ಶುಕ್ರವಾರ, ನವೆಂಬರ್ 15, 2019
21 °C

ತಪ್ಪಿದ್ದರೆ ಶಿಕ್ಷೆಗೆ ಸಿದ್ಧ

Published:
Updated:

ಚೆನ್ನೈ (ಪಿಟಿಐ): `ನಾನು ತಪ್ಪು ಮಾಡಿಲ್ಲ. ಏನಾದರೂ ತಪ್ಪು ಮಾಡಿದ್ದರೆ ಯಾವುದೇ ತನಿಖೆ ಎದುರಿಸಲು ಮತ್ತು ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ~ ಎಂದು ಕೇಂದ್ರ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಅವರು ಗುರುವಾರ ಹೇಳಿದ್ದಾರೆ.ಇಲ್ಲಿನ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಲೇಷ್ಯಾ ಮೂಲದ ಕಂಪೆನಿಗೆ ಏರ್‌ಸೆಲ್ ಪರವಾನಗಿ ದೊರಕಿಸಲು ತಾವು ನೆರವಾಗಿಲ್ಲ ಮತ್ತು ಕಂಪೆನಿಯಿಂದ ಸನ್ ಟಿವಿ ನೆಟ್‌ವರ್ಕ್‌ಗೆ ಹಣ ಪಡೆದಿಲ್ಲ ಎಂದು ಪುನರುಚ್ಚರಿಸಿದ್ದಾರೆ.`ನನಗೆ ಯಾವುದೇ ಅನುಕಂಪದ ಅಗತ್ಯ ಇಲ್ಲ. ನಾನು ನ್ಯಾಯಯುತವಾಗಿ ನಡೆದುಕೊಂಡಿದ್ದೇನೆಯೇ ಇಲ್ಲವೇ ಎಂಬುದನ್ನು ಕಾನೂನೇ ನಿರ್ಧರಿಸಲಿ. ಆದರೆ ನಾನು ತಪ್ಪಿತಸ್ಥನಲ್ಲ ಎಂದಾದರೆ ನನ್ನನ್ನು ನಾನು ರಕ್ಷಿಸಿಕೊಳ್ಳುವ  ಮತ್ತು ನನ್ನ ಪ್ರಾಮಾಣಿಕತೆ ಸಾಬೀತುಪಡಿಸುವ ಎಲ್ಲಾ ಹಕ್ಕು ನೀಡಬೇಕು~ ಎಂದಿದ್ದಾರೆ.

`ನನಗೆ ಮತ್ತು ನನ್ನ ಪಕ್ಷಕ್ಕೆ ಕಳಂಕ ತರಲು ವ್ಯವಸ್ಥಿತವಾಗಿ ಪ್ರಚಾರ ಮಾಡಲು ಆರೋಪಗಳನ್ನು ಹೊರಿಸಲಾಗಿದೆ~ ಎಂದೂ ಅವರು ದೂರಿದ್ದಾರೆ.`ನಾನು 2008ರ ಮೇ ತಿಂಗಳಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ `ರಾಜಕೀಯವಾಗಿ ಅಸ್ಪೃಶ್ಯತೆ~ ಅನುಭವಿಸಬೇಕಾಯಿತು. ರಾಜೀನಾಮೆ ನಂತರದಲ್ಲೇ ತನಿಖೆ ನಡೆಯಬಹುದಿತ್ತು. ಅಂತಹ ಸ್ಥಿತಿ ಆಗ ನನ್ನದಾಗಿತ್ತು. ನಾನು ಸಚಿವನಲ್ಲದೇ ಇದ್ದಾಗ ಯಾರಿಗೂ ನನ್ನೊಂದಿಗಿನ ಸಂಪರ್ಕ ಬೇಕಿರಲಿಲ್ಲ. ನಾನು ಎಂದಿಗೂ ಯಾರಿಗೂ ನೆರವಾಗಿಲ್ಲ. ರಾಜಕೀಯ ವಲಯದಿಂದ ನನ್ನನ್ನು ಹೊರ    ಹಾಕಲಾಗಿತ್ತು~ ಎಂದು ಅಳಲು  ತೋಡಿಕೊಂಡಿದ್ದಾರೆ.ತಮ್ಮ ಕುಟುಂಬದ ವ್ಯವಹಾರಕ್ಕಾಗಿ ಚೆನ್ನೈ ನಿವಾಸಕ್ಕೆ ಬಿಎಸ್ಸೆನ್ನೆಲ್‌ನಿಂದ 300 ದೂರವಾಣಿ ಲೈನ್‌ಗಳ ಸಂಪರ್ಕ ಪಡೆಯಾಲಾಗಿತ್ತು ಎಂಬ ಆರೋಪಗಳ ಬಗ್ಗೆ ಅವರು, `ಇದು ನನ್ನ ಪ್ರಾಮಾಣಿಕತೆಯ ಪ್ರಶ್ನೆಯಷ್ಟೆ ಅಲ್ಲ. ನನ್ನ ಕುಟುಂಬದ ಮತ್ತು ಪಕ್ಷದ ಪ್ರಾಮಾಣಿಕತೆಯ ಪ್ರಶ್ನೆಯೂ ಆಗಿದೆ~ ಎಂದಿದ್ದಾರೆ.ತಾವು ದೂರಸಂಪರ್ಕ ಸಚಿವರಾಗಿದ್ದಾಗ ಬಿಎಸ್ಸೆನ್ನೆಲ್‌ನಿಂದ ಪಡೆದ ಪತ್ರವನ್ನು ಉಲ್ಲೇಖಿಸಿ, `ನಾನು ಒಂದು ದೂರವಾಣಿ ಸಂಪರ್ಕ ಪಡೆದಿದ್ದೇನೆ ಎನ್ನುವುದು ಈ ಪತ್ರ ಸಾಬೀತುಪಡಿಸುತ್ತದೆ~ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)