ತಮಿಳರನ್ನೂ ಕಾಡುವ ಡಬ್ಬಿಂಗ್ ಭೂತ

7

ತಮಿಳರನ್ನೂ ಕಾಡುವ ಡಬ್ಬಿಂಗ್ ಭೂತ

Published:
Updated:
ತಮಿಳರನ್ನೂ ಕಾಡುವ ಡಬ್ಬಿಂಗ್ ಭೂತ

ಸಿನಿಮಾ ಮಂದಿ ಮತ್ತು ಸಿನಿಮಾ ರಸಿಕರು ಡಬ್ಬಿಂಗ್ ಪರವೋ ವಿರೋಧವೋ ಎಂದು ಜಿಜ್ಞಾಸೆ ಮಾಡಿ ವಾದಕ್ಕೆ ಇಳಿಯುವ ಸಂದರ್ಭ ಇಂದು ಬಂದಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಹೊರಟಾಗ ತುಂಬ ಚಿತ್ರ ವಿಚಿತ್ರ ಮಾಹಿತಿ ಕೈಗೆ ಸಿಕ್ಕಿತು. ಕೆಲವು ವಿವರಗಳನ್ನು ಇಲ್ಲಿ ಕೊಡುತ್ತಿದ್ದೇನೆ.

ಬೆಂಗಳೂರಿನ ಬಹುಭಾಷಾ ಪರಿಸರದಲ್ಲಿ ಡಬ್ಬಿಂಗ್ ವಾದ ದೊಡ್ಡ ಗಂಟಲಿನ ಜಗಳವಾಗುವುದು ಸಹಜ. ಆದರೆ ಅದು ಯಾಕೋ ಕನ್ನಡ ಚಿತ್ರರಂಗ ಮಾತ್ರ ಡಬ್ಬಿಂಗ್ ವಿರೋಧಿ ಅನ್ನುವ ಭಾವನೆ ಕನ್ನಡ ಚಿತ್ರ ಪ್ರೇಮಿಗಳೂ ಸೇರಿ ಹಲವರಲ್ಲಿ ಬೇರೂರಿದೆ. ಬಂಗಾಳಿ, ಗುಜರಾತಿ, ಮತ್ತು ಪಂಜಾಬಿ ಭಾಷೆಗಳೂ ಡಬ್ಬಿಂಗ್ ಒಪ್ಪಿಕೊಂಡಿಲ್ಲ. ಹೀಗಾಗಿ ಭಾರತದ ನಾಲ್ಕು ಮುಖ್ಯ ಭಾಷೆಗಳಲ್ಲಿ ಡಬ್ಬಿಂಗ್ ಮಾಡಲು ಸಿನಿಮಾ ಮಂದಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಕನ್ನಡ ಸಿನಿಮಾಕ್ಕೆ ಕಂಟಕವಾಗಬಲ್ಲ ತಮಿಳು, ತೆಲುಗು, ಹಿಂದಿ ಸಿನಿಮಾ ಉದ್ಯಮಗಳೂ ಡಬ್ಬಿಂಗ್ ಒಪ್ಪಿಕೊಂಡು ತಾವು ತಪ್ಪು ಮಾಡಿರಬಹುದೇ ಎಂದು ಚಿಂತಿಸುತ್ತಿವೆ.

ಹಿಂದಿಯ ಹೆಸರಾಂತ ನಿರ್ದೇಶಕ ಮಹೇಶ್ ಭಟ್ ಹಾಲಿವುಡ್‌ನಿಂದ ಹಿಂದಿಗೆ ಡಬ್ಬಿಂಗ್ ವಿಷಯ ಬಂದಾಗ ಡಬ್ಬಿಂಗ್ ವಿರೋಧಿ. ಆದರೆ ಹಿಂದಿ ಸಿನಿಮಾ ಬೇರೆ ಭಾರತೀಯ ಭಾಷೆಗಳಿಗೆ ಡಬ್ಬಿಂಗ್ ಆಗುವ ವಿಷಯ ಬಂದಾಗ ಡಬ್ಬಿಂಗ್ ಪರ. ಈ ದ್ವಂದ್ವ ನೀತಿ ಎಷ್ಟು ಸ್ವಾರ್ಥದಿಂದ ಕೂಡಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಡಬ್ಬಿಂಗ್ ವಿವಾದ ಬಿಸಿಯೇರುತ್ತಿದ್ದಂತೆ ಹೊರಬರುತ್ತಿರುವ ಇಂಥ ಎಷ್ಟೋ ಹೇಳಿಕೆಗಳು ಸ್ವಹಿತ ಕಾಯ್ದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರುವುದು ಕಾಣುತ್ತಿವೆ.

ಇನ್ನು ತಮಿಳು ಉದ್ಯಮ ದಕ್ಷಿಣ ಭಾರತದಲ್ಲಿಯೇ ಡಬ್ಬಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ ಈ ಅಂಕಿ ಅಂಶ ನೋಡಿ: 2001ರಲ್ಲಿ ಆ ಭಾಷೆಗೆ ಡಬ್ ಆದ ಚಿತ್ರಗಳ ಸಂಖ್ಯೆ 104. ಅದೇ ವರ್ಷ ಅವರು ತಯಾರಿಸಿದ ನೇರ ಚಿತ್ರಗಳ ಸಂಖ್ಯೆ 82. ಅಂದರೆ ನೇರ ಚಿತ್ರಗಳ ಸಂಖ್ಯೆಯನ್ನು ದಾಟಿ 22 ಚಿತ್ರಗಳು ಡಬ್ ಆಗಿ ತಮಿಳಿಗೆ ಬಂದಿದ್ದವು.

ಕಳೆದ ವರ್ಷದ, ಅಂದರೆ 2011ರ, ಅಂಕಿ ಅಂಶ ಸ್ವಾರಸ್ಯಕರವಾಗಿದೆ. ಇದೇ ಉದ್ಯಮ 142 ನೇರ ಚಿತ್ರಗಳನ್ನು ಬಿಡುಗಡೆ  ಮಾಡಿ, ತಮಿಳಿಗೆ ಡಬ್ ಆದ 38 ಚಿತ್ರಗಳ ಸವಾಲನ್ನು ಮಾತ್ರ ಎದುರಿಸಿದೆ. ಅಂದರೆ ಡಬ್ ಸಿನಿಮಾಗಳ ಸಂಖ್ಯೆ ಹತ್ತು ವರ್ಷದಲ್ಲಿ ಶೇ 60ರಷ್ಟು ಕಡಿಮೆಯಾಗಿದೆ ಮತ್ತು ನೇರ ಚಿತ್ರಕ್ಕೂ ಡಬ್ ಆದ ಚಿತ್ರಕ್ಕೂ ಇರುವ ಅಂತರ ನೇರ ಚಿತ್ರಗಳ ಪರವಾಗಿ ಮೂಡಿದೆ.

ಹಾಗಾದರೆ ತಮಿಳರು ತಮ್ಮ ಪ್ರತಿಭೆಯಿಂದಲೇ ಈ ಯುದ್ಧವನ್ನು ಗೆದ್ದರೆ? ಡಬ್ ಆದ ಚಿತ್ರಗಳ ಮೇಲೆ ತಮಿಳುನಾಡು ಸರ್ಕಾರ ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತದೆ. ಸೃಜನಶೀಲ ಚಿತ್ರಗಳು ಮತ್ತು ತೆರಿಗೆಯ ಬಲದಿಂದ ತಮಿಳು ಡಬ್ಬಿಂಗ್ ಸಂಕಷ್ಟದಿಂದ ಹೊರಬಂದಂತೆ ಕಾಣುತ್ತದೆ. ಆದರೆ ಅವರೂ ಡಬ್ಬಿಂಗ್ ತಡೆಯಲು ಏನೆಲ್ಲಾ ಕಟ್ಟುಪಾಡು ಹೇರಬಹುದು ಎಂದು ಈಗ ಯೋಚಿಸುತ್ತಿದ್ದಾರೆ.

ಇದೇ ದಶಕದಲ್ಲಿ ಆಂಧ್ರಪ್ರದೇಶದ ಸಿನಿಮಾ ಉದ್ಯಮ ಹೇಗೆ ದಾರಿ ಸವೆಸಿದೆ? 2001ರಲ್ಲಿ 88 ನೇರ ತೆಲುಗು ಚಿತ್ರಗಳು ಬಿಡುಗಡೆಯಾದರೆ 83 ಡಬ್ ಆದ ಚಿತ್ರಗಳು ಬಿಡುಗಡೆಯಾದವು. 2011ರಲ್ಲಿ ನೇರ ಚಿತ್ರಗಳ ಸಂಖ್ಯೆ 120ಕ್ಕೆ ಏರಿದೆ. ಡಬ್ ಆದ ಚಿತ್ರಗಳ ಸಂಖ್ಯೆ ಹತ್ತು ವರ್ಷದ ಹಿಂದೆ ಹೇಗಿತ್ತೋ ಇಂದೂ ಸುಮಾರು ಹಾಗೆಯೇ ಇದೆ: 81. ನೇರ ಚಿತ್ರಗಳ ಸಂಖ್ಯೆ ಹೆಚ್ಚಿಸಿಕೊಂಡು ತೆಲುಗರು ಇಂದು ಡಬ್ಬಿಂಗ್ ಸವಾಲನ್ನು ಎದುರಿಸುತ್ತಿದ್ದಾರೆ. ಆದರೆ ಅಲ್ಲೂ ಹಲವರಿಗೆ ಡಬ್ಬಿಂಗ್ ಮೇಲೆ ನಿರ್ಬಂಧ ಹೇರುವುದು ಅಗತ್ಯವಾಗಿ ಕಾಣುತ್ತಿದೆ.

ಮಲಯಾಳಂ ಚಿತ್ರರಂಗ ಡಬ್ಬಿಂಗ್ ಒಪ್ಪಿಕೊಂಡಿದೆ. ಆದರೆ ಅಲ್ಲಿ ಅದು ಅಷ್ಟು ದೊಡ್ಡ ಹಾವಳಿ ಆದ ಹಾಗೆ ಕಾಣುತ್ತಿಲ್ಲ. 2001ರಲ್ಲಿ ಅಲ್ಲಿ ತಯಾರಾದ ನೇರ ಚಿತ್ರ 92, ಡಬ್ ಆಗಿ ಬಂದದ್ದು 10. ಹತ್ತು ವರ್ಷದ ನಂತರ, ಅಂದರೆ 2011ರ ದೃಶ್ಯ: ನೇರ ಚಿತ್ರಗಳು 85, ಡಬ್ ಚಿತ್ರಗಳು 6.

ಹಾಗಾದರೆ ಕನ್ನಡದ ಸಂದರ್ಭಕ್ಕೆ ಏನು ಪರಿಹಾರ? ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿರುವ ಭಾಷಾ ವೈವಿಧ್ಯ ಮತ್ತು ಪರಭಾಷಾ ನಿಷ್ಠೆ ಕನ್ನಡಕ್ಕೆ ಭೂತಾಕಾರದ ಸವಾಲಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ನಾನು ಮಾತಿಗೆಳೆದ ಚಿತ್ರ ನಿರ್ದೇಶಕ ಚೈತನ್ಯ, ಚಿತ್ರೋದ್ಯಮದ ಆಗುಹೋಗನ್ನು ವರದಿ ಮಾಡುತ್ತಾ ಬಂದ ಮುರಳೀಧರ ಖಜಾನೆ, ಅಂಕಿ ಅಂಶ ಹೆಕ್ಕಿ ತಂದ ಪತ್ರಕರ್ತ-ಗೆಳೆಯ, ಬಸವರಾಜ್ ಮೇಗಳಕೇರಿ ಎಲ್ಲರೂ ಕನ್ನಡಕ್ಕೆ ಡಬ್ಬಿಂಗ್ ಬಂದರೆ ಹಾನಿಯೇ ಹೆಚ್ಚು ಎಂದು ನಂಬಿದ್ದಾರೆ.

ನನಗೆ ಇದು ಬಗೆ ಹರಿಯುತ್ತಿಲ್ಲ. ಬೆಂಗಳೂರಿನಲ್ಲಿ ಕನ್ನಡ ಭಾಷೆ ಹೆಚ್ಚು ಕಿವಿಗೆ ಬೀಳುವಂತಾದರೆ, ಹೆಚ್ಚು ಜನ ನಮ್ಮ ಭಾಷೆಯನ್ನು ಅರ್ಥ ಮಾಡಿಕೊಳ್ಳುವಂತಾದರೆ, ನಾನು ಡಬ್ಬಿಂಗ್ ಪರ. ಕನ್ನಡ ಚಿತ್ರೋದ್ಯಮವನ್ನೇ ಅದು ನಾಶ ಮಾಡುವಂತಾದರೆ ನಾನು ಡಬ್ಬಿಂಗ್ ವಿರೋಧಿ. ಚುರುಕು, ತಾಜಾ ಸಿನಿಮಾ ಮಾಡಲು ಉತ್ತೇಜನ ನೀಡಿ, ತೆರಿಗೆಯ ಅಸ್ತ್ರ ಬಳಸಿ ಡಬ್ಬಿಂಗ್ ಚಿತ್ರಗಳು ನಮ್ಮ ಚಿತ್ರೋದ್ಯಮವನ್ನು ನಾಶ ಮಾಡದಂತೆ ತಡೆಯಲು ಸಾಧ್ಯವಾದರೆ ಎರಡೂ ಆಕಾಂಕ್ಷೆಗಳು ಈಡೇರಬಹುದೇನೋ .

ಇನ್ನು ದೊಡ್ಡ ಬಜೆಟ್ ಡಬ್ ಸಿನಿಮಾಗಳ ವಿಷಯ. ಅವು ನಮ್ಮ ಉದ್ಯಮವನ್ನು ಸಾರಾಸಗಟಾಗಿ ಮುಗಿಸಿಬಿಡುತ್ತವೆ ಎಂಬ ವಾದ ಕೇಳಿಬರುತ್ತಿದೆ. ಆದರೆ ದುಡ್ಡು ಜಾಸ್ತಿ ಹಾಕಿದಷ್ಟೂ ಪ್ರಯೋಗ ಮಾಡುವ, ರಿಸ್ಕಿ ಕಥೆ ಹೇಳುವ ಧೈರ್ಯ ಸಿನಿಮಾ ತಯಾರಕರಿಗೆ ಕಡಿಮೆಯಾಗುತ್ತಾ ಹೋಗುತ್ತದೆ. ಐಡಿಯಾದ ಬಲದ ಮೇಲೆಯೇ ನಾವು ಧನಿಕ ಉದ್ಯಮಿಗಳ ಜೊತೆ ಸೆಣೆಸಾಡಲು ಸಾಧ್ಯ.

ನಾವು ಹಿಂದಿ ಮತ್ತು ಹಾಲಿವುಡ್‌ನಷ್ಟೇ ಖರ್ಚು ಮಾಡಿ ಸಿನಿಮಾ ತೆಗೆಯುತ್ತೇವೆ ಅನ್ನುವುದು ಒಣ ಪ್ರತಿಷ್ಠೆಯಲ್ಲದೆ ಬೇರೇನೂ ಅಲ್ಲ. ಅಷ್ಟಕ್ಕೂ ಬಸವಣ್ಣ ಹೇಳಿದ್ದು ನೆನಪಿಲ್ಲವೇ? `ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯಾ?~ ಸ್ಥಿತಿವಂತ ಉದ್ಯಮಿಗಳು ಸ್ಥಾವರ ಸಿನಿಮಾಗಳನ್ನು ಮಾಡುತ್ತಿರಲಿ. ನಾವು ಜೀವಂತ, ಜಂಗಮ ಸಿನಿಮಾ ಮಾಡೋಣ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.  

ಮರ್ಯಾದೆ ಪ್ರಶ್ನೆ

ಬೆಂಗಳೂರಿನ ರಸ್ತೆಯಲ್ಲಿ ಹೊಂಚು ಹಾಕುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಹಿಡಿದರಂತೆ. ಮಾತಾಡಿಸಿದಾಗ ಗೊತ್ತಾದ ವಿಷಯ: ಅವರಿಬ್ಬರೂ ಬಂಗಾಳಿಗಳು. ಸರಿ ಪೋಲಿಸ್ ಸ್ಟೇಷನ್‌ಗೆ ದರದರನೆ ಎಳೆದು ಒಯ್ದರು. ಅಲ್ಲಿ ಇನ್ಸ್‌ಪೆಕ್ಟರ್ ಇವರ ಮುಖ ನೋಡಿ, `ಹೆಸರೇನು~ ಎಂದು ಹೇಳಿದರು. `ಬ್ಯಾನರ್ಜೀ~ ಮತ್ತು `ಚ್ಯಾಟರ್ಜೀ~ ಎಂದು ಕಳ್ಳರು ಉತ್ತರಿಸಿದರು. ಇನ್ಸ್‌ಪೆಕ್ಟರ್‌ಗೆ ವಿಪರೀತ ಕೋಪ ಬಂದು ಎರಡು ಬಾರಿಸಿದರು. `ಮಾಡೋದು ನೋಡಿದರೆ ಕಳ್ಳತನ, ಹೆಸರು ಕೇಳಿದರೆ ತಮಗೆ ತಾವೇ ಮರ್ಯಾದೆ ಬೇರೆ ಕೊಟ್ಟುಕೊಳ್ಳುತ್ತಾರೆ. ಜೀ ಅಂತೆ ಜೀ. ಬ್ಯಾನರ್, ಚ್ಯಾಟರ್ ಅಂತ ಹೇಳಿ~ ಎಂದು ಗುಡುಗಿದರಂತೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry