ತಪ್ಪಿತಸ್ಥರಿಗೆ ಶಿಕ್ಷೆ: ಪ್ರಧಾನಿ ಭರವಸೆ

7

ತಪ್ಪಿತಸ್ಥರಿಗೆ ಶಿಕ್ಷೆ: ಪ್ರಧಾನಿ ಭರವಸೆ

Published:
Updated:

ನವದೆಹಲಿ (ಪಿಟಿಐ): ‘ಸಾರ್ವಜನಿಕ ಜೀವನವನ್ನು ಸ್ವಚ್ಛವಾಗಿಡಲು ಸರ್ಕಾರ ಎಲ್ಲ ಪ್ರಯತ್ನವನ್ನೂ ಮಾಡುತ್ತದೆ. ಯಾವ ತಪ್ಪಿತಸ್ಥರೂ ಶಿಕ್ಷೆಯಿಂದ ಪಾರಾಗಲು ಅವಕಾಶ ನೀಡುವುದಿಲ್ಲ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಲೋಕಸಭೆಗೆ ಭರವಸೆ ನೀಡಿದರು.ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಸಂದರ್ಭದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 2ಜಿ ಸ್ಪೆಕ್ಟ್ರಂ ಹಗರಣದ ಜೆಪಿಸಿ ತನಿಖೆ, ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಬಿಐ ತನಿಖೆ ಇತ್ಯಾದಿಯನ್ನು ಉದಾಹರಿಸಿದರು. ಸತ್ಯ ಹೊರಬೀಳಲು ಸಾಧ್ಯವಾಗುವಂತೆ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳಿಗೂ ಸಂಪೂರ್ಣ ಸಹಕಾರ ನೀಡುತ್ತದೆ ಎಂದೂ ಹೇಳಿದರು.‘ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣವನ್ನು ತರಲು ಸರ್ಕಾರ ಬದ್ಧವಾಗಿದೆ. ಈ ವಿಷಯದಲ್ಲಿ ನಾವು ವಿರೋಧ ಪಕ್ಷಗಳ ಜೊತೆ ಒಂದಾಗಿದ್ದೇವೆ’ ಎಂದರು. ‘ಸಾಕಷ್ಟು ಹಳೆಯದಾದ ಕಪ್ಪುಹಣದ ಸಮಸ್ಯೆ ನಿರ್ವಹಣೆ ಬಗ್ಗೆ ಸರ್ವ ಪಕ್ಷಗಳ ಜೊತೆ ಕುಳಿತು ಚರ್ಚಿಸಲು ಸಿದ್ಧವಿದ್ದೇವೆ. ಎಲ್ಲ ರಚನಾತ್ಮಕ ಸಲಹೆಗಳನ್ನೂ ಪರಿಗಣಿಸಲಾಗುತ್ತದೆ’ ಎಂದು ಆಶ್ವಾಸನೆ ಇತ್ತರು.ಸಿಂಗ್ ಪ್ರತಿಕ್ರಿಯೆಯ ಬಳಿಕ ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. 55 ನಿಮಿಷಗಳ ಭಾಷಣದಲ್ಲಿ ಭ್ರಷ್ಟಾಚಾರ, ಹಣದುಬ್ಬರ, ಆಂತರಿಕ ಭದ್ರತೆ, ವಿದೇಶಾಂಗ ನೀತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸದಸ್ಯರು ಎತ್ತಿದ್ದ ಎಲ್ಲ ವಿಷಯಗಳಿಗೂ ಪ್ರಧಾನಿ ವಿವರವಾದ ಪ್ರತಿಕ್ರಿಯೆ ನೀಡಿದರು. ಹಗರಣಗಳ ಪ್ರಸ್ತಾಪ ಬಂದಾಗ, 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದರೆ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಇದೇ ವೇಳೆ ಈ ಕ್ಷೇತ್ರದಲ್ಲಿ ನಡೆದಿರುವ ಅಗಾಧ ಬೆಳವಣಿಗೆಯನ್ನು ನಾವು ಮರೆಯಬಾರದು ಎಂದರು.1999ರಿಂದ ಜಾರಿಯಲ್ಲಿರುವ ದೂರಸಂಪರ್ಕ ನೀತಿಯನ್ನು ಸಮರ್ಥಿಸಿಕೊಂಡ ಸಿಂಗ್, ಇದು ಭಾರಿ ಲಾಭವನ್ನೇ ತಂದುಕೊಟ್ಟಿದೆ. ಆದರೆ ತಪ್ಪು ನಡೆದಿರುವುದು ಅದರ ಜಾರಿಯಲ್ಲಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry