ಮಂಗಳವಾರ, ಏಪ್ರಿಲ್ 13, 2021
32 °C

ತಪ್ಪೆಲ್ಲಾ ನಮ್ಮದೇ !

ವಿ.ಬಾಲಕೃಷ್ಣನ್ Updated:

ಅಕ್ಷರ ಗಾತ್ರ : | |

ಘಟನೆ 1

ಅದು 1939ನೇ ಇಸವಿ. ಪುಟ್ಟ ಹುಡುಗ ಲೀ ಹಾರ್ವೆ ಓಸ್ವಾಲ್ ಮನೆಯಲ್ಲಿ ಕಡುಬಡತನ. ಅವನ ಕುಟುಂಬ ಇದ್ದದ್ದು ಕೊಳೆಗೇರಿಯಲ್ಲಿ. ಆದರೆ ಮೂಲ ಸಮಸ್ಯೆ ಇದ್ದದ್ದು ಬಡತನದ್ದಲ್ಲ. ಅವನ ತಂದೆ ತಾಯಿ ಇಬ್ಬರೂ ಮಹಾ ಕುಡುಕರು. ಇಬ್ಬರಿಗೂ ಹತ್ತಿದ್ದು ಹರಿಯದು. ಸದಾ ಜಗಳ, ವಾಗ್ವಾದ. ಒಬ್ಬರ ಮೇಲೊಬ್ಬರ ಕೋಪ ತೀರಿಸಿಕೊಳ್ಳಲು ಇಬ್ಬರೂ ಬಡಿಯುತ್ತಿದ್ದುದು ಹಾರ್ವೆಗೆ. ಅಪ್ಪನಿಗೆ ವಿಚ್ಛೇದನ ಕೊಟ್ಟ ಅಮ್ಮ ಇನ್ನೊಬ್ಬನನ್ನು ಮದುವೆಯಾದಳು. ಕೆಲ ದಿನಗಳ ಬಳಿಕ ಅವನನ್ನೂ ಬಿಟ್ಟು ಮತ್ತೊಬ್ಬನನ್ನು ವಿವಾಹವಾದಳು. ಏನಾದರೂ ಹಾರ್ವೆ ಸ್ಥಿತಿಯಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಲಿಲ್ಲ. ಹಿಂಸೆ ಕೊಡುವ ವ್ಯಕ್ತಿಗಳು ಬದಲಾಗುತ್ತಿದ್ದರು ಅಷ್ಟೆ. ಹೀಗೆ ಪೋಷಕರ ಬೆಂಬಲವೇ ಇರದಿದ್ದರಿಂದ ಕೊಳೆಗೇರಿಯಲ್ಲಿ, ಶಾಲೆಯಲ್ಲಿ ಎಲ್ಲರಿಗೂ ಹಾರ್ವೆ ಎಂದರೆ ಸದರ.  ಅವರೆಲ್ಲರ ಆಜ್ಞೆ ಪಾಲಿಸದಿದ್ದಾಗಲೂ ಹಾರ್ವೆಗೆ ಒದೆ ಬೀಳುತ್ತಿತ್ತು. ಇದೆಲ್ಲವನ್ನೂ ಹಾರ್ವೆ ಹಲ್ಲುಮುಡಿ ಕಚ್ಚಿಕೊಂಡು ಸಹಿಸಿಯೇ ಸಹಿಸಿದ. ಎಲ್ಲಿಯವರೆಗೆ?  ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಹಾರ್ವೆಯ ಸಹನೆಯ ಕಟ್ಟೆ ಅವನ 24ನೇ ವಯಸ್ಸಿನಲ್ಲಿ ಕೊನೆಗೂ ಒಡೆದೇ ಹೋಯಿತು. ವರ್ಷಗಟ್ಟಲೆಯಿಂದ ಮಡುಗಟ್ಟಿದ್ದ ದುಃಖ, ಆಕ್ರೋಶದ ಜ್ವಾಲಾಮುಖಿ ಭುಗಿಲೆದ್ದಿತು.1963ರ ನವೆಂಬರ್ 26. ಹಾರ್ವೆ ಸೀದಾ ಮಾರುಕಟ್ಟೆಗೆ ಹೋಗಿ ಪಿಸ್ತೂಲು ಖರೀದಿಸಿ ತಂದ. ತನ್ನ ಮನೆಯ ಮೇಲಕ್ಕೆ ಹತ್ತಿ ಯದ್ವಾತದ್ವಾ ಗುಂಡು ಹಾರಿಸಿದ. ರೋಷಾವೇಷ ತಣ್ಣಗಾಗುವವರೆಗೂ ಅಬ್ಬರಿಸಿದ. ಹೀಗೆ ಹಾರ್ವೆಯ ಪಿಸ್ತೂಲಿನಿಂದ ಹಾರಿದ ಗುಂಡು, ಕೆಳಗೆ ಕಾರಿನಿಂದ ಇಳಿಯುತ್ತಿದ್ದ ವ್ಯಕ್ತಿಯೊಬ್ಬರಿಗೆ ತಾಗಿತು. ಅವರು ಸ್ಥಳದಲ್ಲೇ ಪ್ರಾಣಬಿಟ್ಟರು.