ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ

7

ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ

Published:
Updated:

ಸಿಂಧನೂರು: ರಾಜ್ಯಕ್ಕೆ ಬರಗಾಲ ಬಂದಿರುವ ಸಮಯದಲ್ಲಿ ತಮಿಳುನಾಡಿಗೆ ಕಾವೇರಿ ನದಿಯ ನೀರು ಹರಿಸಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.ಗಾಂಧಿವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ನಂತರ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.ಈ ಬಾರಿ ರಾಜ್ಯದಲ್ಲಿ ಬರಗಾಲ ಬಿದ್ದಿದೆ. ರಾಜ್ಯಕ್ಕೆ ನೀರಿನ ಕೊರತೆ ತೀವ್ರವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಪ್ರಧಾನ ಮನಮೋಹನಸಿಂಗ್ ಕಾವೇರಿ ನದಿಯ 9ಸಾವಿರ ಕ್ಯೂಸೆಕ್ ನೀರನ್ನು ಹರಿಸುವಂತೆ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ.  ರೈತರು ಬೆಳೆದ ಬೆಳೆಗಳು ನೀರು ಕಾಣದೆ ಒಣಗುತ್ತಿವೆ. ರೈತರು ನಷ್ಟದ ಭೀತಿಯಲ್ಲಿದ್ದಾರೆ. ರಾಜ್ಯದಲ್ಲಿ 178 ತಾಲ್ಲೂಕುಗಳಲ್ಲಿ ಬರಗಾಲದಿಂದ ತತ್ತರಿಸಿವೆ. ಆದ್ದರಿಂದ ತಜ್ಞರ ತಂಡವನ್ನು ರಚಿಸಿ ಕಾವೇರಿ ಪಾತ್ರದಲ್ಲಿ ಎಷ್ಟು ನೀರಿದೆ, ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ನೀಡಬೇಕು ಎಂಬುದರ ಬಗ್ಗೆ ವರದಿ ಪಡೆದು ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರಧಾನಿ ನೀಡಿದ ಆದೇಶವನ್ನು ಹಿಂದಕ್ಕೆ ಪಡೆಯಬೇಕು, ಬೆಂಗಳೂರಿನಲ್ಲಿ ಪ್ರತಿಭಟನೆಯ ಸಮಯದಲ್ಲಿ ಬಂಧಿತವಾಗಿರುವ ವೇದಿಕೆಯ ರಾಜ್ಯಾಧ್ಯಕ್ಷ ರಮೇಶಗೌಡರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಯಿತು.ವೇದಿಕೆ ಜಿಲ್ಲಾಧ್ಯಕ್ಷ ಸುರೇಶ ವೈ.ಬಿ.ಕಟ್ಟಿಮನಿ, ತಾಲ್ಲೂಕು ಅಧ್ಯಕ್ಷ ಆಂಜನೇಯ ಛತ್ರ, ಉಪಾಧ್ಯಕ್ಷ ಮಂಜುನಾಥ, ವಿರುಪಾಕ್ಷ ಎಂ.ಎಸ್., ರಜಾಕ್ ಎಸ್.ಜೆ., ವೀರೇಶಸ್ವಾಮಿ, ಈರಪ್ಪ ಗೊರೇಬಾಳ, ಯಮನೂರು ಡಿ.ಸಿ, ಖಾದರಬಾಷ, ಶಬ್ಬೀರ, ಸದ್ದಾಂ, ಹುಸೇನ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry