ಶನಿವಾರ, ಏಪ್ರಿಲ್ 17, 2021
27 °C

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ರಸ್ತೆ ಡಾಂಬರೀಕರಣ ಮಾಡುವಂತೆ ಕೋರಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಮತ್ತು ಬಂಧನಕ್ಕೆ ಒಳಗಾಗಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.ಹಲವು ದಿನಗಳಿಂದ ಮಾಡಲಾಗುತ್ತಿದ್ದ ಶಹಾಪುರ ಗ್ರಾಮದ ಜನತೆಯ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಬೇಕಿತ್ತು. ಆದರೆ, ಎರಡು ಸಲ ಆಶ್ವಾಸನೆ ನೀಡಿದ ನಂತರವೂ ರಸ್ತೆ ಕಾಮಗಾರಿ ಆರಂಭ ಆಗದಿರುವುದು ಜನ ರೋಸಿ ಹೋಗುವಂತೆ ಮಾಡಿತ್ತು. ನ್ಯಾಯಯುತ ಬೇಡಿಕೆಗಾಗಿ ಪ್ರತಿಭಟನೆ ಮಾಡುತ್ತಿದ್ದ ಅಮಾಯಕರ ಮೇಲೆ, ರೈತರು, ಮಹಿಳೆಯರು, ಮಕ್ಕಳೆನ್ನದೇ ಲಾಠಿ ಪ್ರಹಾರ ಮಾಡಿರುವುದು ಖಂಡನಾರ್ಹ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ಹಲವು ಕಡೆಗಳಲ್ಲಿ ಇರುವ ರಸ್ತೆಗಳಲ್ಲಿ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ಆದರೆ, ಶಹಾಪುರ ಗ್ರಾಮದ ರಸ್ತೆಯ ಡಾಂಬರೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿಯುಂಟು ಮಾಡುತ್ತಿರುವುದು ಸೋಜಿಗದ ಸಂಗತಿ. ಜನರಿಗೆ ನ್ಯಾಯ ಒದಗಿಸಬೇಕಾದ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದರಿಂದ ಜನ ಪರದಾಡುವ ಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದರು.ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿರಪರಾಧಿಗಳನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಅವರನ್ನು ಬಿಡುಗಡೆ ಮಾಡಬೇಕು. ಮತ್ತು ಕೂಡಲೇ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಸಹಾಯ ಹಸ್ತ ಚಾಚುವ ಸರ್ಕಾರ ಈ ಭಾಗದ ಕಾರ್ಖಾನೆಗಳನ್ನು ಕಡೆಗಣಿಸುತ್ತಿದೆ. ಖಾಸಗೀಕರಣ ಮಾಡುವುದು ಮತ್ತು ಬೇರೆಯವರಿಗೆ ಪರಭಾರೆ ಮಾಡುವ ಬಗ್ಗೆ ಯೋಚಿಸುತ್ತಿದೆ. ಇದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಬಿಎಸ್‌ಎಸ್‌ಕೆ ಖಾಸಗೀಕರಣ ಮಾಡುವ ಬದಲು ಮೈಶುಗರ್ ಕಾರ್ಖಾನೆಗೆ ನೀಡಿದ ಹಾಗೆ ಸಹಾಯ ನೀಡಬೇಕು ಎಂದು ಅವರು ಆಗ್ರಹಿಸಿದರು.

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ನೇತೃತ್ವದ ಸರ್ಕಾರವು ರೈತ ವಿರೋಧಿ ಧೋರಣೆ ಅನುಸರಿಸುತ್ತ ಬಂದಿದೆ. ಸರ್ಕಾರ ಜವಾಬ್ದಾರಿ ನಿರ್ವಹಿಸದೇ ಇರುವುದರಿಂದ ರೈತರು ಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಶಾಸಕ ರಹೀಮ್‌ಖಾನ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅರವಿಂದಕುಮಾರ ಅರಳಿ, ಸಂಜಯ್ ಜಹಾಗೀರದಾರ, ವೀರಣ್ಣ ಕಾರಬಾರಿ ಉಪಸ್ಥಿತರಿದ್ದರು.ಮಟ್ಕಾ ಬುಕ್ಕಿ ಬಂಧನ

ಔರಾದ್: ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಪೊಲೀಸರು ಸೋಮವಾರ ಪಟ್ಟಣದ ಚರ್ಚ್ ಬಳಿ ಬಂಧಿಸಿದ್ದಾರೆ. ಬಂಧಿತನು ಚಂದ್ರಕಾಂತ ಬೋಬಾರ ಎಂದು ಗುರುತಿಸಲಾಗಿದೆ. ಈತನಿಂದ ರೂ. 1070 ಮತ್ತು ಮಟ್ಕಾ ಚೀಟಿ ಜಪ್ತಿ ಮಾಡಿಕೊಂಡಿದ್ದಾರೆ. ಪಿಎಸ್‌ಐ ಬಿರಾದಾರ್ ನೇತೃತ್ವದಲ್ಲಿ ಪೇದೆ ದೀಪಕ, ಸಂಬಣ್ಣ, ಸೂರ್ಯಕಾಂತ ದಾಳಿ ನಡೆಸಿ ಮಟ್ಕಾ ಬುಕ್ಕಿಯನ್ನು ಬಂಧಿಸಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.