ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ

7

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ

Published:
Updated:
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ

ಸಕಲೇಶಪುರ: ಮಳೆ ಹಾನಿ ಯೋಜನೆಯಲ್ಲಿ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ನಿರ್ಮಿಸಿರುವ ಕಿರು ಸೇತುವೆಯ ಕಾಮಗಾರಿಯನ್ನು ಮಂಗಳವಾರ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಿಪಂ ಸದಸ್ಯರು ಪರಿಶೀಲಿಸಿದರು. ರೂ.2 ಲಕ್ಷ ಅಂದಾಜು ವೆಚ್ಚದ ಕಿರು ಸೇತುವೆ ದುರಸ್ಥಿ ಕಾಮಗಾರಿ ತೀರಾ ಕಳಪೆಯಾಗಿದ್ದು, ತಳಪಾಯವನ್ನೇ ಮಾಡದೆ ಕಿರು ಸೇತುವೆ ಕಾಮಗಾರಿ ನಿರ್ವಹಿಸಿರುವುದಾಗಿ ಪತ್ರಿಕೆಯಲ್ಲಿ ವರದಿಯಾಗಿತ್ತು.ಶಾಸಕರು, ಜಿಪಂ ಸದಸ್ಯರಾದ ಬೈರಮುಡಿ ಚಂದ್ರು, ಉದೇವಾರ ಗ್ರಾಪಂ ಅಧ್ಯಕ್ಷ ಸೈಯದ್ ಪೈರೋಜ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡದೀಣೆಸ್ವಾಮಿ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿ ವೀಕ್ಷಿಸಿದ ನಂತರ ಕಾಮಗಾರಿ ನಿರ್ವಹಿಸಿದ ಜಿಪಂ ಕಿರಿಯ ಎಂಜಿನಿಯರ್ ನಂಜುಂಡಪ್ಪ ಹಾಗೂ ಎಇಇ ನಾಗರಾಜ್ ಅವರನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಿಪಂ ಸದಸ್ಯ ಬೈರಮುಡಿ ಚಂದ್ರು ತೀವ್ರ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಹಣ ವ್ಯಯಿಸುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂಬ ಉದ್ದೇಶಕ್ಕೆ ಸರ್ಕಾರ ನಿಮ್ಮನ್ನು ನೇಮಿಸಿಕೊಂಡಿದೆ.ಕಿರು ಸೇತುವೆ ಕಾಮಗಾರಿಯನ್ನು ನೋಡಿದರೆ ಬೇಲಿಯೇ ಇದ್ದು ಹೊಲ ಮೇಯ್ದಂತೆ ಆಗಿದೆ. ತಳಪಾಯ ಇಲ್ಲದೆ ನಿಮ್ಮ ಸ್ವಂತ ಮನೆ ಕಟ್ಟುತ್ತೀರಾ, ಗುತ್ತಿಗೆದಾರ ಕೆಲಸ ಮಾಡುವಾಗ ಗಮನ ಹರಿಸಬೇಕಿತ್ತು ಎಂದು ನಂಜುಂಡಪ್ಪ ಹಾಗೂ ನಾಗರಾಜ್ ಅವರ ವಿರುದ್ಧ ಶಾಸಕರು ಹರಿಹಾಯ್ದರು. ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಎಂಜಿನಿಯರ್‌ಗಳು ತಲೆ ತಗ್ಗಿಸಿದರು. ಕಾಮಗಾರಿಯನ್ನು ಪೂರ್ತಿ ತೆಗೆದು ಅಡಿಪಾಯ ಹಾಕಿ ಮಾಡಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಮಳೆ ಹಾನಿ ಯೋಜನೆಯಲ್ಲಿ ತಾಲ್ಲೂಕಿನ ಉದೇವಾರ ಗ್ರಾಪಂ ವ್ಯಾಪ್ತಿಯ ಕೆಸಗುಲಿ ಗ್ರಾಮದಲ್ಲಿ ನಡೆದಿರುವ ಕಿರು ಸೇತುವೆ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ನಿರ್ವಹಿಸಿದ ಜಿಪಂ ಎಂಜಿನಿಯರ್‌ಗಳು ತಪ್ಪು ಮಾಡಿರು ವುದನ್ನು ಕಾಮಗಾರಿಯ ಗುಣ ಮಟ್ಟವೇ ಸಾಕ್ಷೀಕರಿಸುತ್ತದೆ. ಉಪ್ಪು ತಿಂದವರು ನೀರು ಕುಡಿಯಲಿ ಬಿಡಿ, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸುವಂತೆ ಜಿಪಂ ಇಓ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry