ಬುಧವಾರ, ಏಪ್ರಿಲ್ 21, 2021
32 °C

ತಪ್ಪದ ಸಮಸ್ಯೆ: ಸಂಚಾರಕ್ಕೆ ಸಂಚಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ನಗರದಲ್ಲಿ ಪದೇ ಪದೇ ಸಮಸ್ಯೆ ಎದುರಾಗುವ ಸ್ಥಳದಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದೆ ಗುರುವಾರ ಸಂಚಾರಕ್ಕೆ ಅಡ್ಡಿಯಾಯಿತು. ನಗರದಿಂದ ತುರುವೇಕೆರೆ ಸಂಪರ್ಕಿಸುವ ವೈ.ಟಿ.ರಸ್ತೆ ಆರಂಭದಲ್ಲೇ ಇರುವ ರೈಲ್ವೆ ಮೇಲು ಸೇತುವೆ ಬಳಿಯ ಸಮಸ್ಯೆ ಇಂದು ನೆನ್ನೆಯದಲ್ಲ. ತೀರಾ ತಗ್ಗಿನಲ್ಲಿ ಸಾಗುವ ಈ ರಸ್ತೆಯಲ್ಲಿ ರೈಲ್ವೆ ಸೇತುವೆ ಕೆಳಗೆ ಸ್ವಲ್ಪ ಮಳೆ ಬಂದರೂ ವಾಹನ ಸಂಚರಿಸದಷ್ಟು ನೀರು ನಿಲ್ಲುತ್ತದೆ.ರೈಲ್ವೆ ಮಾರ್ಗ ನಿರ್ಮಾಣವಾದಾಗಲೆ ಅಸ್ತಿತ್ವ ಕಂಡಿರುವ ಮೇಲ್ಸೇತುವೆ ಸ್ಥಳದ ಎರಡು ಬದಿಯ ಇಳಿಜಾರು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿತ್ತು. ಆದರೆ ಕ್ರಮೇಣ ಸರಿಯಾದ ನಿರ್ವಹಣೆ ಇಲ್ಲದೆ ಸ್ವಲ್ಪ ಮಳೆ ಬಂದರೂ ಒಳಗೆ ಮಾಡಿರುವ ಚರಂಡಿಯಲ್ಲಿ ಹರಿಯದೆ ತುಂಬಿ ನಿಲ್ಲುತ್ತದೆ. ಇದರಿಂದ ಲಘು ವಾಹನಗಳಂತೂ ಓಡಾಡದ ಸ್ಥಿತಿ ನಿರ್ಮಾಣವಾಗುತ್ತದೆ. ಗುರುವಾರ ಕೂಡ ಸಂಚಾರ ತೊಡಕು ಬಿಗಡಾಯಿಸಿತ್ತು.ಆಟೊ ಕೂಡ ಮುಕ್ಕಾಲು ಭಾಗ ಮುಳುಗುವಷ್ಟು ನೀರು ನಿಂತಿದ್ದರಿಂದ ಲಾರಿ, ಬಸ್‌ಗಳು ಸಾವರಿಸಿಕೊಂಡು ಹೋಗಲು ಅರ್ಧ ಕಿ.ಮೀ.ನಷ್ಟು ಸಾಲು ನಿರ್ಮಾಣವಾಗಿತ್ತು. ನಗರದ ಗಾಂಧಿ ನಗರ ಸಂಪರ್ಕಿಸಲು ಇದೇ ರಸ್ತೆ ಬಳಸಬೇಕಿದೆ. ರೈಲ್ವೆ ಗೇಟ್ ಹಾಕಿದಾಗ ನಿತ್ಯ ಸಂಚಾರ ಸಮಸ್ಯೆ ಎದುರಾಗುತ್ತಿದ್ದ ಈ ಸ್ಥಳದಲ್ಲಿ ಲಘು ವಾಹನಗಳು ಮಾತ್ರ ಸಂಚರಿಸುವಂತೆ ಕೆಲ ತಿಂಗಳ ಹಿಂದೆ ಹಾಕಿದ್ದ ಮೇಲ್ತಡೆ ಕಂಬಿಯೊಂದು ಕುಸಿದು ಬಿದ್ದಿತ್ತು. ವಾಹನವೊಂದರ ಮೇಲ್ಛಾವಣಿ ತಗುಲಿ ಕಂಬಿ ಬಿದ್ದಿದ್ದರಿಂದ ಒಂದು ಬೈಕ್ ಮಾತ್ರ ಹೋಗುವಷ್ಟು ಜಾಗ ಉಳಿದಿತ್ತು.

ಲಘು ವಾಹನಗಳಲ್ಲಿ ಗಾಂಧಿನಗರಕ್ಕೆ ತರಳಬೇಕಾದವರು ಅತ್ತ ವೈ.ಟಿ.ರಸ್ತೆ ಮಾರ್ಗದಲ್ಲೂ ಬರಲಾಗದೆ, ಇತ್ತ ರೈಲ್ವೆ ಗೇಟ್ ರಸ್ತೆಯಲ್ಲೂ ಸಂಚರಿಸಲಾಗದೆ ಪರದಾಡುವಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.