ತಬ್ಬಲಿಯ ರಕ್ಷಣೆಗೆ ಹಿರಿಯ ಜೀವಿಗಳ ಪರದಾಟ

7

ತಬ್ಬಲಿಯ ರಕ್ಷಣೆಗೆ ಹಿರಿಯ ಜೀವಿಗಳ ಪರದಾಟ

Published:
Updated:

ಆಲಮಟ್ಟಿ: ಚಿಮ್ಮಲಗಿ ಪುನರ್ ವಸತಿ ಕೇಂದ್ರ ಭಾಗ-1ರಲ್ಲಿ ಬಡತನದ ಸಂತ್ರಸ್ತ ಕುಟುಂಬವೊಂದು ಮೊಮ್ಮಗ (ಮಗಳ ಮಗ)ನ  ಚಿಕಿತ್ಸೆಗೆಗಾಗಿ ದೂರದ ಬೆಂಗಳೂರಿಗೆ ತಿಂಗಳಿಗೊಮ್ಮೆ ಅಲೆದಾಡುತ್ತಿದೆ. ಸಿಕ್ಕ ಸಿಕ್ಕವರ ಬಳಿ ಊಟ ಮಾಡಿ, ಅವರಿವರ ಕೈಕಾಲು ಹಿಡಿದು, ಮೊಮ್ಮಗನ ಆಸ್ಪತ್ರೆಯ ಖರ್ಚಿಗೆ ಹಣ ಕೂಡಿಸುತ್ತಿದ್ದಾರೆ.

ಇದು ಒಂದೆರಡು ತಿಂಗಳ ಸಮಸ್ಯೆಯಲ್ಲ. ಕಳೆದ 5 ವರ್ಷಗಳಿಂದಲೂ ದೂರದ ಬೆಂಗಳೂರಿನ ಆಸ್ಪತ್ರೆಗೆ ಹಿರಿಯ ಜೀವಿಗಳು ಅಲೆಯುತ್ತಿದ್ದಾರೆ.ಸಮಸ್ಯೆ ಏನು?: ಆಲಮಟ್ಟಿ ಸಮೀಪದ ಚಿಮ್ಮಲಗಿ ಪುನರ್ ವಸತಿ ಕೇಂದ್ರದ ಭಾಗ-1 ರಲ್ಲಿ ಪಾರ್ವತಿ ಬಂಡೆಪ್ಪಗೋಳ ಎನ್ನುವ ದಂಪತಿಯ ಮೊಮ್ಮಗ ಸಮರ್ಥ ಹುಟ್ಟಿದ 6 ತಿಂಗಳಲ್ಲೇ ತಾಯಿ ಕಳೆದುಕೊಂಡ. ಆರಂಭದಲ್ಲಿ ಚೆನ್ನಾಗಿಯೇ ಇದ್ದ. ತಾಯಿ ನಿಧನದ ನಂತರ ಆರೋಗ್ಯ ಹಾಳಾಯಿತು.

ತಂದೆ ಮಗುವನ್ನು ಬಿಟ್ಟು ಬೇರೊಂದು ಮದುವೆ ಮಾಡಿಕೊಂಡು ಹೋಗಿದ್ದಾರೆ. ಮೊಮ್ಮಗನ ರಕ್ಷಣೆಯ ಹೊಣೆ ಅಜ್ಜಿಯ ಮೇಲಿದೆ. ಈಗ ಸಮರ್ಥನ ಮುಖದಲ್ಲಿ ಮೊಡವೆಯಾಕಾರದ ಗುಳ್ಳೆಗಳು ಕಾಣಿಸಿಕೊಂಡಿವೆ. ಪರೀಕ್ಷಿಸಿದೆರೆ ರಕ್ತದ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಗಿದೆ.ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಳೆದ ಐದು ವರ್ಷದಿಂದ ನಡೆಯುತ್ತಿದೆ. ಆಸ್ಪತ್ರೆಯ ನಿಯಮದಂತೆ ಕೇವಲ ರೋಗಿಗೆ ಮಾತ್ರ ಆಹಾರ ಪೂರೈಕೆಯಾಗುತ್ತಿತ್ತು.

ಮಗುವಿಗೆ ಹಣ್ಣು ಕೊಡಿಸಲು ಹಣವಿಲ್ಲದ್ದರಿಂದ ಅಜ್ಜ-ಅಜ್ಜಿ ತಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು 10 ತಿಂಗಳು ಮೆಗಾಸಿಟಿಯಲ್ಲಿ ಕಳೆದರು. ದುಡ್ಡಿನ ಕೊರತೆ ಏದುರಾದಾಗ ರಸ್ತೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದ ಶವದ ಹಿಂದೆ ಸಾಗಿ ತೂರಿದ ಚಿಲ್ಲರೆ ಹಣ (ರೂ 50ರಿಂದ 60)ವನ್ನು ಕೂಡಿಸಿಕೊಂಡು ಮಗುವಿಗೆ ಹಣ್ಣು ತಂದಿದ್ದಾರೆ.ಮನೆ: ವಾಸಕ್ಕಿದ್ದ ಮನೆ 1997ರಲ್ಲಿ ಕೃಷ್ಣೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಆಲಮಟ್ಟಿ ಪಕ್ಕದಲ್ಲಿ ಸರಕಾರ ನೀಡಿದ  ಚಿಮ್ಮಲಗಿ ಭಾಗ-1ರ- ಪುನರ್ ವಸತಿ ಕೇಂದ್ರದಲ್ಲಿ ತಗಡಿನ ಶೆಡ್ ನಿರ್ಮಿಸಿಕೊಂಡು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಮೊಮ್ಮಗನ ಆರೋಗ್ಯದ ಚಿಂತೆ ಪಾರ್ವತಿ ಕುಟುಂಬವನ್ನು ಘಾಸಿಗೊಳಿಸಿತು.ಅಜ್ಜಿಯು ಮೊಮ್ಮಗನ ಚಿಕಿತ್ಸೆಗೆ ಹಣ ಹೊಂದಿಸುವಾಗ ಆರ್ಥಿಕ ಮುಗ್ಗಟ್ಟು ಏದುರಾಯಿತು. ಮೈಮೇಲಿದ್ದ ಬಂಗಾರದ ಆಭರಣಗಳು, ಸಣ್ಣಪುಟ್ಟ ಆಸ್ತಿ ಹಾಗೂ ಪುನರ್‌ವಸತಿ ಇಲಾಖೆ ನೀಡಿದ ನಿವೇಶನವನ್ನು ರೂ 38 ಸಾವಿರಕ್ಕೆ ಮಾರಿದ್ದಾರೆ.ಹೀಗೆ 10 ತಿಂಗಳುಗಳ ವರೆಗೆ ಆಸ್ಪತ್ರೆಯಲ್ಲಿ ಕಾಲ ಕಳೆದು ಈಗ ಮರಳಿ ಚಿಮ್ಮಲಗಿಯ ಪುನರ್ ವಸತಿ ಕೇಂದ್ರ ಭಾಗ-1ರಲ್ಲಿ ಬೇರೊಬ್ಬರ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸದ್ಯಕ್ಕೆ 5 ವರ್ಷ ತುಂಬಿರುವ ಸಮರ್ಥನಿಗೆ ಕ್ಯಾನ್ಸರ್‌ನಿಂದ ಗುಣಮುಖವಾಗ ಬೇಕಾದರೆ ಇನ್ನೂ 2-3  ವರ್ಷಗಳ ಕಾಲ ಚಿಕಿತ್ಸೆ ನೀಡಬೇಕು ಎನ್ನುವುದು ವೈದ್ಯರ ಸಲಹೆ.

ಸಮರ್ಥನ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಈಗಲೂ  ಪ್ರತಿ ತಿಂಗಳಿಗೊಮ್ಮೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಮುಂದೆ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎನ್ನುತ್ತಾರೆ ಅಜ್ಜಿ ಪಾರ್ವತಿ ಬಂಡೆಪ್ಪಗೋಳ.ಸದ್ಯಕ್ಕೆ ಪಾರ್ವತಿಯ ಕುಟುಂಬ ಕೂಲಿ ಮಾಡಿ ಜೀವನ ಸಾಗಿಸುತ್ತಿದೆ. ಮಗುವಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸುವಂತಿಲ್ಲ. ಅದಕ್ಕಾಗಿ ಆರ್ಥಿಕ ನೆರವು ಕೋರಿದೆ. ಮಗುವಿನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವವರು ಸಂಪರ್ಕಿಸಬಹುದಾದ ವಿಳಾಸ:ಪಾರ್ವತಿ ಬಂಡೆಪ್ಪಗೋಳ.

ಉಳಿತಾಯ ಖಾತೆ ಸಂಖ್ಯೆ-31249491608,

ಎಸ್.ಬಿ.ಐ. ಶಾಖೆ

ಆಲಮಟ್ಟಿ ಡ್ಯಾಂಸೈಟ್,

ಶಾಖೆ ಕೋಡ್ -5751.

ಮೋ-ನಂ-9620545188.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry