ತಪ್ಪಿಸಬಹುದಾಗಿದ್ದ ದುರಂತ

7

ತಪ್ಪಿಸಬಹುದಾಗಿದ್ದ ದುರಂತ

Published:
Updated:

ಆಂಧ್ರಪ್ರದೇಶದ ಪೆನುಕೊಂಡ ನಿಲ್ದಾಣದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಭೀಕರ ರೈಲು ಅಪಘಾತ 25ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಗಾಯಾಳುಗಳ ಸಂಖ್ಯೆಯೂ ದೊಡ್ಡದು.

 

ಹುಬ್ಬಳ್ಳಿಯಿಂದ ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಹಂಪಿ ಎಕ್ಸ್‌ಪ್ರೆಸ್, ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದದ್ದೇ ದುರಂತಕ್ಕೆ ಕಾರಣ. ಮೃತರಲ್ಲಿ ಹೆಚ್ಚಿನವರು ಎಂಜಿನ್‌ನ ಹಿಂಬದಿಯ ಮೊದಲೆರಡು ಬೋಗಿಗಳಿಗೆ ಹತ್ತಿಕೊಂಡ ಬೆಂಕಿಯಲ್ಲಿ ಸುಟ್ಟು ಕರಕಲಾದ ದುರ್ದೈವಿಗಳು.

 

ಇವು ಮಹಿಳೆಯರಿಗೆ ಮೀಸಲಾದ ಮತ್ತು ಕಾಯ್ದಿರಿಸದ ಸಾಮಾನ್ಯ ಪ್ರಯಾಣಿಕರ ಬೋಗಿಗಳು. ಆರಂಭಿಕ ಮಾಹಿತಿಗಳ ಪ್ರಕಾರ ಹಸಿರು ಸಿಗ್ನಲ್ ಇಲ್ಲದಿದ್ದರೂ ಎಕ್ಸ್‌ಪ್ರೆಸ್ ರೈಲಿನ ಚಾಲಕ ರೈಲನ್ನು ಮುಂದೆ ನುಗ್ಗಿಸ್ದ್ದಿದರಿಂದಲೇ ಈ ಅವಘಡ ಸಂಭವಿಸಿದೆ. ಇದು ಚಾಲಕನ ಕಾರ್ಯ ವೈಖರಿ ಮತ್ತು ರೈಲು ಪ್ರಯಾಣದ ಸುರಕ್ಷತೆಯ ಬಗ್ಗೆಯೇ ಸಂದೇಹ ಮೂಡುವಂತೆ ಮಾಡಿದೆ.ಪ್ರತ್ಯಕ್ಷದರ್ಶಿಗಳು ಮತ್ತು ಗಾಯಾಳುಗಳ ಪ್ರಕಾರ ರೈಲು ವೇಗದಲ್ಲಿ ಚಲಿಸುತ್ತಿತ್ತು. ಆದರೆ, ಅಪಘಾತಕ್ಕೊಳಗಾದ ರೈಲಿಗೆ ಪೆನುಕೊಂಡ ನಿಲ್ದಾಣದಲ್ಲಿ ನಿಲುಗಡೆ ಇತ್ತು. ಹೀಗ್ದ್ದಿದಾಗ ನಿಲ್ದಾಣ ಬಂದರೂ ಚಾಲಕ ರೈಲಿನ ವೇಗ ತಗ್ಗಿಸದೇ ಇರಲು ಏನು ಕಾರಣ, ಸಿಗ್ನಲ್ ಇಲ್ಲದಿದ್ದರೂ ಅವಸರ ಮಾಡಿದ್ದೇಕೆ ಎಂಬ ಪ್ರಶ್ನೆಗಳು ಉದ್ಭವವಾಗುತ್ತವೆ. ತನಿಖೆಯಿಂದ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಮೇಲ್ನೋಟಕ್ಕಂತೂ ಇದು ಮಾನವ ಲೋಪ, ತಪ್ಪಿಸಬಹುದಾಗಿದ್ದ ದುರಂತ ಎಂದು ಗೊತ್ತಾಗುತ್ತದೆ. ಊರು ಸೂರೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ರೈಲ್ವೆ ಸಚಿವರು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ, ಪರಿಹಾರ ಘೋಷಿಸಿದ್ದಾರೆ.

 

ಆದರೆ ಇದರಿಂದ ಹೋದ ಅಮೂಲ್ಯ ಜೀವ ವಾಪಸ್ ಬರುವುದಂತೂ ಸಾಧ್ಯವಿಲ್ಲ. ಈ ರೀತಿ ಅಪಘಾತ ನಡೆದು ಜೀವಹಾನಿಯಾಗುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಪ್ರಕಟಿಸುವುದು, ಮುಂದೆ ಹೀಗಾಗದಂತೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರೈಲ್ವೆ ಮಂತ್ರಿಗಳು ಘೋಷಿಸುವುದು ವಾಡಿಕೆಯಾಗಿ ಬಿಟ್ಟಿದೆ.ಆದರೆ `ಸುರಕ್ಷಿತ ಪ್ರಯಾಣ~ ಎಂಬ ಮೂಲಭೂತ ಅಂಶಕ್ಕೆ ಸರಿಯಾದ ಒತ್ತು ಸಿಗುತ್ತಿಲ್ಲ. ಈಗೇನೋ ರೈಲ್ವೆ ಸಚಿವರು ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ `ರೈಲು ಸುರಕ್ಷತಾ ಮುನ್ನೆಚ್ಚರಿಕೆ ವ್ಯವಸ್ಥೆ~ಯನ್ನು (ಟಿಪಿಡಬ್ಲುಎಸ್) ಆದಷ್ಟು ಬೇಗ ಅಳವಡಿಸಲಾಗುತ್ತದೆ ಎಂಬ ಘೋಷಣೆ ಮಾಡಿದ್ದಾರೆ.ಈ ಕೆಲಸ ಮೊದಲೇ ಮಾಡಲು ತೊಂದರೆ ಏನಿತ್ತು ಎಂಬುದೇ ಅರ್ಥವಾಗುತ್ತಿಲ್ಲ. ಇದೇನೇ ಇದ್ದರೂ ರೈಲು ಪ್ರಯಾಣ ಸುರಕ್ಷಿತ ಎಂಬ ಭರವಸೆಯನ್ನು ಪ್ರಯಾಣಿಕರ್ಲ್ಲಲಿ ಮೂಡಿಸಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ರೈಲ್ವೆ ಇಲಾಖೆಗೆ ಸುರಕ್ಷತೆ ಆದ್ಯತೆಯ ವಿಷಯವಾಗಬೇಕು. ಅದಕ್ಕೆ ಹಣದ ಕೊರತೆ ಇರಲಾರದು. ಸುರಕ್ಷತಾ ನಿಧಿಯಲ್ಲಿ 17 ಸಾವಿರ ಕೋಟಿ ರೂಗಳಿದೆ. ಅದನ್ನು ಯಾವ ರೀತಿ ಬಳಕೆ ಮಾಡಲಾಗಿದೆ ಎನ್ನುವುದು ಗೊತ್ತಿಲ್ಲ.  ಭಾರತೀಯ ರೈಲ್ವೆ ಪ್ರಯಾಣಿಕರ ವಿಶ್ವಾಸಾರ್ಹತೆ ಗಳಿಸಲು ಬಹಳಷ್ಟು ದೂರ ಕ್ರಮಿಸಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry