ಶನಿವಾರ, ಏಪ್ರಿಲ್ 17, 2021
22 °C

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸಾಕಷ್ಟು ಅವ್ಯವಹಾರ, ಅನುದಾನದ ದುರುಪಯೋಗ ಹಾಗೂ ಕರ್ತವ್ಯಲೋಪವೆಸಗಿ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಆದರೆ ಅಂತವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯಸುತ್ತಿರುವುದರಿಂದ ತಾಲ್ಲೂಕಿನಲ್ಲಿ ದುರಾಡಳಿತ ಹಾಗೂ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ತಾಪಂ ಸದಸ್ಯ ಮಹಾದೇವಿ ಕಳಕಪ್ಪ ಕಂಬಳಿ ಕಳವಳ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಣಕಾಸು ಲೆಕ್ಕಪರಿಶೋಧನೆ ಹಾಗೂ ಯೋಜನಾ ಸಮಿತಿ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನುದಾನ ದುರ್ಬಳಕೆ ಹಿನ್ನೆಲೆಯಲ್ಲಿ ಅಮಾನತುಗೊಂಡ ಕಾರ್ಯದರ್ಶಿಯನ್ನು ಮತ್ತೆ ಬೇರೆ ಕಡೆ ನೇಮಕಮಾಡದ್ದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕಟ್ಟಡ ದುರಸ್ಥಿ ಕೆಲಸ ದೊಡ್ಡಪ್ರಮಾಣದಲ್ಲಿದೆ. ಆದರೆ ಲಭ್ಯವಿರುವ ಹಣ ಮಾತ್ರ ಕೇವಲ 28ಸಾವಿರದಷ್ಟಿದ್ದು, ಇದರಿಂದ ಯಾವುದೇ ದುರಸ್ಥಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ, ಕಾರಣ ತಾಲ್ಲೂಕು ಪಂಚಾಯಿತಿಗೆ ಈ ಹಣವನ್ನು ಹಿಂದಿರುಗಿಸುತ್ತೇವೆ. ಬೇರೆ ಯೋಜನೆ ಅಡಿಯಲ್ಲಿ ಆಸ್ಪತ್ರೆಯ ದುರಸ್ಥಿಗೆ ಮುಂದಾಗಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು.ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಮೂರು ಪಶು ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದು ಅಗತ್ಯವಿದ್ದು, ಸರ್ಕಾರಕ್ಕೆ ಪತ್ರ ಬರೆಯಲಾಗಿದೆ, ಆದರೆ ಮಂಜೂರಾತಿ ನೀಡಿಲ್ಲ ಎಂದು ಪಶು ವೈದ್ಯಾಧಿಕಾರಿ ಅನಂತ ಹೇಳಿದರು.ತಾಲ್ಲೂಕಿನಲ್ಲಿ ಒಟ್ಟು 49ಅಂಗನವಾಡಿ ಕಾರ್ಯಕರ್ತೆಯರು, 54 ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು, ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ, ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿಯನ್ನು ಪ್ರಕಟಿಸಿ ಈ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ನೇಮಕಾತಿ ಸಮಿತಿ ಅಡಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಟಿ. ಚಿತಾಳೆ ನುಡಿದರು. ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಆಯ್ಕೆಗೆ ತಂಡ ಭೇಟಿ ನೀಡಿಲಿದ್ದು, ಅಂಗನವಾಡಿ, ವಸತಿ ನಿಲಯ, ಶಾಲೆ ಕಾಲೇಜುಗಳ ಶೌಚಾಲಯಗಳನ್ನು ಸ್ವಚ್ಛತೆಯಿಂದ ಇಡುವಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಪಂ ಇಒ ಸಲಹೆ ನೀಡಿದರು.ಲೆಕ್ಕಪರಿಶೋಧನೆ ಎಂದರೇನು?: ಲೆಕ್ಕಪರಿಶೋಧನೆ ಸಮಿತಿ ಸಭೆಯಲ್ಲಿ ಬರೀ ಕುಂದುಕೊರತೆಗಳ ಬಗ್ಗೆ ಚರ್ಚಿಸುತ್ತೀರಿ, ತಾಲ್ಲೂಕು ಪಂಚಾಯಿತಿಯಿಂದ ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಅನುದಾನದ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡುವಂತೆ ಶೇಖರಪ್ಪ ವಾರದ್ ಒತ್ತಾಯಿಸಿದರು.ಹಾಗೆಯೇ, ಮತ್ತೊಬ್ಬ ಸದಸ್ಯ ಮಲ್ಲಣ್ಣ ಕೋನನಗೌಡ ಮತನಾಡಿ, `ಲೆಕ್ಕಪರಿಶೋಧನೆ~ ಎಂದರೇನು ಎಂಬ ಪ್ರಶ್ನೆಗೆ ಮೊದಲು ಉತ್ತರಿಸಿ, ಯಾವ ಸಭೆ ಎಂಬುದನ್ನು ಅರಿತು ನಡೆದುಕೊಳ್ಳುವಂತೆ ಜೋರಾದ ಧ್ವನಿಯಲ್ಲಿ ಕೂಗಿದರು. ಆಗ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜೂರ ಹುಸೇನ್, ಲೆಕ್ಕಪತ್ರಗಳ ಪರಿಶೋಧನೆ ಕಾರ್ಯವನ್ನು ಲೆಕ್ಕಪರಿಶೋಧಕರೆಂದು ನೇಮಕಗೊಂಡ ಅಧಿಕಾರಿಗಳು ನಿರ್ವಹಿಸುತ್ತಾರೆ. ವರ್ಷದಲ್ಲಿ ಒಮ್ಮೆ ನಡೆಯುತ್ತದೆ. ಆ ಕಾರ್ಯ ನಡೆಸುವ ಅಧಿಕಾರಿಗಳು ಬೇರೆ ಇರುತ್ತಾರೆ. ಈ ಸಭೆಯಲ್ಲಿ ತಾಪಂ ಅನುದಾನದ ಖರ್ಚು ವೆಚ್ಚಗಳ ಮೇಲಿನ ಚರ್ಚೆ ನಡೆಯುತ್ತದೆ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ ಎಂದು ಉತ್ತರಿಸಿದರು.ತೋಟಗಾರಿಕೆ, ಸಹಕಾರ ಇಲಾಖೆ, ಲೋಕೊಪಯೋಗಿ ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ರಾಜಶೇಖರ ಹೊಂಬಳ, ಅಧ್ಯಕ್ಷ ನೀಲಮ್ಮ ಜವಳಿ, ಇಒ ಡಿ.ಎಲ್. ಛಲವಾದಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.