ಪ್ರಭಾವಕ್ಕೆ ಒಳಗಾಗಿದ್ದೇವೆ. ಆ ಸಂಸ್ಕೃತಿಯೊಳಗಿನ ಹುಸಿತನವನ್ನು ಇನ್ನೂ ನಮ್ಮಜನಗಳಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.ಬಂಡಾಯ ಸಾಹಿತಿ ಡಾ.ಸಿದ್ದನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಈ. ಬಸವರಾಜ್, ಹನುಮಂತಪ್ಪ ಸಂಗಪ್ಪನವರ್, ರತ್ನಮ್ಮ, ಬಸವರಾಜ್ ಹಾಗೂ ಲಕ್ಷ್ಮೀದೇವಿ ಸಂಗಪ್ಪನವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರೊ.ತಿಮ್ಮಣ್ಣ ಸ್ವಾಗತಿಸಿದರು. ಶಿಕ್ಷಕರಾದ ಗಂಗಾಧರ ನಿರೂಪಿಸಿದರು.  ನೀಲಗುಂದ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry