ಭಾನುವಾರ, ಜೂನ್ 7, 2020
29 °C

ತಪ್ಪಿದ ಪಂಡಿತರ ಲೆಕ್ಕಾಚಾರ

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ತಪ್ಪಿದ ಪಂಡಿತರ ಲೆಕ್ಕಾಚಾರ

ಟೆನಿಸ್ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿದೆ. ಋತುವಿನ ಮೊದಲ ಗ್ರ್ಯಾಂಡ್ ಸ್ಲಾಮ್ ಎನಿಸಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸ್ಪೇನ್‌ನ ರಫೆಲ್ ನಡಾಲ್ ಅಥವಾ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಪಾಲಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಇವರಿಬ್ಬರು ಕ್ರಮವಾಗಿ ಮೊದಲ ಮತ್ತು ಎರಡನೇ ಶ್ರೇಯಾಂಕದೊಂದಿಗೆ ಟೂರ್ನಿಗೆ ಆಗಮಿಸಿದ್ದರು. ಆದರೆ ಪ್ರಶಸ್ತಿ ಗೆಲ್ಲುವುದು ಮಾತ್ರವಲ್ಲ, ಫೈನಲ್ ಪ್ರವೇಶಿಸದೆಯೇ ಇಬ್ಬರೂ ನಿರ್ಗಮಿಸಿದ್ದಾರೆ.ವಿಶ್ವದ ಅಗ್ರರ್ಯಾಂಕಿಂಗ್‌ನ ಆಟಗಾರ ನಡಾಲ್ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದರೆ, ಫೆಡರರ್ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು. ಸ್ಪೇನ್‌ನ ಡೇವಿಡ್ ಫೆರೆರ್ ವಿರುದ್ಧದ ಪಂದ್ಯದ ವೇಳೆ ನಡಾಲ್ ಗಾಯದ ಸಮಸ್ಯೆ ಎದುರಿಸಿದ್ದರು. ಇದು ಅವರ ಪ್ರದರ್ಶನದ ಮೇಲೂ ಪರಿಣಾಮ ಬೀರಿತು. ಫೆಡರರ್ ಅವರು ಸರ್ಬಿಯಾದ ನೊವಾಕ್ ಜೊಕೊವಿಕ್ ಎದುರು ನೇರ ಸೆಟ್‌ಗಳ ಸೋಲು ಅನುಭವಿಸಿದರು.ಇಬ್ಬರು ದಿಗ್ಗಜರನ್ನು ಮಣಿಸಿದ ಫೆರೆರ್ ಮತ್ತು ಜೊಕೊವಿಕ್ ಮೆಲ್ಬರ್ನ್ ಪಾರ್ಕ್‌ನಲ್ಲಿ ಹೀರೋ ಆಗಿ ಮೆರೆದರು. ಟೂರ್ನಿಗೆ ಮುನ್ನ ಫೆಡರರ್ ಮತ್ತು ನಡಾಲ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದರು. ಇದಕ್ಕೆ ಕೆಲವೊಂದು ಕಾರಣಗಳೂ ಇದ್ದವು. ಏಕೆಂದರೆ ಕಳೆದ 23 ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ 21 ಪ್ರಶಸ್ತಿಗಳನ್ನೂ ಇವರು ತಮ್ಮೊಳಗೆ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ವಿಶ್ವ ರ್ಯಾಂಕಿಂಗ್‌ನಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇವರಿದ್ದಾರೆ. ಫೆಡರರ್ ಕಳೆದ ಬಾರಿಯ ಚಾಂಪಿಯನ್ ಎಂಬ ಹಣೆಪಟ್ಟಿ ಕಟ್ಟಿಕೊಂಡು ಮೆಲ್ಬರ್ನ್ ಪಾರ್ಕ್‌ಗೆ ಆಗಮಿಸಿದ್ದರು. ಆದರೆ ಇಬ್ಬರೂ ಅನಿರೀಕ್ಷಿತ ಆಘಾತ ಅನುಭವಿಸಿದ್ದಾರೆ.ಜೊಕೊವಿಕ್ ಕೈಯಲ್ಲಿ ಸೋಲು ಅನುಭವಿಸಿದ ಬಳಿಕ ಫೆಡರರ್ ಮಾಧ್ಯಮದವರಿಂದ ಒಂದು ಪ್ರಶ್ನೆ ಎದುರಿಸಿದ್ದರು. ‘ಈ ಸೋಲು ಒಂದು ಯುಗದ ಅಂತ್ಯದ ಸೂಚನೆಯೇ?’ ಎಂಬ ಪ್ರಶ್ನೆ ಎದುರಾಗಿತ್ತು. ಸ್ವಿಸ್ ಆಟಗಾರ ಅದಕ್ಕೆ ನಗುತ್ತಾ ‘ಆರು ತಿಂಗಳ ಬಳಿಕ ಈ ಕುರಿತು ಚರ್ಚಿಸೋಣ’ ಎಂದು ಉತ್ತರಿಸಿದ್ದಾರೆ. ಹೌದು ಈ ಹಿಂದೆ ಹಲವು ಬಾರಿ ಫೆಡರರ್ ಸೋಲು ಅನುಭವಿಸಿದಾಗ ‘ಒಂದು ಯುಗ ಅಂತ್ಯಗೊಳ್ಳುವ ಸೂಚನೆ’ ಎನ್ನಲಾಗಿತ್ತು. ಅಂತಹ ಸಂದರ್ಭದಲ್ಲೆಲ್ಲಾ ಅವರು ಫೀನಿಕ್ಸ್‌ನಂತೆ ಎದ್ದು ಬಂದಿದ್ದಾರೆ.ಆದರೆ ಈ ಬಾರಿ ಫೆಡರರ್ ಸೋಲಿನ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಇದೀಗ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಟೂರ್ನಿಗಳಲ್ಲಿ ಫೆಡರರ್ ಯಾವುದರಲ್ಲೂ ಹಾಲಿ ಚಾಂಪಿಯನ್ ಆಗಿ ಉಳಿದುಕೊಂಡಿಲ್ಲ. ಅವರು ಕಳೆದ ವರ್ಷ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಕೊನೆಯದಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಫೆಡರರ್ ಈ ರೀತಿಯಲ್ಲಿ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯ ಬರ ಎದುರಿಸಿದ್ದು ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಇದೇ ಮೊದಲು.2003 ರಲ್ಲಿ ವಿಂಬಲ್ಡನ್ ಟ್ರೋಫಿ ಗೆಲ್ಲುವ ಮೂಲಕ ಸ್ವಿಸ್ ಆಟಗಾರ ತಮ್ಮ ಕನಸಿನ ಓಟ ಆರಂಭಿಸಿದ್ದರು. ಆ ಬಳಿಕ 16 ಗ್ರ್ಯಾಂಡ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರ ಈ ಪ್ರಶಸ್ತಿಗಳ ಪಟ್ಟಿ ಇನ್ನಷ್ಟು ಬೆಳೆಯಬಹುದು. ಆದರೆ ಹಳೆಯ ಲಯ ಕಂಡುಕೊಳ್ಳುವುದು ಅನುಮಾನ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಟೆನಿಸ್ ಜಗತ್ತಿನ ಚಕ್ರಾಧಿಪತಿಯಂತೆ ಮೆರೆದಿದ್ದ ಫೆಡರರ್ ನಿಧಾನವಾಗಿ ತಮ್ಮ ಹಿಡಿತ ಕಳೆದುಕೊಳ್ಳುತ್ತಿದ್ದಾರೆ.ಮದುವೆ, ಸಂಸಾರ ಮತ್ತು 13 ವರ್ಷಗಳ ವೃತ್ತಿಪರ ಟೆನಿಸ್ ಜೀವನದ ಹೊರತಾಗಿಯೂ ಫೆಡರರ್ ತಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಂಡಿದ್ದಾರೆ. ಮಾತ್ರವಲ್ಲ ಒಬ್ಬ ಯುವ ಆಟಗಾರನಂತೆ ಹೊಸ ಹೊಸ ತಂತ್ರಗಳನ್ನು ಕಲಿಯುತ್ತಿದ್ದಾರೆ. ನೂತನ ಕೋಚ್ ಪಾಲ್ ಅಲಾಕೊನ್ ಜೊತೆ ಸೇರಿಕೊಂಡು ಆಟದಲ್ಲಿ ಮತ್ತಷ್ಟು ಸುಧಾರಣೆ ಕಂಡುಕೊಳ್ಳುವತ್ತ ಗಮನ ಹರಿಸಿದ್ದಾರೆ.ಫೆಡರರ್ ಇದೀಗ ಅಲ್ಪ ಹಿನ್ನಡೆ ಅನುಭವಿಸಿರುವುದು ನಿಜ. ಆದರೆ ಅವರು ಸದ್ಯದಲ್ಲಿ ತೆರೆಮರೆಗೆ ಸರಿಯುವ ಸಾಧ್ಯತೆ ಕಡಿಮೆ. ವಯಸ್ಸು ಮತ್ತು ತಕ್ಕಮಟ್ಟಿನ ಫಿಟ್‌ನೆಸ್ ಅವರಲ್ಲಿದೆ. ಇನ್ನೂ ಕೆಲವು ವರ್ಷಗಳ ಕಾಲ ಯುವ ಆಟಗಾರರ ಜೊತೆ ಪೈಪೋಟಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.ಮತ್ತೊಂದೆಡೆ ನಡಾಲ್ ಸತತ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಕಿರೀಟ ಗೆಲ್ಲಬೇಕೆಂಬ ಕನಸಿನೊಂದಿಗೆ ಈ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಅವರ ಕನಸು ಕೂಡಾ ನನಸಾಗಲಿಲ್ಲ. ಕಳೆದ ವರ್ಷ ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಅಮೆರಿಕ ಓಪನ್ ಟೂರ್ನಿಗಳಲ್ಲಿ ಸ್ಪೇನ್‌ನ ಆಟಗಾರ ಗೆಲುವಿನ ನಗು ಬೀರಿದ್ದರು. ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಮಾತ್ರ ವಿಫಲರಾಗಿದ್ದರು. ಗಾಯದ ಸಮಸ್ಯೆ ಎದುರಿಸಿದ್ದ ಕಾರಣ ಅಂದು ಕ್ವಾರ್ಟರ್ ಫೈನಲ್‌ನಲ್ಲಿ ಪಂದ್ಯ ತ್ಯಜಿಸಿದ್ದರು. ಈ ಬಾರಿ ಗೆದ್ದರೆ ಸತತ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳ ಒಡೆಯ ಎನಿಸುತ್ತಿದ್ದರು.ಫೆರೆರ್ ವಿರುದ್ಧದ ಪಂದ್ಯದ ಮೊದಲ ಸೆಟ್‌ನಲ್ಲೇ ನಡಾಲ್ ಎಡತೊಡೆಯ ನೋವು ಅನುಭವಿಸಿದರು. ಪಂದ್ಯ ಮುಂದುವರಿದಂತೆ ನೋವು ಹೆಚ್ಚಾಯಿತು. ಆದರೂ ಅವರು ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಲಿಲ್ಲ. ಕೊನೆಯವರೆಗೂ ಹೋರಾಟ ನಡೆಸಿದರು. ರಾಡ್ ಲೇವರ್ ಅವರು 1969 ರಲ್ಲಿ ಸತತ ನಾಲ್ಕು ಗ್ರ್ಯಾಂಡ್ ಸ್ಲಾಮ್ ಕಿರೀಟ ಗೆದ್ದಿದ್ದರು. ಆ ಸಾಧನೆಯನ್ನು ಪುನರಾವರ್ತಿಸುವ ಅವಕಾಶ ನಡಾಲ್‌ಗೆ ಲಭಿಸಿತ್ತು. ಆದರೆ ಗಾಯದ ಸಮಸ್ಯೆ ಅಡ್ಡಿಯಾಯಿತು. ನಡಾಲ್‌ಗೆ ಇನ್ನೂ 24 ರ ಹರೆಯ. ಈಗಾಗಲೇ ಒಂಬತ್ತು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳು ಅವರ ಹೆಸರಿನಲ್ಲಿದೆ. ಗಾಯದ ಸಮಸ್ಯೆ ಮತ್ತೆ ಕಾಡದಿದ್ದರೆ, ನಡಾಲ್ ಮುಂದೊಂದು ದಿನ ಫೆಡರರ್ ಅವರನ್ನು ಹಿಂದಿಕ್ಕಿದರೆ ಅಚ್ಚರಿಯಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.