ಗುರುವಾರ , ಮೇ 19, 2022
24 °C

ತಪ್ಪು ಉತ್ತರಕ್ಕೆ ಬೆಪ್ಪಾದ ಸಚಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಅಧಿಕಾರಿಗಳು ನೀಡಿದ ತಪ್ಪು ಉತ್ತರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಬೆಪ್ಪಾದರು. ಶಾಸಕರಿಗೂ ಇದೇ ಅನುಭವವಾಯಿತು! ನಗರದ ಕೆಡಿಪಿ ಸಭಾಂಗಣದಲ್ಲಿ ಗುರುವಾರ ನಡೆದ ಜಿ.ಪಂ.ನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧಿಕಾರಶಾಹಿಯ ತಪ್ಪು ಉತ್ತರಗಳಿಗೆ ವೇದಿಕೆಯಾಯಿತು.‘ಪದೇ ಪದೇ ತಪ್ಪು ಮಾಹಿತಿ ನೀಡಿದರೆ ಕ್ರಮಕೈಗೊಳ್ಳುವೆ’ ಎಂದು ಸಚಿವರು ಎಚ್ಚರಿಸುತ್ತಲೇ ಇದ್ದರು. ಆದರೆ, ಇಲಾಖೆವಾರು ಯೋಜನೆಗಳ ಸಾಧನೆ ಬಗ್ಗೆ ತಿಳಿಸುವ ಭರದಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆಯ ಅರಿವು ಇರಲಿಲ್ಲ. ಅಧಿಕಾರಿಗಳು ದಿಕ್ಕುತಪ್ಪಿ ಉತ್ತರಿಸಿದರೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಮರ್ಪಕ ಉತ್ತರ ನೀಡುವುದು ಸಾಮಾನ್ಯ ನಿಯಮ. ಅಂಥ ಪ್ರಯತ್ನವೂ ಕಂಡುಬರಲಿಲ್ಲ.ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಗೈರುಹಾಜರಾಗಿದ್ದರು. ಅವರ ಪ್ರತಿನಿಧಿಯಾಗಿ ಬಂದಿದ್ದ ಅಧಿಕಾರಿ, ವೇದಿಕೆ ಮುಂದೆ ಇಲಾಖೆಯ ಸಾಧನೆ ಬಗ್ಗೆ ಕಂಠಪಾಠ ಹೇಳಲು ಆರಂಭಿಸಿದರು. ಸಚಿವರು ಮತ್ತು ಶಾಸಕರ ಬಳಿಯಿದ್ದ ವರದಿಯ ಪ್ರತಿಗೂ; ಅಧಿಕಾರಿ ಬಳಿಯಿದ್ದ ಮಾಹಿತಿಗೆ ತಾಳಮೇಳವೇ ಇರಲಿಲ್ಲ.ಕೊನೆಗೆ, ಪಾಠ ಓದಲು ಯಾಕೆ ಬರುತ್ತೀರಿ? ಎಂದು ಸಚಿವ ರೇಣುಕಾಚಾರ್ಯ ಪ್ರಶ್ನಿಸಿದರು. ಜಿಲ್ಲಾಮಟ್ಟದ ಅಧಿಕಾರಿ ಯಾಕೆ ಬಂದಿಲ್ಲ? ಎಂದರು. ಮೌನ ತಾಳಿದ ಅಧಿಕಾರಿಯ ಮುಖ ನೋಡಿ, ‘ಹೋಗಿ ಕುಳಿತುಕೊಳ್ಳಿ...’ ಎಂದು ಸೂಚಿಸಿದರು. ಕೊನೆಗೆ, ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆಯೇ ನಡೆಯಲಿಲ್ಲ!ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಚರ್ಚೆ ವೇಳೆಯೂ ಸಚಿವರು ತಬ್ಬಿಬ್ಬುಗೊಂಡರು. ಹನೂರು ವಲಯದ ವ್ಯಾಪ್ತಿಯ ಎಲ್ಲೆಮಾಳ ಗ್ರಾಮದ ಶಾಲಾ ಮಕ್ಕಳು ಮರದ ನೆರಳಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಶಾಲಾ ಕೊಠಡಿ ನಿರ್ಮಾಣಕ್ಕೆ 2 ಲಕ್ಷ ರೂ ಬಿಡುಗಡೆಯಾಗಿದೆ. ಎರಡು ವರ್ಷ ಕಳೆದರೂ ಕೊಠಡಿ ನಿರ್ಮಿಸಿಲ್ಲ ಎಂದು ಶಾಸಕ ಆರ್. ನರೇಂದ್ರ ಗಮನ ಸೆಳೆದರು.

ಯಾಕ್ರೀ... ಕೊಠಡಿ ಕಟ್ಟಿಲ್ವೆ? ಎಂಬ ಪ್ರಶ್ನೆ ಸಚಿವರಿಂದ ತೂರಿಬಂತು. ‘ನೀರು ಮತ್ತು ಮರಳು ಸಿಗುತ್ತಿಲ್ಲ  ಸರ್...’ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಉತ್ತರಿಸಿದರು. ‘ಯಾವತ್ತು ಶುರು ಮಾಡ್ತಿರಿ. ವಾರದೊಳಗೆ ಕೊಠಡಿ ನಿರ್ಮಾಣ ಪೂರ್ಣಗೊಳಿಸಿ’ ಎಂಬ ರೇಣುಕಾಚಾರ್ಯರ ಸೂಚನೆಗೆ ಅಧಿಕಾರಿಗಳು ಮುಸಿಮುಸಿ ನಕ್ಕರು!ಮತ್ತೆ ಸಚಿವರ ಪ್ರಶ್ನಾವಳಿ ಆರಂಭವಾಯಿತು. ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಎಷ್ಟಿದೆ?’ ಎಂದು ಡಿಡಿಪಿಐಗೆ ಪ್ರಶ್ನಿಸಿದರು. ‘ಶೇ. 50ರಷ್ಟಿದೆ ಸರ್...’ ಎಂಬ ಸಿದ್ಧಉತ್ತರ ಬಂತು. ‘ಏನ್ರಿ ಜಿಲ್ಲೆ ಬಹಳ ಬ್ಯಾಕ್ ಇದೆ. ಹೆಂಗ್ರಿ ಹಿಂಗಾದ್ರೆ. ಬಹಳ ಹಿಂದುಳಿದಿದೆ ಕಣ್ರಿ’ ಎಂದರು ರೇಣುಕಾಚಾರ್ಯ.ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕೂಡ ಬೆಳೆಹಾನಿ ಬಗ್ಗೆ ಗೊಂದಲದ ಉತ್ತರ ನೀಡಿದರು. ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ತಿಳಿಯದೆ ಸಭೆ ನಡೆಸಿದ ಉಸ್ತುವಾರಿ ಸಚಿವರು, ಅಧಿಕಾರಶಾಹಿ ನೀಡಿದ ತಪ್ಪು ಉತ್ತರ ಎದುರಿಸಬೇಕಾಯಿತು. ಇದು ಸಚಿವರ ಅಸಮರ್ಪಕ ಕಾರ್ಯವೈಖರಿ ಮೇಲೂ ಕನ್ನಡಿ ಹಿಡಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.