ತಪ್ಪಿಸಿಕೊಳ್ಳಲು ನೆರವಾದ ಸಿಬ್ಬಂದಿ ಗುರುತಿಸಿದ ಆರೋಪಿ

7
‘ಸೈಕೊ’ ಶಂಕರ್‌ ಪರಾರಿ ಪ್ರಕರಣ

ತಪ್ಪಿಸಿಕೊಳ್ಳಲು ನೆರವಾದ ಸಿಬ್ಬಂದಿ ಗುರುತಿಸಿದ ಆರೋಪಿ

Published:
Updated:

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಲು ನೆರವಾದ ಸಿಬ್ಬಂದಿಯ ಹೆಸರನ್ನು ಹಾಗೂ ಪರಾರಿಯಾದ ಪರಿಯನ್ನು ‘ಸೈಕೊ’ ಶಂಕರ್‌ ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.ಪೊಲೀಸ್‌ ಕಸ್ಟಡಿಯಲ್ಲಿದ್ದ ಶಂಕರ್‌ನನ್ನು ಮಂಗಳವಾರ ಕಾರಾಗೃಹಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಆಗ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್‌ ಒಬ್ಬರನ್ನು ತೋರಿಸಿ, ‘ಆ.31ರ ರಾತ್ರಿ ಇವರೇ ಆಸ್ಪತ್ರೆಯ ಮುಖ್ಯ ಪ್ರವೇಶ ದ್ವಾರದ ಬಾಗಿಲನ್ನು ಹಾಗೂ ನನ್ನನ್ನು ಬಂಧಿಸಿಡಲಾಗಿದ್ದ ವಾರ್ಡ್‌ ಕೊಠಡಿಯ ಬಾಗಿಲನ್ನು ತೆರೆದು ಪರಾರಿಯಾಗಲು ನೆರವಾದರು. ಅಲ್ಲದೇ, ಮಹಡಿಯ ಬಾಗಿಲಿನ ನಕಲಿ ಕೀಯನ್ನೂ ಮಾಡಿಸಿಕೊಟ್ಟಿದ್ದರು’ ಎಂದು ಹೇಳಿಕೆ ಕೊಟ್ಟಿದ್ದಾಗಿ ಮಾಹಿತಿ ನೀಡಿದ ತನಿಖಾಧಿಕಾರಿಗಳು, ಆ ಕಾನ್‌ಸ್ಟೆಬಲ್‌ನ ಹೆಸರನ್ನು ಹೇಳಲು ನಿರಾಕರಿಸಿದರು.‘ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಾರ್ಡ್‌ನ ಬಾಗಿಲು ತೆರೆದೆ. ಆ ಸೂಚನೆಯ ಹಿಂದಿದ್ದ ಉದ್ದೇಶ ನನಗೆ ಗೊತ್ತಿರಲಿಲ್ಲ’ ಎಂದು ಆ ಕಾನ್‌ಸ್ಟೆಬಲ್‌ ತನಿಖಾಧಿಕಾರಿಗಳಿಗೆ ಹೇಳಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಕಾರಾಗೃಹಗಳ ಇಲಾಖೆಯ ಎಡಿಜಿಪಿ ಗಗನ್‌ದೀಪ್, ‘ಪ್ರಕರಣ ಸಂಬಂಧ ಈಗಾಗಲೇ 13 ಸಿಬ್ಬಂದಿಯನ್ನು ಅಮಾನತು ಮಾಡ­ಲಾಗಿದೆ. ಶಂಕರ್‌ ಪರಾರಿಯಾಗಲು ಕಾನ್‌ಸ್ಟೆಬಲ್‌ ಸೇರಿದಂತೆ ಯಾವುದೇ ಸಿಬ್ಬಂದಿ ನೆರ­ವಾಗಿದ್ದರೂ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು’ ಎಂದರು.ಕೊಲೆ, ಅತ್ಯಾಚಾರ ಸೇರಿದಂತೆ 30ಕ್ಕೂ ಹೆಚ್ಚು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೈಕೊ ಶಂಕರ್‌, ಕಳೆದ ಆಗಸ್ಟ್‌ 31ರಂದು ಬಿಗಿ ಭದ್ರತೆಯ ಜೈಲಿನಿಂದ 30 ಅಡಿ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದ. ಆತನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೂಡ್ಲುಗೇಟ್ ಬಳಿ ಸೆ.6ರಂದು ಪುನಃ ಆತನನ್ನು ಬಂಧಿಸಿದ್ದರು.ನ್ಯಾಯಾಂಗ ಬಂಧನ

‘ಪೊಲೀಸ್‌ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸೈಕೊ ಶಂಕರ್‌ನನ್ನು ಬುಧವಾರ ಮಧ್ಯಾಹ್ನ ನಗರದ ಒಂಬತ್ತನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು­ಪಡಿಸಿದರು. ಆತ­ನನ್ನು ಜ.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾ­ಧೀಶರು ಆದೇಶ ಹೊರಡಿ­ಸಿ­ದ್ದರಿಂದ ಆರೋಪಿ­ಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry