ಸೋಮವಾರ, ಮೇ 17, 2021
21 °C
ಶಾಸಕರಿಂದ ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆಗೆ ಯತ್ನ: ಆರೋಪ

ತಪ್ಪಿತಸ್ಥರಿಗೆ ಮೇಲಧಿಕಾರಿಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹೇರೋಹಳ್ಳಿ ಕಂದಾಯ ಉಪ ವಿಭಾಗದಲ್ಲಿ ಸಂಗ್ರಹಿಸಲಾದ ತೆರಿಗೆ ಹಣದ ದುರುಪಯೋಗ ಪ್ರಕರಣ ಬಯಲಿಗೆಳೆದ ಅಧಿಕಾರಿಗಳನ್ನು ಸ್ಥಳೀಯ ಶಾಸಕರು ವರ್ಗಾವಣೆ ಮಾಡಲು ಒತ್ತಡ ಹೇರುತ್ತಿದ್ದು, ತಪ್ಪಿತಸ್ಥ ನೌಕರರನ್ನು ಮೇಲಧಿಕಾರಿಗಳು ರಕ್ಷಿಸುತ್ತಿದ್ದಾರೆ' ಎಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘ ಆರೋಪಿಸಿದೆ.ಸಂಘದ ಅಧ್ಯಕ್ಷ ಆರ್. ಸುಬ್ರಹ್ಮಣ್ಯಂ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದರು.`ಹಗರಣವನ್ನು ಬಯಲಿಗೆಳೆದ ರಾಜರಾಜೇಶ್ವರಿನಗರ ವಲಯದ ಸಹ ಕಂದಾಯ ಅಧಿಕಾರಿ ಶಿವಯ್ಯ ಮತ್ತು ಪ್ರಥಮದರ್ಜೆ ಸಹಾಯಕ ಶಿವಕುಮಾರ್ ಮಾರ್ಚ್ 26ರಂದು ವಲಯ ಉಪ ಆಯುಕ್ತರಿಗೆ (ಕಂದಾಯ) ವರದಿ ನೀಡಿದ್ದರು.ಎರಡೂವರೆ ತಿಂಗಳು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಸುಮ್ಮನಿದ್ದ ಉಪ ಆಯುಕ್ತರು, ಪ್ರಕರಣ ಬೆಳಕಿಗೆ ತಂದ ಅಧಿಕಾರಿಗಳನ್ನು ಜೂನ್ 5ರಂದು ವರ್ಗಾವಣೆ ಮಾಡಲು ಮುಂದಾಗಿದ್ದಾರೆ' ಎಂದು ದೂರಿದರು.`ಒಂದೇ ಡಿ.ಡಿಯನ್ನು ಹಲವು ಆಸ್ತಿಗಳ ತೆರಿಗೆ ಸ್ವೀಕೃತಿಗೆ ಬಳಸಿಕೊಂಡಿರುವುದು, ಸುಧಾರಣಾ ಶುಲ್ಕಕ್ಕೆ ಬೋಗಸ್ ರಸೀದಿ ನೀಡಿರುವುದು, ನಕಲು ಖಾತಾ ಪ್ರಮಾಣಪತ್ರ ನೀಡಿರುವುದು ಸೇರಿದಂತೆ ಹಲವು ಅಕ್ರಮಗಳನ್ನು ಮೂವರು ಕರ ವಸೂಲಿಕಾರರು ಎಸಗಿದ್ದಾರೆ' ಎಂದು ಆರೋಪಿಸಿದರು.`ಅವ್ಯವಹಾರ ಬೆಳಕಿಗೆ ತಂದ ಇಬ್ಬರೂ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ರಾಜರಾಜೇಶ್ವರಿನಗರದ ಶಾಸಕರು ಈ ಅಧಿಕಾರಿಗಳ ವರ್ಗಾವಣೆಗೆ ಒತ್ತಡ ಹೇರಿದ್ದಾರೆ. ಇದನ್ನೆಲ್ಲ ಚರ್ಚಿಸಲು ಆಯುಕ್ತರನ್ನು ಭೇಟಿ ಮಾಡಲು ಯತ್ನಿಸಿದರೆ ಅವರ ಆಪ್ತ ಶಾಖೆ ಸಿಬ್ಬಂದಿ ಇದುವರೆಗೆ ಅವಕಾಶ ನೀಡಿಲ್ಲ. ಆಯುಕ್ತರನ್ನು ಭೇಟಿ ಮಾಡುವ ಯತ್ನ ಸಫಲವಾಗಿಲ್ಲ' ಎಂದು ಹೇಳಿದರು.`ರಾಜರಾಜೇಶ್ವರಿನಗರ ವಲಯವಲ್ಲದೆ ಇತರ ಏಳೂ ವಲಯಗಳಲ್ಲಿ ಸಹ ಇಂತಹ ಪ್ರಕರಣಗಳು ನಡೆಯುತ್ತಿದ್ದು, ಸಮಗ್ರವಾದ ತನಿಖೆ ನಡೆಸಬೇಕು. ರಿಯಲ್ ಎಸ್ಟೇಟ್ ಕೇಂದ್ರಗಳಂತಾದ ಸಹಾಯ ಕೇಂದ್ರಗಳನ್ನು ಮುಚ್ಚಬೇಕು. ಹಗರಣ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ರಕ್ಷಣೆ ಒದಗಿಸಬೇಕು. ಆಸ್ತಿ ತೆರಿಗೆ ಸಂಗ್ರಹದಲ್ಲಿ ಮೊದಲಿದ್ದ ಬೇಡಿಕೆ, ಸಂಗ್ರಹ ಮತ್ತು ಬಾಕಿ (ಡಿಸಿಬಿ) ರಿಜಿಸ್ಟ್ರಾರ್ ಮತ್ತೆ ನಿರ್ವಹಣೆ ಮಾಡಬೇಕು. ಹಗರಣ ನಡೆದರೂ ಸುಮ್ಮನಿದ್ದ ಉಪ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.`ಬಿಬಿಎಂಪಿಯಲ್ಲಿ ಎರವಲು ಸೇವೆ ಮೇಲೆ ನೌಕರರನ್ನು ಪಡೆಯದೆ ಅಗತ್ಯ ಸಂಖ್ಯೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಪ್ರತಿ ನೌಕರನ ಸೇವಾ ದಾಖಲೆಯನ್ನು ಆನ್‌ಲೈನ್ ವ್ಯವಸ್ಥೆಗೆ ಅಳವಡಿಸಬೇಕು. ಸರದಿಯಂತೆ ಮೂರು ವರ್ಷಕ್ಕೊಮ್ಮೆ ಪ್ರತಿಯೊಬ್ಬ ನೌಕರನನ್ನು ವರ್ಗ ಮಾಡಬೇಕು' ಎಂದು ಅವರು ಆಗ್ರಹಿಸಿದರು.ಕಾರ್ಯದರ್ಶಿ ಪಿ.ದಯಾನಂದ, ಉಪಾಧ್ಯಕ್ಷ ಕೆ.ಟಿ. ನಾಗರಾಜ್, ಜಂಟಿ ಕಾರ್ಯದರ್ಶಿ ಬಾಬು ಸೇರಿದಂತೆ ಸಂಘದ ಮುಖಂಡರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.