ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು

7

ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು

Published:
Updated:

ಲೋಕನಾಥಪುರ (ಬಾಳೆಹೊನ್ನೂರು): ಇಲ್ಲಿನ ಕರಿಮನೆ ಭೂ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸರಣಿ ಲೇಖನ `ಪ್ರಜಾವಾಣಿ~ಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯಾಪ್ತಿಯ ಹಲವು ರೈತರು, ಸಂಘಟನೆಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.`ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕಿದಲ್ಲಿ ರೈತ ಸಂಘದ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು~ ಎಂದು ರೈತ ಸಂಘದ ಕ್ಷೇತ್ರ ಅಧ್ಯಕ್ಷ ಕೆಳಕೊಪ್ಪ ಸತೀಶ್ ಎಚ್ಚರಿಸಿದ್ದಾರೆ.`ಸಹಕಾರಿ ಸಂಸ್ಥೆಯೊಂದು ತನ್ನ ತಪ್ಪು ನಿರ್ಧಾರಗಳಿಂದಾಗಿ ಖಾಸಗಿ ಲೇವಾದೇವಿ ಹಣಕಾಸು ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಿದ್ದು ಈಗ ರೈತರ, ಸರ್ಕಾರದ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ~ ಎಂದು ಪ್ರಜಾಪ್ರಭುತ್ವ ಆಂದೋಲನ ವೇದಿಕೆಯ ಕಾರ್ಯಕರ್ತೆ ಸುಮಾ ನಾಗೇಶ್ ತಿಳಿಸಿದ್ದಾರೆ.ಸಂಸ್ಥೆಯು ತನ್ನಲ್ಲಿ ಠೇವಣಿ ಇಟ್ಟಿರುವ ಠೇವಣಿದಾರರ ಸಭೆ ಕರೆದು ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಠೇವಣಿದಾರರಿಗೆ ನೀಡಿದ ಅತಿ ಹೆಚ್ಚು ಬಡ್ಡಿಯನ್ನು ಪಡೆದ ಫಲಾನುಭವಿಗಳು ಯಾರು ಎಂಬುದನ್ನು ಆಡಳಿತ ಮಂಡಳಿ ಸ್ಪಷ್ಟಪಡಿಸಲಿ. ಪಿಯರ್‌ಲೆಸ್ ಮತ್ತು ಮಣಿಪಾಲ್ ಪೈನಾನ್ಸ್‌ನಂತಹ ಜನಾನುರಾಗಿ ಖಾಸಗಿ ಹಣಕಾಸು ಸಂಸ್ಥೆಗಳೇ ದಿವಾಳಿಯಾದ ಸಂದರ್ಭದಲ್ಲೂ ಸಹ ಠೇವಣಿದಾರರಿಗೆ ಅಸಲು ಹಣವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ ಕ್ರಮ ಏಕೆ ಮಾದರಿಯಾಗಬಾರದು ಎಂದು ಅವರು ಪ್ರಶ್ನಿಸಿದ್ದಾರೆ.  ಸರಣಿ ಲೇಖನದ ಆರಂಭದಲ್ಲಿ ಈ ಭಾಗದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಮಾತನಾಡಿ, ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರದ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುವುದಾಗಿ ತಿಳಿಸಿದ್ದರು. ಆದರೆ ನಂತರ ಅವರು ಪ್ರತಿನಿಧಿಸುವ ಪಕ್ಷದ ಸದಸ್ಯರ ಮೇಲೂ ಗಂಭೀರ ಆರೋಪ ಇರುವುದನ್ನು ಮನಗಂಡ ಅವರು ದೂರವಾಣಿ ಕರೆಗೂ ಸ್ಪಂದಿಸದೆ ಜಾರಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry