ಬುಧವಾರ, ಏಪ್ರಿಲ್ 21, 2021
25 °C

ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು, ಬಂಗಾರಪೇಟೆ ಹಾಗೂ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ರಾಜ್ಯ ಸರ್ಕಾರ ಅಲ್ಲಿನ ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡಿದೆ. ನೀತಿ ಸಂಹಿತೆಯನ್ನು ಪಾಲಿಸಬೇಕಾದ ಸರ್ಕಾರವೇ ಅದನ್ನು ಉಲ್ಲಂಘಿಸಿ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಈ ಬೆಳವಣಿಗೆ ನಿಜಕ್ಕೂ ದುರದೃಷ್ಟಕರ. ಹಣ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂತು. ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡಿದ್ದರ ಹಿಂದೆ ಆಡಳಿತ ಪಕ್ಷದ ಅಭ್ಯರ್ಥಿಗಳಿಗೆ ನೆರವಾಗುವ ದುರದ್ದೇಶವಿದೆ. ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರಿಸಿರುವ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಹಣ ಬಿಡುಗಡೆ ಮಾಡಿದ್ದು ತಪ್ಪು ಎಂದಾದರೆ ಕ್ಷಮಿಸಿ ಎಂದಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರೂ ಇದೇ ಧಾಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಣ ಬಿಡುಗಡೆ ಮಾಡಿದ್ದಕ್ಕೆ ಅವರು ನೀಡಿದ ಸಮರ್ಥನೆಗಳು ವಿಚಿತ್ರವಾಗಿವೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಣ ಬಿಡುಗಡೆ ಮಾಡಿದ್ದು ಕರ್ತವ್ಯ ಲೋಪ. ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಈ ಇಬ್ಬರೂ ಹಿರಿಯ ಐಎಎಸ್ ಅಧಿಕಾರಿಗಳು ‘ತಪ್ಪು ಮಾಡಿದ್ದೇವೆ ಕ್ಷಮಿಸಿ, ಇನ್ನು ಮುಂದೆ ಹೀಗಾದಂತೆ ನೋಡಿಕೊಳ್ಳುತ್ತೇವೆ’ ಎಂದು ಹೇಳುವುದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ಚುನಾವಣಾ ನೀತಿಸಂಹಿತೆಯನ್ನು ಜಾರಿಗೆ ತರಬೇಕಾದ ಈ ಅಧಿಕಾರಿಗಳು ಅದನ್ನು ಉಲ್ಲಂಘಿಸಿ ತಪ್ಪು ಮಾಡಿದ್ದೇವೆ ಕ್ಷಮಿಸಿ ಎಂದು ಕೇಳುವುದು ಬೇಜವಾಬ್ದಾರಿ ನಡವಳಿಕೆ.

 ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟಿನ ನಿಯಮಮಾವಳಿಗಳನ್ನು ರೂಪಿಸಿದ್ದರೂ ಅವು ಜಾರಿಯಾಗುತ್ತಿಲ್ಲ. ನೀತಿ ಸಂಹಿತೆಯನ್ನು ಜಾರಿಗೆ ತರಬೇಕಾದ ಸರ್ಕಾರಿ ಅಧಿಕಾರಿಗಳು ರಾಜಕೀಯ ಪಕ್ಷಗಳ ವಕ್ತಾರರಂತೆ ವರ್ತಿಸುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅಮಾಯಕತನ ಪ್ರದರ್ಶಿಸುತ್ತಾರೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ  ಜಾರಿಗೆ ತರುವುದು ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಮೊದಲ ಕರ್ತವ್ಯ. ಜನತೆ ಮತ್ತು ಚುನಾವಣಾ ಆಯೋಗ ಅವರಿಂದ ಅದನ್ನೇ ನಿರೀಕ್ಷಿಸುತ್ತದೆ. ಮತ ದಾರರ ಬೆಂಬಲ ಪಡೆಯಲು ಆಡಳಿತ ಪಕ್ಷವೂ ಸೇರಿದಂತೆ ರಾಜಕೀಯ ಪಕ್ಷಗಳು ಆಮಿಷಗಳನ್ನು ತೋರಿಸುವುದು ಸಹಜ. ಆದರೆ ಸರ್ಕಾರಿ ಯಂತ್ರದ ದುರುಪಯೋಗಕ್ಕೆ ಅವಕಾಶ ಕೊಡಬಾರದು. ಮೂರೂ ಕ್ಷೇತ್ರಗಳ ವ್ಯಾಪ್ತಿ ಯಲ್ಲಿ ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡಿದ ಅಧಿಕಾರಿಗಳಿಂದ ವಿವರಣೆ ಪಡೆದು ಅವರ ಕರ್ತವ್ಯ ಲೋಪಕ್ಕೆ ಕಾನೂನುಬದ್ಧ ಶಿಕ್ಷೆ ವಿಧಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.