ಕೂಡಲೇ ಹಾರ್ವೆಯನ್ನು ಬಂಧಿಸಲಾಯಿತು. ಎರಡು ದಿನಗಳ ಬಳಿಕ ಜೈಲಿನಿಂದ ಕೋರ್ಟಿಗೆ ಕರೆತರುವಾಗ ಇನ್ಯಾರೋ ಹಾರಿಸಿದ ಗುಂಡಿಗೆ ಹಾರ್ವೆಯ ಪ್ರಾಣಪಕ್ಷಿ ಹಾರಿಹೋಯಿತು. ಹೀಗೆ ಹಾರ್ವೆಯ ರೋಷಾವೇಷಕ್ಕೆ ಬಲಿಯಾದವರು ಯಾರೋ ಸಾಮಾನ್ಯ ವ್ಯಕ್ತಿ ಆಗಿರಲಿಲ್ಲ. ಅವರು ಅವೆುರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ!ಇಡೀ ಜಗತ್ತು ದಿಗ್ಭ್ರಾಂತವಾಯಿತು. ತನಿಖಾಧಿಕಾರಿಗಳು ತೀವ್ರ ಕಾರ್ಯಾಚರಣೆಗೆ ಇಳಿದರು. ಹಾರ್ವೆಯ ಜಾತಕ ಜಾಲಾಡಿದರು. ಕೆನಡಿಗೂ ಹಾರ್ವೆಗೂ ಎತ್ತಣಿಂದೆತ್ತ ಲೆಕ್ಕ ಹಾಕಿ ನೋಡಿದರೂ ಯಾವ ಸಂಪರ್ಕವೂ ಕಾಣಲಿಲ್ಲ. ಅಲ್ಲಿಗೆ ಯಾವ ದ್ವೇಷ ಇಲ್ಲದೆಯೂ, ಯಾವ ರೀತಿಯ ಸಂಬಂಧ ಇಲ್ಲದೆಯೂ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರದ ಅಧ್ಯಕ್ಷನನ್ನೇ ಯಾರು ಬೇಕಾದರೂ ಕೊಂದು ಹಾಕಿಬಿಡಬಹುದು ಎಂಬ ಸತ್ಯ ಜಗತ್ತಿಗೆ ಮನವರಿಕೆಯಾಯಿತು. ಅವರಿಗೇ ಹೀಗಾದರೆ ಇನ್ನು ನಮ್ಮ ಗತಿಯೇನು ಎಂದು ಇತರ ಪ್ರಮುಖರು ನಡುಗಿದರು. ಎಲ್ಲೆಡೆಯೂ ಒಂದು ರೀತಿಯ ಭೀತಿ ಆವರಿಸಿಕೊಂಡಿತು.ಘಟನೆ 2

25 ವರ್ಷದ ಹಿಂದೆ ಕೋಲ್ಕತ್ತಾದಲ್ಲಿ ಮೀರಾ ಎಂಬ ಮಹಿಳೆಗೆ ಮೊದಲ ಹೆರಿಗೆಯಲ್ಲಿ ಹೆಣ್ಣು ಮಗುವಾಯಿತು. `ಇನ್ನೊಂದೇನಾದರೂ ಹೆಣ್ಣಾದರೆ ಮಗನಿಗೆ ಬೇರೆ ಮದುವೆ ಮಾಡಿಬಿಡುತ್ತೇನೆ~ ಎಂದು ಅತ್ತೆ ಧಮಕಿ ಹಾಕಿದರು. ದುರದೃಷ್ಟವಶಾತ್ ಎರಡನೆಯದೂ ಹೆಣ್ಣಾಯಿತು. ಗಂಡ ಮುಲಾಜಿಲ್ಲದೆ ಮೂರು ಜನರನ್ನೂ ಹೊರಗೆ ದಬ್ಬಿದ. ಮಕ್ಕಳಾದ ಶೋಭಾ ಮತ್ತು ಪೂಜಾ ಜೊತೆ ಮೀರಾ ಬೀದಿಗೆ ಬಿದ್ದಳು. ಕೆಲ ದಿನಗಳ ಬಳಿಕ ಆಕೆಯ ತಮ್ಮ ಬಂದು ಮುಂಬೈನ ತನ್ನ ಮನೆಗೆ ಕರೆದೊಯ್ದ. ಅಲ್ಲಿ ಅವನಿಗೆ ಮದುವೆಯಾಗಿ ಹೆಂಡತಿ ಬಂದ ಬಳಿಕ ಅವರು ಮತ್ತೆ ಬೀದಿಪಾಲಾದರು. ದಿಕ್ಕಿಲ್ಲದ ಈ ಪರದೇಸಿಗಳಿಗೆ ಯಾರೂ ಬಾಡಿಗೆಗೆ ಮನೆ ಕೊಡಲಿಲ್ಲ. ಆ ತಾಯಿ ಸಿಕ್ಕಸಿಕ್ಕ ಶೆಡ್‌ಗಳಲ್ಲಿ, ಔಟ್‌ಹೌಸ್‌ಗಳಲ್ಲಿ ಇದ್ದುಕೊಂಡು ಬಾರ್‌ನಲ್ಲಿ, ಹೋಟೆಲ್‌ಗಳಲ್ಲಿ ಚಿಕ್ಕಪುಟ್ಟ ಕೆಲಸ ಮಾಡುತ್ತಾ ಮಕ್ಕಳನ್ನು ಸಲಹಿದಳು. ಜನ ತಲೆಗೊಂದರಂತೆ ಮಾತನಾಡಿದರು, ಜರಿದರು. ಮೂವರೂ ಯಾವುದಕ್ಕೂ ಅಂಜಲಿಲ್ಲ, ಅಳುಕಲಿಲ್ಲ. ಮುಂದೆ ಶೋಭಾ ಅರ್ಧಕ್ಕೇ ಓದು ಬಿಟ್ಟು ಅಮ್ಮನ ಜೊತೆ ಕೆಲಸಕ್ಕೆ ನಿಂತಳು. ಪೂಜಾ ಮಾತ್ರ ಕೆಲಸದ ಜೊತೆ ಓದನ್ನೂ ಮುಂದುವರಿಸಿದಳು. ಕ್ರಮೇಣ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದಳು. ಶ್ರದ್ಧೆಯಿಂದ ಅದರಲ್ಲಿ ತೊಡಗಿಸಿಕೊಂಡಳು. ಅವಳೇ ಈಗ್ಗೆ ಎರಡು ವರ್ಷದ ಹಿಂದೆ `ಮಿಸ್ ಇಂಡಿಯಾ~ ಕಿರೀಟ ತೊಟ್ಟ ಪೂಜಾ ಛೋಪ್ರಾ.ಕಿರೀಟ ತೊಡಿಸಿದ ನಿರೂಪಕಿ ಕೇಳಿದರು `ಈ ಕಿರೀಟ ನಿನಗೇ ಒಲಿದದ್ದು ಯಾಕೆ?~. ಪೂಜಾ ಉತ್ತರ ಹೀಗಿತ್ತು `ನನ್ನಂತೆ ಎಲ್ಲ ಸ್ಪರ್ಧಿಗಳೂ ಚೆನ್ನಾಗೇ ಮಾಡಿದ್ದರು. ಆದರೆ ನನ್ನ ತಾಯಿ ನನಗಾಗಿ ಮಾಡಿದ ತ್ಯಾಗ ನನ್ನ ಪರವಾಗಿ ಇದ್ದಿದ್ದರಿಂದ ನನಗೆ ಒಂದು ಹೆಚ್ಚುವರಿ ಅಂಕ ಬಂತು~.ಲೀ ಹಾರ್ವೆ ಓಸ್ವಾಲ್- ಕೆಟ್ಟದಾಗಿ ಮಕ್ಕಳನ್ನು ಬೆಳೆಸುವುದಕ್ಕೆ ಒಂದು ಉತ್ತಮ ಉದಾಹರಣೆ. ಪೂಜಾ ಛೋಪ್ರಾ- ಒಳ್ಳೆಯ ರೀತಿಯಲ್ಲಿ ಮಕ್ಕಳನ್ನು ಬೆಳೆಸಿದ್ದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಹಾರ್ವೆ ಎಂಬ ಒಂದೇ ಒಂದು ಮಗುವನ್ನು ಹೆತ್ತವರು ಸರಿಯಾಗಿ ಬೆಳೆಸದೇ ಇದ್ದುದಕ್ಕೆ ಅದರ ಭೀಕರ ಕಂಪನಗಳನ್ನು ಇಡೀ ಪ್ರಪಂಚವೇ ಅನುಭವಿಸಬೇಕಾಯಿತು. ಬಡತನದ ಬೇಗೆಯಲ್ಲೂ ಬದುಕಿನ ದಾರಿ ಕಂಡುಕೊಳ್ಳುವ ಮಾರ್ಗ ತೋರಿದ ಪೂಜಾ ತಾಯಿ ಮೀರಾ ಇಡೀ ದೇಶಕ್ಕೇ ಮಾದರಿಯಾದರು.

***

`ಅಯ್ಯೋ ನಾವೆಲ್ಲರೂ ಎಲ್ಲವನ್ನೂ ಮಾಡುತ್ತಿರುವುದೇ ನಮ್ಮ ಮಕ್ಕಳಿಗಾಗಿ, ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿರುವುದು, ಆಸ್ತಿಪಾಸ್ತಿ ಮಾಡಿಟ್ಟಿರುವುದು, ಅಷ್ಟೇ ಏಕೆ ಮನೆಯನ್ನೂ ಲೆಕ್ಕಿಸದೆ ಇಡೀ ದಿನ ಕಷ್ಟಪಟ್ಟು ದುಡಿಯುತ್ತಿರುವುದೂ ಅವರ ಸಲುವಾಗಿಯೇ ಅಲ್ಲವೇ?~- ಇದು ತಲೆತಲಾಂತರದಿಂದ ನಾವೆಲ್ಲರೂ ಹೇಳುತ್ತಾ ಬಂದಿರುವ ಏಕೈಕ ಮಂತ್ರ. ಆದರೆ ಒಂದು ಮಾತು ನೆನಪಿಡಿ. ನಮ್ಮ ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸಲು ಇವೆಲ್ಲ ಮುಖ್ಯವಾದ ಸಂಗತಿಗಳೇ ಅಲ್ಲ. ಬದುಕಿನಲ್ಲಿ ಇವಕ್ಕೆಲ್ಲ ಏನಿದ್ದರೂ ಎರಡನೆಯ ಆದ್ಯತೆ. `ಮಕ್ಕಳಲ್ಲಿ~ ನಾವು ಏನು ಹಾಕುತ್ತೇವೆಯೋ ಅದು, `ಮಕ್ಕಳಿಗೋಸ್ಕರ~ ನಾವೇನು ಮಾಡುತ್ತೇವೆ ಎಂಬುದಕ್ಕಿಂತ ಅತಿ ಮುಖ್ಯವಾದ ಸಂಗತಿ.ಒಬ್ಬ ತಂದೆ ಹೇಳುತ್ತಾನೆ- `ನನ್ನ ಮಗ ಬಿಸಿನೆಸ್‌ಗೆ ಬಂದ ತಕ್ಷಣ ನನ್ನನ್ನು ಲಕ್ಷಾಧಿಪತಿ ಮಾಡಿಬಿಟ್ಟ~. ಸ್ನೇಹಿತ ಪ್ರತಿಕ್ರಿಯಿಸುತ್ತಾನೆ `ಓಹ್ ಒಳ್ಳೆಯದಾಯಿತಲ್ಲ~. ಅದಕ್ಕೆ ತಂದೆ ನೋವಿನಿಂದ ಹೇಳುತ್ತಾನೆ `ಅಯ್ಯೋ ನಾನು ಮೊದಲು ಕೋಟ್ಯಧಿಪತಿ ಆಗಿದ್ದೆ~.`ಮಕ್ಕಳಿಗೋಸ್ಕರ~ ಉದ್ಯಮವನ್ನು ವೃದ್ಧಿಸಿ ಕೋಟ್ಯಧಿಪತಿ ಆಗಿದ್ದ ಆ ತಂದೆ `ಮಕ್ಕಳಲ್ಲಿ~ ಏನು ಮಾಡಬೇಕೋ ಅದನ್ನು ಮಾಡಿರಲಿಲ್ಲ. ಲಕ್ಷಾಧಿಪತಿಯಾದ ಆತ ಕೆಲ ದಿನಗಳಲ್ಲೇ `ಫುಟ್‌ಪಾತ್ ಪತಿ~ ಆದರೂ ಅಚ್ಚರಿಯೇನಿಲ್ಲ. `ಮಕ್ಕಳಿಗೋಸ್ಕರ~ ಎಲ್ಲವನ್ನೂ ಮಾಡಿ `ಮಕ್ಕಳಲ್ಲಿ~ ಏನು ಬಿತ್ತಬೇಕೋ ಅದನ್ನು ಬಿತ್ತದಿದ್ದರೆ ನಾವು ಕೋಟಿಗಟ್ಟಲೆ ಹಣ ಸಂಪಾದಿಸಿ ಇಟ್ಟರೂ ಅದು ಸೊನ್ನೆಗೆ ಬರಲು ಹೆಚ್ಚು ದಿನವೇನೂ ಬೇಕಾಗದು. ಆದರೆ ನಮ್ಮ ಮನೋಭಾವವನ್ನು `ಮಕ್ಕಳಿಗೋಸ್ಕರ~ ಎಂಬುದಕ್ಕೆ ಬದಲಾಗಿ `ಮಕ್ಕಳಲ್ಲಿ~ ಎಂದು ಬದಲಿಸಿಕೊಂಡದ್ದೇ ಆದರೆ ನಾವು 10 ಲಕ್ಷ ರೂಪಾಯಿ ಸಾಲ ಮಾಡಿದ್ದರೂ ನಮ್ಮ ಮಗ/ ಮಗಳು ಅದೆಲ್ಲವನ್ನೂ ತೀರಿಸಿ, ಇನ್ನೂ 10 ಕೋಟಿ ರೂಪಾಯಿ ದುಡಿಯಬಲ್ಲರು.

ಮಕ್ಕಳು ಕೆಟ್ಟದಾಗಿ ನಡೆದುಕೊಂಡರೆ ನಾವೆಲ್ಲರೂ ಸಾಮಾನ್ಯವಾಗಿ ಹೇಳುವ ಮಾತೊಂದಿದೆ. `ಅಯ್ಯೋ ನಮ್ಮ ಮಕ್ಕಳು ಅವರನ್ನು ನೋಡಿ ಹಾಳಾದರು, ಇವರನ್ನು ನೋಡಿ ಕೆಟ್ಟುಹೋದರು~. ಹೀಗೆ ಸುಲಭವಾಗಿ ಎಲ್ಲ ತಪ್ಪನ್ನೂ ಇತರರ ಮೇಲೆ ಹೊರಿಸಿಬಿಡುವ ಮುನ್ನ ಒಂದೇ ಒಂದು ಬಾರಿ ಯೋಚಿಸಿ, ನಿಮಗೇ ಗೊತ್ತಿಲ್ಲದಂತೆ ನೀವು ಎಂತೆಂತಹ ತಪ್ಪುಗಳನ್ನು ಮಾಡುತ್ತಿದ್ದೀರಿ, ಸಣ್ಣಪುಟ್ಟವು ಎಂದುಕೊಂಡು ನೀವು ಮಾಡುತ್ತಿರುವ ತಪ್ಪುಗಳು ನಿಮ್ಮ ಮಕ್ಕಳ ಮೇಲೆ ಯಾವ ರೀತಿಯ ಅಗಾಧ ಪರಿಣಾಮಗಳನ್ನು ಬೀರುತ್ತಿವೆ ಎಂಬುದು ನಿಮಗೇ ತಿಳಿಯುತ್ತದೆ. ಹೊರಗೆ ಎಂತಹುದೇ ವಾತಾವರಣ ಇರಲಿ ಮಕ್ಕಳು ಹೆಚ್ಚು ಪ್ರೇರಣೆ ಪಡೆಯುವುದು ಹೆತ್ತವರಿಂದ. ಅಪ್ಪ ಅಮ್ಮನ ಒಂದೊಂದು ನಡವಳಿಕೆಯ ಪ್ರಭಾವವೂ ಮಕ್ಕಳ ಮೇಲೆ ಅಚ್ಚೊತ್ತುತ್ತದೆ.ಮಗಳೊಂದಿಗೆ ರೈಲ್ವೆ ಟಿಕೆಟ್ ಕೌಂಟರ್‌ಗೆ ಹೋಗುವ ಅಮ್ಮ `ಒಂದು ಟಿಕೆಟ್ ಕೊಡಿ~ ಎಂದು ಕೇಳುತ್ತಾಳೆ. ಅಲ್ಲಿನವರು ಕೇಳುತ್ತಾರೆ `ಮಗನಿಗೆ ಎಷ್ಟು ವಯಸ್ಸು?~ `ನಾಲ್ಕೂವರೆ ವರ್ಷ~ ಎನ್ನುತ್ತಾಳೆ. ಅಚ್ಚರಿಯಿಂದ ನೋಡುತ್ತಾ `ಅಮ್ಮಾ~ ಎಂದು ಏನೋ ಹೇಳಲು ಹೊರಡುವ ಮಗನತ್ತ ಕಣ್ಣುಬಿಟ್ಟು ಬಾಯಿ ಮುಚ್ಚಿಸುತ್ತಾಳೆ. ಎರಡು ತಿಂಗಳ ಹಿಂದೆಯೇ ಐದು ವರ್ಷದ ಬರ್ತ್‌ಡೇ ಮಾಡಾಯ್ತಲ್ಲ, ಮತ್ತೆ ಯಾಕೆ ಅಮ್ಮ ನನಗಿನ್ನೂ ನಾಲ್ಕೂವರೆ ವರ್ಷ ಎಂದದ್ದು ಎಂದು ಮಗುವಿಗೆ ಮನಸ್ಸಿನಲ್ಲೇ ಗೊಂದಲವಾಗುತ್ತದೆ. ಯಾರೋ ನಿಮಗಾಗಿ ಫೋನ್ ಮಾಡುತ್ತಾರೆ. ಮಗ ರಿಸೀವ್ ಮಾಡುತ್ತಾನೆ.ನಾನಿಲ್ಲ ಎಂದು ಹೇಳಿಬಿಡು ಎಂದು ಸರಾಗವಾಗಿ ಹೇಳಿಬಿಡುತ್ತೀರಿ. ಕಚೇರಿಯಿಂದ ಪೆನ್ನು, ಪೆನ್ಸಿಲ್ ಅನ್ನು ಮನೆಗೆ ಹೊತ್ತು ತರುತ್ತೀರಿ. ಆ ಬಗ್ಗೆ ಪಶ್ಚಾತ್ತಾಪ ಪಡುವುದು ಒತ್ತಟ್ಟಿಗಿರಲಿ. `ಹ್ಞಾ! ಅವರು ಕೊಡೋ ಜುಜುಬಿ ಸಂಬಳಕ್ಕೆ ನಾನು ಸರಿಯಾಗೇ ಮಾಡಿದೆ~ ಎಂದುಕೊಂಡು ಬೀಗುತ್ತೀರಿ. ಕೇವಲ ಅರ್ಧ ಟಿಕೆಟ್ ದುಡ್ಡು ಉಳಿಸಲು ಹೋಗಿ, ಯಾರಿಂದಲೋ ತಪ್ಪಿಸಿಕೊಳ್ಳಲು `ನಾನಿಲ್ಲ ಎನ್ನು~ ಎನ್ನುತ್ತಾ ಮಕ್ಕಳ ಮುಂದೆ ಹಸಿಹಸಿ ಸುಳ್ಳು ಹೇಳಿ, 10 ರೂಪಾಯಿಯ ಪೆನ್ನು, 2 ರೂಪಾಯಿಯ ಪೆನ್ಸಿಲ್‌ನ್ನು ಕಚೇರಿಯಿಂದ ಕದ್ದು ತಂದು ಮಕ್ಕಳ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಎಂತಹ ಭಾವನೆಯ ಬೀಜಗಳನ್ನು ಬಿತ್ತುತ್ತಿದ್ದೀರಿ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ? ಇನ್ನು ಅವರು ಶಾಲೆಯಿಂದ ಪೆನ್ಸಿಲ್, ರಬ್ಬರ್ ಕದ್ದು ತರುವುದರಲ್ಲಿ ತಪ್ಪೇನಿದೆ? ಇದನ್ನೆಲ್ಲ ನೋಡುತ್ತಾ ಬೆಳೆಯುವ ನಿಮ್ಮ ಮಕ್ಕಳ ನೈತಿಕ ಮಟ್ಟ ಯಾವ ಗತಿಯಲ್ಲಿ ಸಾಗಬಹುದು?ಶಿಕ್ಷಣ ಎಂಬ ಶಿಕ್ಷೆ

ಗೌರ‌್ನರ್ ಜನರಲ್ ಲಾರ್ಡ್ ವೆುಕಾಲೆ 1835ರ ಫೆಬ್ರುವರಿ 2ರಂದು ಬ್ರಿಟನ್ ಸಂಸತ್ತಿನಲ್ಲಿ ಹೀಗೆ ಭಾಷಣ ಮಾಡುತ್ತಾರೆ: `ಸತತ ಒಂದು ವರ್ಷ ಇಡೀ ಭಾರತವನ್ನು ಸುತ್ತಿ ಬಂದೆ. ಅಲ್ಲಿರುವಷ್ಟು ಜ್ಞಾನ, ಸಂಪತ್ತು, ಶಿಕ್ಷಣ ವ್ಯವಸ್ಥೆ, ರೀತಿನೀತಿ ಇನ್ನೆಲ್ಲೂ ಇಲ್ಲ. ಅಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಇದೆ. ಹೀಗಾಗಿ ಭಾರತೀಯರು ನಮ್ಮ ಕೈಕೆಳಗೆ ಕೆಲಸ ಮಾಡುವಂತೆ ಮಾಡುವುದು ಬಹಳ ಕಷ್ಟದ ಕೆಲಸ. ಅವರನ್ನು ನಾವು ಮಾಡಬೇಕಾಗಿರುವುದು ಉದ್ಯಮಿಗಳನ್ನಾಗಿ ಅಲ್ಲ, ನಾವು ಹೇಳಿದಂತೆ ಕೇಳಿಕೊಂಡಿರುವ ಕ್ಲರ್ಕ್‌ಗಳು, ಜವಾನರನ್ನಾಗಿ ಮಾತ್ರ. ನಮ್ಮ ಈ ಗುರಿ ಸಾಧನೆಗೆ ಇರುವುದು ಒಂದೇ ಮಾರ್ಗ.ಹೇಗಾದರೂ ಮಾಡಿ ಅಲ್ಲಿನ ಗುರುಕುಲ ಪದ್ಧತಿಯನ್ನು ತೆಗೆದು, ನಮ್ಮ ಕಾನ್ವೆಂಟ್ ವ್ಯವಸ್ಥೆಯನ್ನು ಜಾರಿಗೆ ತರಬೇಕು~. ಮೆಕಾಲೆ ಮಾತಿನಂತೆಯೇ ನಮ್ಮಲ್ಲಿ ಒಂದೊಂದಾಗಿ ಕಾನ್ವೆಂಟ್‌ಗಳು ತಲೆ ಎತ್ತಿದವು. ಉಪನ್ಯಾಸಕ್ಕಿಂತ ಪ್ರಾಯೋಗಿಕ ಕಲಿಕೆಗೇ ಮಹತ್ವ ಇದ್ದ ಗುರುಕುಲ ವ್ಯವಸ್ಥೆ ಅದಲು ಬದಲಾಯಿತು. ನಂತರದಲ್ಲಿ ಬ್ರಿಟಿಷರು ನಮ್ಮನ್ನು ಬಿಟ್ಟು ಹೋದರು. ಆದರೆ ಅವರ ಶಿಕ್ಷಣ ಪದ್ಧತಿಯನ್ನು ಮಾತ್ರ ನಾವು ಬಲವಾಗಿ ಅಪ್ಪಿಕೊಂಡುಬಿಟ್ಟೆವು. ಅದರ ಫಲವಾಗೇ ಇಂದಿಗೂ ನಮ್ಮ ಬಾಯಲ್ಲಿ ಬರುವುದು `ಮಗೂ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರು~.  ಅಂದರೆ ಯಾರದೋ ಕೈಕೆಳಗೆ ದುಡಿಯಲು ಚಿಕ್ಕಂದಿನಿಂದಲೇ ನಾವು ಅವರನ್ನು ತಯಾರು ಮಾಡುತ್ತೇವೆಯೇ ಹೊರತು ಸ್ವಂತ ದುಡಿಯುವ, ಉದ್ಯಮ ಕಟ್ಟುವ ಮಹತ್ವಾಕಾಂಕ್ಷೆಯನ್ನು ಅವರಲ್ಲಿ ತುಂಬುವುದೇ ಇಲ್ಲ. `ಮಗೂ ಚೆನ್ನಾಗಿ ಓದಿ ನೂರಾರು ಜನರಿಗೆ ಕೆಲಸ ಕೊಡುವಂತೆ ಆಗು~ ಎನ್ನುತ್ತಾ ಬಂದರೆ ಮುಂದೆ ಅವರು ಉದ್ಯಮಿಗಳಾಗದೇ ಇರಬಹುದು, ಆದರೆ ಕನಿಷ್ಠ ಉನ್ನತ ಹುದ್ದೆಯಿಂದಲಾದರೂ ವೃತ್ತಿ ಜೀವನ ಆರಂಭಿಸುತ್ತಾರೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಬಂದರೆ ನಾವೆಲ್ಲರೂ ಹಿಗ್ಗಿ ಹೀರೇಕಾಯಿಯಾಗುತ್ತೇವೆ. ಇಂತಹ ನಮ್ಮ ಸಂಭ್ರಮದ ಬಲೂನಿಗೆ ಸೂಜಿ ಚುಚ್ಚುವಂತಹ ಬೆಳವಣಿಗೆಯನ್ನು ಸಮೀಕ್ಷೆಯೊಂದು ಹೊರಹಾಕಿದೆ.

ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದು ಓದು ಮುಗಿಸಿದ ವಿದ್ಯಾರ್ಥಿಗಳು ನಂತರ ಏನು ಮಾಡುತ್ತಿದ್ದಾರೆ ಎಂದು ಪತ್ತೆ ಹಚ್ಚಲಾಯಿತು. ಆಗ, ಅಂತಹ ವಿದ್ಯಾರ್ಥಿಗಳು ಸಾಧಾರಣ ದರ್ಜೆ ವಿದ್ಯಾರ್ಥಿಗಳಾಗಿದ್ದವರ ಕೈಕೆಳಗೆ ಅವರ ಕಂಪೆನಿಗಳಲ್ಲಿ ದುಡಿಯುತ್ತಿದ್ದರು!

ಏಕೆಂದರೆ ಸಾಧಾರಣ ದರ್ಜೆಯಲ್ಲಿ ತೇರ್ಗಡೆಯಾಗಿದ್ದವರು ಹಿಂದೆ ಕೆಲ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದರು. ಇದರಿಂದ ಮುಂದೆ ಸೋಲದಂತೆ ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿತ್ತು. ಆದರೆ ನರ್ಸರಿಯಿಂದ ಉನ್ನತ ಶಿಕ್ಷಣದವರೆಗೂ ಸೋಲು ಎಂದರೇನೆಂದೇ ಅರಿಯದವರಿಗೆ ಭವಿಷ್ಯದ ಬಗ್ಗೆ ಅತೀವ ಭಯವಿತ್ತು. ಈವರೆಗೂ ಸೋಲದ ನಾನು ಬದುಕಿನಲ್ಲಿ ಸೋತುಬಿಟ್ಟರೆ, ಕಂಪೆನಿ ಕಟ್ಟಿ ನಷ್ಟ ಆಗಿಬಿಟ್ಟರೆ ಎಂಬ `ರೆ~ ಪ್ರಪಂಚದ ಭಯವೇ ಅವರು ಸ್ವಂತ ಉದ್ದಿವೆು ಮಾಡುವ ಧೈರ್ಯ ಮಾಡುವುದರಿಂದ ಅವರನ್ನು ತಡೆಹಿಡಿದಿತ್ತು. ನಮ್ಮ ಮಕ್ಕಳು ಸೋಲಿನಿಂದಲೂ ಪಾಠ ಕಲಿಯುವಂತಾಗಬೇಕು. ಇಲ್ಲದಿದ್ದರೆ ಪರೀಕ್ಷಾ ಫಲಿತಾಂಶ ಬಂದ ಕೂಡಲೇ `ಫೇಲ್ ಆಗಿದ್ದಕ್ಕೆ ನೇಣು ಹಾಕಿಕೊಂಡ~ `ಕಡಿವೆು ಅಂಕ ಬಂತೆಂದು ವಿಷ ಕುಡಿದಳು~ ಎಂಬಂತಹ ಸುದ್ದಿಗಳನ್ನು ನಾವು ಕೇಳುತ್ತಲೇ ಇರಬೇಕಾಗುತ್ತದೆ.ಅಷ್ಟಕ್ಕೂ ಶಾಲಾ- ಕಾಲೇಜು ಶಿಕ್ಷಣಕ್ಕಿಂತ ಬದುಕಿನ ಶಿಕ್ಷಣವೇ ಎಲ್ಲಕ್ಕಿಂತ ದೊಡ್ಡದು. ಏಕೆಂದರೆ ನಾವು ಶಾಲಾ ಕಾಲೇಜಿನಲ್ಲಿ  ಕಲಿಯುವುದು ಹೆಚ್ಚೆಂದರೆ 15- 20 ವರ್ಷ ಮಾತ್ರ. ನಂತರದ ಇನ್ನುಳಿದ ಅವಧಿಯ ಶೇ 80ರಷ್ಟು ಪಾಠವನ್ನು ಬದುಕಿನಿಂದಲೇ ಕಲಿಯಬೇಕಾಗುತ್ತದೆ. ಆದ್ದರಿಂದ ಮಕ್ಕಳ ಇಡೀ ಬದುಕನ್ನು ಶೈಕ್ಷಣಿಕ ಕಲಿಕೆಯೊಂದಿಗೇ ಥಳಕು ಹಾಕಬೇಡಿ. ಅಂಕ ಗಳಿಕೆಯ ಒತ್ತಡವನ್ನು ಅವರಲ್ಲಿ ತುಂಬಬೇಡಿ. `ಒಳ್ಳೆಯ ನಡವಳಿಕೆ~ ಮತ್ತು `ಧೈರ್ಯ~ ಎಂಬ ಮಹತ್ವದ ಸಂಗತಿಗಳನ್ನು ಅವರಲ್ಲಿ ತುಂಬಿ. ಆಗ ಜೀವನದಲ್ಲಿ ಅವರು ತಾನೇ ತಾನಾಗಿ ಮುಂದೆ ಬರುತ್ತಾರೆ.ನಿಮ್ಮ ಮಕ್ಕಳ ಬಗ್ಗೆ ನೀವು ಅಥವಾ ಇತರರು ಅಂದುಕೊಳ್ಳುವುದಕ್ಕಿಂತ, ಅವರು ತಮ್ಮ ಬಗ್ಗೆ ತಾವು ಏನು ಅಂದುಕೊಳ್ಳುತ್ತಾರೋ ಅದು ಅವರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೆ ಬೇಕಿರುವುದು ಗಟ್ಟಿ ತಳಪಾಯ. ಎಷ್ಟೇ ಕೆಲಸದ ಒತ್ತಡ ಇದ್ದರೂ ದಿನದಲ್ಲಿ ಕೊಂಚ ಸಮಯವನ್ನು ಮಕ್ಕಳೊಂದಿಗೆ ಕಳೆಯಿರಿ. ಅವರಲ್ಲಿ ಆತ್ಮವಿಶ್ವಾಸ ತುಂಬಿ. ಉತ್ತಮ ಮೌಲ್ಯ ಕಲಿಸಿ. ಇವೆಲ್ಲವುಗಳಿಂದ ತುಂಬಿದ ಅಡಿಪಾಯ ಎಷ್ಟು ಗಟ್ಟಿಯಾಗಿರುತ್ತದೋ, ಫಲಿತಾಂಶ ಅಷ್ಟೇ ಉತ್ತಮವಾಗಿರುತ್ತದೆ. 

ಅಮ್ಮ, ಅಪ್ಪ ನಂಗೆ ನೀವು ಬೇಕಪ್ಪ

 ಅದೊಂದು ಭಾನುವಾರದ ಸುಂದರ ಸಂಜೆ. 8 ವರ್ಷದ ಹುಡುಗಿ ತಾಯಿಯ ಹತ್ತಿರ ಹೋಗಿ ಹೇಳುತ್ತಾಳೆ `ಅಮ್ಮಾ ನೀನೀದಿನ ಎಷ್ಟೊಂದು ಸುಂದರಳಾಗಿ ಕಾಣ್ತಾ ಇದ್ದೀಯ~. ಅಮ್ಮನಿಗೆ ಅಚ್ಚರಿಯಾಗುತ್ತದೆ. `ಬೆಳಿಗ್ಗೆಯಿಂದ ನಾನು ತಲೆಗೆ ಬಾಚಣಿಕೆ ಸೋಕಿಸಿಲ್ಲ, ಮುಖಕ್ಕೆ ಅಲಂಕಾರ ಮಾಡಿಕೊಂಡಿಲ್ಲ, ಅಷ್ಟೇಕೆ ಇನ್ನೂ ಸ್ನಾನವನ್ನೂ ಮಾಡಿಲ್ಲ, ಬರೀ ನೈಟಿಯಲ್ಲೇ ಇ್ದ್ದದೇನೆ, ಹಾಗಿದ್ದರೂ ಅದು ಹೇಗೆ ನಾನು ಚೆನ್ನಾಗಿ ಕಾಣಲು ಸಾಧ್ಯ?~ ಎಂದು ಕೇಳುತ್ತಾಳೆ. `ಅದೆಲ್ಲ ನನಗೆ ಗೊತ್ತಿಲ್ಲ, ನೀನು ಚೆನ್ನಾಗಿ ಕಾಣ್ತಾ ಇದ್ದೀಯ ಅಷ್ಟೆ, ಯಾಕೇಂದ್ರೆ ನೀನು ಬೆಳಿಗ್ಗೆಯಿಂದ ಒಂದು ಸಲಾನೂ ನನ್ನನ್ನ ಬೈಯ್ದಿಲ್ಲ~ ಎನ್ನುತ್ತದೆ ಮಗು.ಪುಟ್ಟ ಮಕ್ಕಳಿಗೂ ಗೊತ್ತು ನಾವು ಯಾವಾಗ ಸುಂದರವಾಗಿ ಕಾಣುತ್ತೇವೆ ಎಂದು. ಮನೆ- ಕಚೇರಿಯ ನಡುವಿನ ಒತ್ತಡ ನಿಭಾಯಿಸುವಷ್ಟರಲ್ಲಿ ಹೈರಾಣಾಗುವ ಪೋಷಕರು ತಮ್ಮೆಲ್ಲ ಸಿಟ್ಟನ್ನೂ ತೀರಿಸಿಕೊಳ್ಳುವುದು ಮಕ್ಕಳ ಮೇಲೆ. ಅಷ್ಟಾದರೂ ಮಕ್ಕಳ ಮುಗ್ಧ ಮನಸ್ಸು ಹೆತ್ತವರ ಸಾಮೀಪ್ಯವನ್ನು ಬೇಡುತ್ತದೆ. ಹೀಗಾಗಿ ದಿನದ ಕೊಂಚ ಸಮಯವಾದರೂ ಮಕ್ಕಳೊಂದಿಗೆ ಸಂತಸದಿಂದ ಕಳೆಯುವುದಕ್ಕೆ ಮೀಸಲಾಗಿರಲಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.