ತಪ್ಪಾಗಿದ್ದರೆ ನೇಣಿಗೆ ಏರಿಸಿ

7

ತಪ್ಪಾಗಿದ್ದರೆ ನೇಣಿಗೆ ಏರಿಸಿ

Published:
Updated:

ನವದೆಹಲಿ (ಪಿಟಿಐ): ಅಣ್ಣಾ ತಂಡದ ಕೆಲವು ಸದಸ್ಯರು ವಿವಾದದಲ್ಲಿ ಸಿಲುಕಿರುವ ಈ ಸಂದಿಗ್ಧದಲ್ಲಿ ಹೇಳಿಕೆ ನೀಡಿರುವ ತಂಡದ ಸದಸ್ಯೆ ಕಿರಣ್ ಬೇಡಿ `ನಿಮಗೆ ಅನುಕೂಲ ಆಗುವುದಾದರೆ ನಮ್ಮಲ್ಲಿ ಕೆಲವರನ್ನು ನೇಣಿಗೆ ಹಾಕಿ~ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.`ಅಣ್ಣಾ ತಂಡದ ಸದಸ್ಯರ ತೇಜೊವಧೆ ಮಾಡುವ ಷಡ್ಯಂತ್ರ ಮೊದಲಿನಿಂದಲೂ  ವ್ಯವಸ್ಥಿತವಾಗಿ ನಡೆಯುತ್ತಿರುವುದು ಖಚಿತ~ ಎಂದು ಸಂಸ್ಥೆಯೊಂದರಿಂದ ಹೆಚ್ಚುವರಿ ವಿಮಾನ ಪ್ರಯಾಣ ದರ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹೇಳಿದ್ದಾರೆ.ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಹಾಗೂ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಣ್ಣಾ ತಂಡದ ಸದಸ್ಯರು ಶ್ರಮಿಸುತ್ತಿದ್ದಾರೆ. ಇದಕ್ಕಾಗಿಯೇ ಪ್ರಬಲ ಜನಲೋಕಪಾಲ ಮಸೂದೆಯನ್ನು ಸಂಸತ್‌ನಲ್ಲಿ ಅಂಗೀಕರಿಸುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದರು.ಅಣ್ಣಾ ಚಳವಳಿ ಸಂದರ್ಭದಲ್ಲಿ ಸಂಗ್ರಹವಾದ ದೇಣಿಗೆಯನ್ನು ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಅವರು ದುರುಪಯೋಗ ಪಡಿಸಿಕೊಂಡು ತಮ್ಮ ಖಾಸಗಿ ಟ್ರಸ್ಟ್‌ನಲ್ಲಿ ಠೇವಣಿ ಇಟ್ಟಿದ್ದಾರೆ   ಎನ್ನುವ ಆರೋಪ ಬಂದ ನಂತರ ಬೇಡಿ ಇಂತಹ ಹೇಳಿಕೆ ನೀಡಿದ್ದಾರೆ. ಈ ಟ್ರಸ್ಟ್ ನಲ್ಲಿ ಅಣ್ಣಾತಂಡದ ಯಾವೊಬ್ಬ ಪ್ರಮುಖ ಸದಸ್ಯರೂ ಸದಸ್ಯತ್ವ ಪಡೆದಿಲ್ಲ ಎಂದೂ ಅವರು (ಬೇಡಿ) ಸ್ಪಷ್ಟನೆ ನೀಡಿದ್ದಾರೆ.`ಈಗ ಏನಿದ್ದರೂ, ಚಳಿಗಾಲದ ಸಂಸತ್ ಅಧಿವೇಶನದತ್ತ ನಮ್ಮ ಗಮನ ನೆಟ್ಟಿದೆ. ಜನಲೋಕಪಾಲ ಮಸೂದೆ ಅಂಗೀಕಾರಕ್ಕೆ ನಾವು ಖಾತರದಿಂದ ಕಾಯುತ್ತಿದ್ದೇವೆ~ ಎಂದರು.ಅಣ್ಣಾ ತಂಡದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದು, ಅವರೆಲ್ಲರೂ ಒಗ್ಗಟ್ಟಿನಿಂದ ಇರುವ ಅಗತ್ಯ ಇದೆ ಎಂದು ಹೇಳಿದರು.`ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ ರಿಯಾಯ್ತಿ ಪಡೆದು, ಹೆಚ್ಚುವರಿ ಹಣವನ್ನು ಸಂಸ್ಥೆಗಳಿಂದ ಪಡೆದು ಅದನ್ನು ಬಡವರ ಉದ್ದಾರಕ್ಕೆ ಬಳಸುತ್ತಿರುವುದು ತಪ್ಪಾದರೆ ನನ್ನನ್ನೂ ಶಿಕ್ಷಿಸಲಿ~ ಎಂದು ಬೇಡಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry