ತಪ್ಪು ತಿದ್ದಿಕೊಳ್ಳುವೆ, ಹೊಸ ಬದುಕು ಸಾಗಿಸುವೆ: ದರ್ಶನ್‌

7

ತಪ್ಪು ತಿದ್ದಿಕೊಳ್ಳುವೆ, ಹೊಸ ಬದುಕು ಸಾಗಿಸುವೆ: ದರ್ಶನ್‌

Published:
Updated:

ಬೆಂಗಳೂರು: `ಜೀವನದಲ್ಲಿ ಮಾಡಬಾರದ ತಪ್ಪು ಮಾಡಿದ್ದೇನೆ. ಅದರಿಂದ ಪಶ್ಚಾತ್ತಾಪವೂ ಆಗಿದೆ. ಇದೊಂದು ಕಹಿ ಘಟನೆ. ಪತ್ನಿ ಜೊತೆಗೂಡಿ ಹೊಸ ಬದುಕು ಕಟ್ಟಿಕೊಳ್ಳುತ್ತೇನೆ. ನನ್ನಿಂದಾದ ತಪ್ಪಿಗೆ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ~.ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈಗ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನಟ ದರ್ಶನ್  ಅವರು ಭಾನುವಾರ  ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತುಗಳಿವು.`ಕಲಾವಿದನ ಮೇಲೆ ಅಭಿಮಾನಿಗಳಿಗಿರುವ ಪ್ರೀತಿ ಆತ ಮರಣ ಹೊಂದಿದ ಮೇಲೆಯೇ ತಿಳಿಯುತ್ತದೆ ಎಂಬ ಮಾತಿದೆ. ಆದರೆ ನನ್ನ ಅಭಿಮಾನಿಗಳ ಪ್ರೀತಿ ಬದುಕಿರುವಾಗಲೇ ಅರಿವಿಗೆ ಬಂದಿದೆ.  ಕೆಟ್ಟ ಗಳಿಗೆಯಲ್ಲಿ ಈ ಘಟನೆ ನಡೆದಿದೆ. ತಪ್ಪನ್ನು ತಿದ್ದಿಕೊಂಡು ಪತ್ನಿಯೊಂದಿಗೆ ಚೆನ್ನಾಗಿ ಸಂಸಾರ ನಡೆಸುತ್ತೇನೆ~ ಎಂದು ದರ್ಶನ್ ಭರವಸೆ ನೀಡಿದರು.`ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಮತ್ತು ಎಲ್ಲ ಕಲಾವಿದರು ನನ್ನ ಬದುಕನ್ನು ಸರಿದಾರಿಗೆ ತರುವಲ್ಲಿ ಸಹಕಾರ ನೀಡಿದ್ದಾರೆ.  ಒಂದು ತಿಂಗಳಲ್ಲಿ ಬದುಕಿನ ಇನ್ನೊಂದು ಮುಖ ನೋಡಿದ್ದೇನೆ. ಸಾಕಷ್ಟು ಬದಲಾಗಿದ್ದೇನೆ. ಕಹಿ ಘಟನೆಗಳನ್ನೆಲ್ಲ ಮರೆತು ಚಿತ್ರರಂಗದಲ್ಲಿ ನನ್ನ ಕೆಲಸದತ್ತ ಗಮನ ಹರಿಸುತ್ತೇನೆ. ಪ್ರತಿ ಜಿಲ್ಲೆಯಲ್ಲೂ ರೋಡ್ ಶೋ ನಡೆಸಿ ಜನರ ಬಳಿಗೆ ತೆರಳಿ ಅವರೊಂದಿಗೆ ಬೆರೆಯುತ್ತೇನೆ~ ಎಂದು ಹೇಳಿದರು.ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತನಾಡಿ, `ಅದೊಂದು ಕೆಟ್ಟ ಘಟನೆ. ಕೋಪದಲ್ಲಿ ಕೆಲವು ಅನಾಹುತಗಳು ನಡೆದವು. ಹೀಗಾಗಿ ದೂರು ಕೊಡುವಂತಹ ಪ್ರಸಂಗ ಎದುರಾಯಿತು. ಅದನ್ನು ಮರೆಯುವ ಪ್ರಯತ್ನದಲ್ಲಿದ್ದೇವೆ. ಘಟನೆ ಬಳಿಕ ನಮ್ಮ ದಾಂಪತ್ಯದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ. ಪತಿ ಮತ್ತು ಮಗುವಿನ ಜೊತೆಗೆ ಆನಂದದ ಬದುಕು ಸಾಗಿಸಲು ಬಯಸಿದ್ದೇನೆ~ ಎಂದರು.ನಿಖಿತಾ ನಿಷೇಧ: `ನಟಿ ನಿಖಿತಾ ಅವರ ಮೇಲೆ ನಿರ್ಮಾಪಕರ ಸಂಘ ಹೇರಿದ್ದ ನಿಷೇಧಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ~ ಎಂದು ವಿಜಯಲಕ್ಷ್ಮಿ ಈ ವೇಳೆ ಸ್ಪಷ್ಟನೆ ನೀಡಿದರು.`ನಿಖಿತಾ ಅವರ ಮೇಲೆ ನಿಷೇಧ ಹೇರುವ ಕುರಿತು ಚಿತ್ರರಂಗದ ಯಾರೂ ನಮ್ಮನ್ನು ಸಂಪರ್ಕಿಸಿರಲಿಲ್ಲ, ಸಲಹೆಯನ್ನೂ ಕೇಳಿರಲಿಲ್ಲ. ಈ ಪ್ರಕರಣದ ಹಿಂದೆ ನಮ್ಮ ಕೈವಾಡವಿರಲಿಲ್ಲ~ ಎಂದು ಹೇಳಿದರು.

ದರ್ಶನ್ ಸಹೋದರ ದಿನಕರ್, ನಟ ಸೃಜನ್ ಲೋಕೇಶ್, ನಿರ್ಮಾಪಕ ನಾಗಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry