ತಮಿಳುನಾಡಿಗೆ ನೀರು: ಸಾಲು ಸಾಲು ಪ್ರತಿಭಟನೆ

7

ತಮಿಳುನಾಡಿಗೆ ನೀರು: ಸಾಲು ಸಾಲು ಪ್ರತಿಭಟನೆ

Published:
Updated:

ಶ್ರೀರಂಗಪಟ್ಟಣ: ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ತಾಲ್ಲೂಕಿನ ನೆಲಮನೆ, ಕೆಂಪೇಗೌಡನಕೊಪ್ಪಲು ಹಾಗೂ ಹನುಮಂತನಗರ ಗ್ರಾಮಸ್ಥರು ಗುರುವಾರ ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನೆಲಮನೆಯಿಂದ ದರಸಗುಪ್ಪೆ ಮಾರ್ಗವಾಗಿ ಪಟ್ಟಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಎತ್ತಿನ ಗಾಡಿಗಳ ಜತೆ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಹೆದ್ದಾರಿ ವೃತ್ತದಲ್ಲಿ ಧರಣಿ ಆರಂಭಿಸಿದರು.ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಹೆದ್ದಾರಿ ಬಂದ್ ಮಾಡಿದರು. ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಹಾಗೂ ತಮಿಳುನಾಡು ಮುಖ್ಯಮಂತ್ರಿಯ ವಿರುದ್ಧ ಘೋಷಣೆ ಕೂಗಿದರು. ಜಯಲಲಿತಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಶಂಕರಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕಚಲುವೇಗೌಡ, ಎನ್.ಜಿ.ರಾಜು, ಎನ್.ಟಿ.ಪುಟ್ಟಸ್ವಾಮಿ, ನಾಗೇಶ್, ಮರಿಸ್ವಾಮಿಗೌಡ, ಮುರುಳಿ, ದಯಾನಂದಸಾಗರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ನಾಯಕರ ಸಂಘ: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ನಿಲ್ಲಿಸುವಂತೆ ಆಗ್ರಹಿಸಿ ವೀರ ಮದಕರಿನಾಯಕ ಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಮಿನಿ ವಿಧಾನಸೌಧದಿಂದ ರಾಜ ಒಡೆಯರ್ ಮಾರ್ಗವಾಗಿ ಕುವೆಂಪು ವೃತ್ತದವರೆಗೆ ಖಾಲಿ ಕೊಡಗಳ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಹೆದ್ದಾರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ನಾಯಕರ ಸಂಘದ ಅಧ್ಯಕ್ಷ ಮಹದೇವನಾಯಕ, ಎಸ್.ಟಿ.ರಾಜಣ್ಣ, ದಿವಾಕರ್, ಶಿವಕುಮಾರ್, ಎಂ.ರವಿ. ಶ್ರೀಧರ್, ಗೀತಾ, ಪಲ್ಲವಿ, ಸರೋಜಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಬೈಕ್ ರ‌್ಯಾಲಿ: ವಕೀಲರ ಸಂಘದ ಅಧ್ಯಕ್ಷ, ಸದಸ್ಯರು ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಗುರುವಾರ ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿದರು. ನ್ಯಾಯಾಲಯದ ಆವರಣದಿಂದ ರಾಜ ಒಡೆಯರ್ ಬೀದಿಯಲ್ಲಿ ಕುವೆಂಪು ವೃತ್ತದ ವರೆಗೆ ರ‌್ಯಾಲಿ ನಡೆಯಿತು.ದಾರಿಯುದ್ದಕ್ಕೂ ತಮಿಳುನಾಡು ಸರ್ಕಾರದ ವಿರುದ್ಧ ವಕೀಲರು ಘೋಷಣೆ ಕೂಗಿದರು. ಬೆಂಗಳೂರು- ಮೈಸೂರು ಸರ್ಕಲ್‌ನಲ್ಲಿ ಕೆಲಕಾಲ ಧರಣಿ ನಡೆಸಿದರು. ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದರಿಂದ ಕಕ್ಷಿದಾರರು ತೊಂದರೆ ಅನುಭವಿಸಬೇಕಾಯಿತು. ಸಂಘದ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಸುಬ್ರಹ್ಮಣ್ಯ, ಸಂತೋಷ್, ಪ್ರಭಾಕರ್, ಸತ್ಯನಾರಾಯಣ ಇತರರು ಪ್ರತಿಭಟನೆಯಲ್ಲಿದ್ದರು.ಉಪವಾಸ ಸತ್ಯಾಗ್ರಹ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ತಾಲ್ಲೂಕು ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರು ಗುರುವಾರ ಒಂದು ದಿನ ಉಪವಾಸ ಕೈಗೊಂಡರು. ಸಮಿತಿಯ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜೆ.ಪಿ.ಉದ್ಯೋಗ ಕೇಂದ್ರದ ಮುಖ್ಯಸ್ಥ ಡಿ.ಬಿ.ರುಕ್ಮಾಂಗ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ಉಪಾಧ್ಯಕ್ಷ ಚಂದ್ರನಾಗ, ಕೆ.ಆರ್.ಸೊಸೈಟಿ ನಿರ್ದೇಶಕ ಉಮೇಶ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಇತರರು ಉಪವಾಸ ನಡೆಸಿದರು. ಬೇಬಿ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಇತರರು ಧರಣಿಯಲ್ಲಿದ್ದರು.ಕೆಆರ್‌ಎಸ್ ಮುತ್ತಿಗೆ: ಪ್ರಕರಣ ದಾಖಲು

ಶ್ರೀರಂಗಪಟ್ಟಣ
: ತಮಿಳನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಅಗ್ರಹಿಸಿ ಬುಧವಾರ ನಡೆದ ಕೆಆರ್‌ಎಸ್ ಮುತ್ತಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಕೆಆರ್‌ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗಣಿಗ ರವಿ, ಚಿದಂಬರ್, ಜಯರಾಂ, ಅಶೋಕ್ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಕೆಎಸ್‌ಆರ್‌ಪಿ ತುಕಡಿಯ ಮುಖ್ಯ ಪೇದೆ ಡಿ.ನಾಯಕ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಕೆಆರ್‌ಎಸ್ ಬಳಿ ಕಲ್ಲು ತೂರಾಟ ನಡೆದಿದ್ದರಿಂದ ಡಿ.ನಾಯಕ್ ಗಾಯಗೊಂಡಿದ್ದರು. ಪ್ರಕರಣದಲ್ಲಿ ಇತರರು ಎಂದು ಸೇರಿಸಿರುವುದರಿಂದ ಮತ್ತಷ್ಟು ಜನರ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬೆಳಗೊಳ: ತಾಲ್ಲೂಕಿನ ಬೆಳಗೊಳ ಬಳಿ ಗ್ರಾಮಸ್ಥರು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಮೈಸೂರು- ಕೆಆರ್‌ಎಸ್ ರಸ್ತೆ ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನ ಗಾಡಿಗಳನ್ನು ರಸ್ತೆಯಲ್ಲಿ ನಿಲ್ಲಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಆದಿಶೇಷ, ವಿಷಕಂಠು, ಸುನಿಲ್, ನವೀನ್, ಸತೀಶ್, ಪ್ರಕಾಶ್, ಶಂಕರ್ ಇತರರು ಪ್ರತಿಭಟನೆಯಲ್ಲಿದ್ದರು. ತಾಲ್ಲೂಕಿನ ಪಂಪ್‌ಹೌಸ್‌ನಿಂದ ಮೈಸೂರಿಗೆ ನೀರು ಸರಬರಾಜು ಮಾಡುವ ಕೇಂದ್ರವನ್ನು ಬಂದ್ ಮಾಡುವ ಯತ್ನ ಕೂಡ ನಡೆಯಿತು. ಹೊಸ ಆನಂದೂರು ಗ್ರಾಮಸ್ಥರು ನೀರು ಸರಬರಾಜು ಕೇಂದ್ರಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಪಂಪ್‌ಹೌಸ್ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಯಿತು.ಹೆದ್ದಾರಿ ತಡೆ, ಸೈಕಲ್ ಜಾಥಾ

ಮದ್ದೂರು:
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ಪಟ್ಟಣ ಸೇರಿದಂತೆ ವಿವಿಧೆಡೆ ಗುರುವಾರವೂ ಹೆದ್ದಾರಿ ತಡೆ ಪ್ರತಿಭಟನೆಗಳು ಮುಂದುವರಿದಿವೆ.ಹೆದ್ದಾರಿ ತಡೆ: ಸೋಮನಹಳ್ಳಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಗುರುವಾರ ಶಾಸಕ ಎಸ್.ಎಂ.ಶಂಕರ್ ನೇತೃತ್ವದಲ್ಲಿ ಗ್ರಾಮಸ್ಥರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ಶಾಸಕಿ ಕಲ್ಪನ ಸಿದ್ದರಾಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಂದರ್ಶ, ಸಿ.ಟಿ.ಶಂಕರ್, ಅಂದಾನಿ ಸೋಮನಹಳ್ಳಿ, ಚಿಕ್ಕೇಗೌಡ, ಶಂಕರ್, ಯೋಗರಾಜು, ಶಿವಪ್ಪ, ಅಪ್ಪೇಗೌಡ, ಭರಣಿ ರಾಮಕೃಷ್ಣ ಸೇರಿದಂತೆ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ವಿವಿಧ ಕಾರ್ಖಾನೆಗಳ ನೌಕರರು ಪಾಲ್ಗೊಂಡಿದ್ದರು.ಸೈಕಲ್ ಜಾಥಾ: ತಾಲ್ಲೂಕಿನ  ಆಬಲವಾಡಿ ಗ್ರಾಮದ ರಾಹುಲ್ ದ್ರಾವಿಡ್ ಅಭಿಮಾನಿ ಬಳಗದ ಸದಸ್ಯರು `ಕಾವೇರಿ ಉಳಿಸಿ-ರೈತರ ಬದುಕಿಸಿ~ ಎಂದು ಆಗ್ರಹಿಸಿ ತಿರುಪತಿಗೆ ಸೈಕಲ್ ಮೂಲಕ ಜಾಥಾ ಹೊರಟರು.

ಪಟ್ಟಣದ ಕೊಪ್ಪ ವೃತ್ತಕ್ಕೆ ಆಗಮಿಸಿದ ಅವರನ್ನು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಪ್ಪು ಪಿ.ಗೌಡ, ಚೇತನ್, ಅಂಬರೀಷ್, ಸಿದ್ದರಾಜು ಇತರರು ಸ್ವಾಗತಿಸಿ ಬಿಳ್ಕೊಟ್ಟರು. ಸೈಕಲ್ ಜಾಥಾದಲ್ಲಿ ಬಳಗದ ಸದಸ್ಯರಾದ ಪ್ರಮೋದ್, ಯೋಗಾನಂದ, ತಿಮ್ಮೇಶ್, ರಾಜೇಶ್, ವೆಂಕಟೇಶ್ ಇತರರು ಭಾಗವಹಿಸಿದ್ದರು.ಗೆಜ್ಜಲಗೆರೆ: ಸಮೀಪದ ಕುದರಗುಂಡಿ ಗ್ರಾಮಸ್ಥರು ಗೆಜ್ಜಲಗೆರೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ಹೆದ್ದಾರಿ ತಡೆ ನಡೆಸಿದರು. ಹೆದ್ದಾರಿಯಲ್ಲಿ ಶಾಮೀಯಾನ ಹಾಕಿ ಅಡುಗೆ ಸಿದ್ಧಪಡಿಸಿ ಪ್ರತಿಭಟನಾಕಾರರಿಗೆ ಉಣ ಬಡಿಸಲಾಯಿತು. ರೈತನಾಯಕಿ ಸುನಂದ ಜಯರಾಂ, ನಾಗರಾಜು, ಜಯರಾಂ, ನಾಗೇಶ್, ರಾಜಶೇಖರ್, ಚಾಮೇಗೌಡ, ಚಂದ್ರು, ಶಂಕರ್, ರಾಜೇಶ್, ನಿಂಗಪ್ಪ, ಸುನೀಲ್, ಮೋಹನ್‌ಇದ್ದರು.ಪುರಸಭೆ: ಪಟ್ಟಣ ಪುರಸಭೆ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಎದುರು ಹೆದ್ದಾರಿ ತಡೆ ನಡೆಸ ಲಾಯಿತು. ಮಾಜಿ ಪುರಸಭಾಧ್ಯಕ್ಷ ಎಂ.ಐ.ಪ್ರವೀಣ್ ಮಾತನಾಡಿದರು.ಪುರಸಭಾಧ್ಯಕ್ಷ ಅಂಕಪ್ಪ ಎ. ಚಂದು, ಉಪಾಧ್ಯಕ್ಷೆ ಲಲಿತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫರ್ವೆಜ್, ಮಾಜಿ ಅಧ್ಯಕ್ಷರಾದ ಶಿವಾನಂದ, ಪ್ರವೀಣ್, ರಮೇಶ್, ಅಮರ್‌ಬಾಬು, ಚಂದ್ರು, ಶಂಕರೇಗೌಡ, ಸದಸ್ಯರಾದ ರವಿ, ಸಂಪಂಗಿ ರಾಮಯ್ಯ, ನಾಗಮಣಿ, ನಿಂಗಯ್ಯ, ತನುಜ, ರಾಮಣ್ಣ, ಅನಸೂಯ ಶಿವಪ್ಪ, ಭರತ್‌ಕುಮಾರ್, ಮಂಜುಳಾ, ಲಕ್ಷ್ಮಿ, ಎಚ್.ಎಸ್.ನಾಗಮಣಿ, ವಿಜಯಮ್ಮ, ಮನ್ಸೂರ್‌ಖಾನ್, ರಫೀಕ್, ಕಮರುನ್ನಿಸಾ, ಮಹದೇವಮ್ಮ, ರಾಜು ಪ್ರತಿಭಟನೆಯಲ್ಲಿದ್ದರು.ಒಕ್ಕಲಿಗರ ಜನಜಾಗೃತಿ ಸಂಘ: ಪಟ್ಟಣ ಟಿ.ಬಿ ವೃತ್ತದಲ್ಲಿ ವಿಶ್ವ ಒಕ್ಕಲಿಗರ ಜನಜಾಗೃತಿ ಸಂಘದ ಸದಸ್ಯರು ಹೆದ್ದಾರಿ ತಡೆ ನಡೆಸಿದರು. ಸಂಘದ ರಾಜ್ಯಾಧ್ಯಕ್ಷ ಎಂ.ಸಿ.ಲಿಂಗರಾಜು, ಕಾರ್ಯದರ್ಶಿ ಸೋಮಶೇಖರ್, ನಟರಾದ ಸತೀಶ್, ಸುಮಂತ್, ಮೋಹನ್, ರವಿ, ಸದಾನಂದ, ಕಾಳೀರಯ್ಯ, ನಿಂಗಪ್ಪ ಇದ್ದರು.ಯರಗನಹಳ್ಳಿ: ಬಸ್‌ನಿಲ್ದಾಣದಲ್ಲಿ ಗ್ರಾಮಸ್ಥರು ಬೆಳಿಗ್ಗೆಯಿಂದ ಸಂಜೆಯವರೆಗೆ ತುಮಕೂರು ಹೆದ್ದಾರಿ ತಡೆ ನಡೆಸಿದರು. ಕಾಂಗ್ರೆಸ್ ಕಾರ್ಮಿಕ ಸಮಿತಿ ಅಧ್ಯಕ್ಷ ಮಹಾಲಿಂಗು, ಗ್ರಾಮ ಪಂಚಾಯಿತಿ ಸದಸ್ಯ ನವೀನ್, ಶ್ರೀನಿವಾಸ್, ದ್ಯಾವಯ್ಯ, ಗೋಪಾಲ್, ಗುರುಪ್ರಸಾದ್, ಜಯರಾಂ, ನರೇಂದ್ರ, ಗೋಪಾಲಶೆಟ್ಟಿ ಪಾಲ್ಗೊಂಡಿದ್ದರು.

ಬಸ್‌ಗಳಿಗೆ ಆಗ್ರಹ: ಪಟ್ಟಣದ ಸಾರಿಗೆ ಬಸ್‌ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರಿಗೆ ಬಸ್ ಒದಗಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕಾವೇರಿ ಚಳವಳಿ ಹಿನ್ನೆಲೆಯಲ್ಲಿ ಪಟ್ಟಣ ಘಟಕದಿಂದ ಒಂದು ಬಸ್‌ಗಳನ್ನು ಬಿಡದೇ ಗ್ರಾಮಾಂತರ ಪ್ರದೇಶಗಳಿಂದ ವಿದ್ಯಾರ್ಥಿಗಳು ಶಾಲಾಕಾಲೇಜುಗಳಿಗೆ ತೆರಳಲು ತೊಂದರೆಯಾಗಿದೆ. ಪರೀಕ್ಷೆಗಳು ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಡಿಪೋ ವ್ಯವಸ್ಥಾಪಕರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಬಸ್‌ಗಳನ್ನು ಪೂರೈಸಬೇಕೆಂದು ಆಗ್ರಹಿಸಿದರು.ನಾಗಮಂಗಲ ಬಂದ್

ನಾಗಮಂಗಲ:
ನಮ್ಮ ರಾಜ್ಯದಲ್ಲಿ ಹುಟ್ಟುವ ಕಾವೇರಿ ನದಿಯ ನೀರನ್ನು ನಮ್ಮ ರಾಜ್ಯದ ಜನತೆ ಬಳಸಿಕೊಳ್ಳಲಾಗುತ್ತಿಲ್ಲ. ನಮ್ಮ ಮನೆಯ ನೀರು ನಮಗೆ ದಕ್ಕದಂತಾಗಿರುವುದು ವಿಷಾದದ ಸಂಗತಿ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುರುವಾರ ಪಟ್ಟಣದಲ್ಲಿ ತಾಲ್ಲೂಕು ಹಿತರಕ್ಷಣಾ ಸಮಿತಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಸೇರಿ ಕಾವೇರಿ ನದಿ ನೀರು ಹಂಚಿಕೆಯನ್ನು ಖಂಡಿಸಿ ಆಯೋಜಿಸಿದ್ದ ನಾಗಮಂಗಲ ಬಂದ್‌ನಲ್ಲಿ ಪಾಲ್ಗೊಂಡು ಮಾತನಾಡಿದರು. ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾಯಕರು ಮುಂದಾಗಬೇಕು  ಎಂದರು.ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ ಮಾತನಾಡಿದರು. ಆಟೊ ಚಾಲಕರು ಮತ್ತು ಮಾಲೀಕರು, ಬಡಗೂಡಮ್ಮ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು, ಕನ್ನಡ ಸಂಘ ಸಂಸ್ಥೆಯ ಅಧ್ಯಕ್ಷ ನಾ.ನಾಗೇಶ್ ಮತ್ತು ಪದಾಧಿಕಾರಿಗಳು, ವಕೀಲರ ಸಂಘ, ಮುಸ್ಲಿಂ ಸಮುದಾಯದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಸ್ವ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಬಟ್ಟೆ ಅಂಗಡಿಗಳನ್ನು ಮುಚ್ಚಿ ಮಾಲೀಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಬಿಜಿಎಸ್ ವೃತ್ತದಿಂದ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಭಟನೆಗೆ ಚಾಲನೆ ನೀಡಿ, ಮಿನಿವಿಧಾನಸೌಧದವರೆಗು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು. ತಾಲ್ಲೂಕು ದಂಡಾಧಿಕಾರಿ ಶಿವಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು.ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂಜೆವರೆಗೆ ಬಂದ್ ಜಾರಿಯಲ್ಲಿತ್ತು. ವಾಹನಗಳ ಸಂಚಾರ ಕೂಡ ಸ್ಥಗಿತಗೊಂಡಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರೇಗೌಡ, ಎಂ.ಹುಚ್ಚೇಗೌಡ, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕೆ.ಪಿ.ಶಿವನಂಜೇಗೌಡ, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತು, ಪಾನಿರವಿ ಇದ್ದರು.ಜಯಲಲಿತಾ ಅಣಕು ಶವ ಯಾತ್ರೆ

ಮಳವಳ್ಳಿ:
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಬಸವೇಶ್ವರ ಯುವಕರ ಸಂಘದ ನೇತೃತ್ವದಲ್ಲಿ ಗುರುವಾರ ತಾಲ್ಲೂಕಿನ ಕನ್ನಹಳ್ಳಿಯಲ್ಲಿ ರಸ್ತೆ ತಡೆ ನೆಡೆಸಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿಯ ಅಣಕು ಶವ ಯಾತ್ರೆ ನಡೆಸಿದರು.ಪ್ರತಿಭಟನಾಕಾರರು ಮೈಸೂರು-ಮಳವಳ್ಳಿ ರಸ್ತೆಯಲ್ಲಿ ವಾಹನಗಳನ್ನು ತಡೆದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಪಿ.ಮಧು, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಎಂ.ಪಿ.ನಾಗೇಶ್, ಪಟ್ಟಣದ ಘಟಕದ ಅಧ್ಯಕ್ಷ ಗುರು, ರಾಜ್‌ಕುಮಾರ್, ಬಸವೇಶ್ವರ ಯುವಕ ಸಂಘದ ವೀರಭದ್ರಸ್ವಾಮಿ, ಪ್ರದೀಪ್‌ಕುಮಾರ್, ಶಂಕರ, ಪಿ.ಎಂ.ನಂಜುಂಡಸ್ವಾಮಿ, ಮಹೇಶ್, ನವೀನ್, ಶಿವಮೂರ್ತಿ, ರಮೇಶ್, ಹೋಬಳಿ ಘಟಕದ ಅಧ್ಯಕ್ಷ ಅಪ್ಪೇಗೌಡ, ಶಿವಣ್ಣ, ಅಶೋಕ್‌ಕುಮಾರ್, ಶಿವರಾಜು,ರಮೇಶ್, ಅನಂತು ಇದ್ದರು.ಆಟೊ ಚಾಲಕರ ಸಂಘದಿಂದ ಧರಣಿ

ಹಲಗೂರು
: ಸಮೀಪದ ಹಾಡ್ಲಿ-ಮೇಗಳಪುರ ಸರ್ಕಲ್‌ನಲ್ಲಿ ಆಟೊ ಚಾಲಕರ ಸಂಘದವರು ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಸಿದರು.ಹಾಡ್ಲಿ, ಮೇಗಳಪುರ, ಕೋಡಿಪುರ, ನಡಕಲಪುರ, ಆಲದಹಳ್ಳಿ, ಅಟುವನಹಳ್ಳಿ, ಹುಲ್ಲಹಳ್ಳಿ, ದೊಡ್ಡಚನ್ನೀಪುರ ಗ್ರಾಮಸ್ಥರು ಸೇರಿ ಆಟೊ ಚಾಲಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಹಾಡ್ಲಿ ಸರ್ಕಲ್‌ನಲ್ಲಿ ಜಮಾವಣೆಗೊಂಡ ರೈತರು ಕೇಂದ್ರ, ರಾಜ್ಯ ಹಾಗು ತಮಿಳುನಾಡು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.ರಾಜೇಶ್, ಆನಂದ, ಮಂಜು, ಗುಂಡಾ, ರಾಮ, ಸೀನ, ಮಹದೇವ, ಬೈರ, ನಾಗಣ್ಣ, ನಂಜುಮಡ, ರಾಮಚಂದ್ರು, ಹನುಮಂತ, ನಾಗರಾಜು, ಗುಬ್ಬಿ ಶಿವಲಿಂಗಣ್ಣ, ಶಿವಣ್ಣ ಇದ್ದರು.ಅಣಕು ಶವಯಾತ್ರೆ, ಪ್ರತಿಕೃತಿ ದಹನ

ಭಾರತೀನಗರ
: ಕೆಆರ್‌ಎಸ್ ಮತ್ತು ಕಬನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡಲು ಸೂಚಿಸಿರುವ ಕಾವೇರಿ ಪ್ರಾಧಿಕಾರ ಸಭೆ ಮತ್ತು ಸುಪ್ರೀಂಕೋರ್ಟ್‌ನ ತೀರ್ಪನ್ನು ವಿರೋಧಿಸಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆ ಸದಸ್ಯರು ನಗರದಲ್ಲಿ ಬುಧವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ  ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿದರು.ನಗರದ ಮಂಡ್ಯ ವೃತ್ತದಲ್ಲಿ ಜಮಾಯಿಸಿದ ನೂರಾರು ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ತಮಿಳು ನಾಡು  ಜಯಲಲಿತಾ ಅವರ  ವಿರುದ್ಧ ದಿಕ್ಕಾರ ಕೂಗಿದರು. ಪ್ರತಿಕೃತಿಯನ್ನು ತಮಟೆ ನಗಾರಿಯೊಂದಿಗೆ ಹೊತ್ತು ಮದ್ದೂರು ಮಳವಳ್ಳಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ, ಹಲಗೂರು ವೃತ್ತದಲ್ಲಿ ಪ್ರತಿಕೃತಿಗೆ ಬೆಂಕಿ ಹಂಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ವೇದಿಕೆಯ ಮುಖಂಡರಾದ ಅಂಬರಹಳ್ಳಿಸ್ವಾಮಿ, ಕರಡಕೆರೆ ಯೋಗೇಶ್, ಬಸವರಾಜು, ರಾಘವೇಂದ್ರ ಪ್ರತಿಭಟನೆಯಲ್ಲಿದ್ದರು.ಮಣಿಗೆರೆ: ಸಮೀಪದ ಮಣಿಗೆರೆ ಗ್ರಾಮದ ರೈತರು ಮದ್ದೂರು ಮಳವಳ್ಳಿ ರಸ್ತೆಯಲ್ಲಿ ಧರಣಿ ನಡೆಸಿದರು. ರಸ್ತೆ ಮಧ್ಯೆ ಬೆಂಕಿ ಹಂಚಿ ಯಾವುದೇ ವಾಹನಗಳು ಚಲಿಸದಂತೆ ತಡೆದರು.ಛತ್ರದಹೊಸಹಳ್ಳಿ: ಛತ್ರದಹೊಸಹಳ್ಳಿ ಗೇಟ್‌ನಲ್ಲಿ ಬುಧವಾರ ನೂರಾರು ರೈತರು ರಸ್ತೆ ತಡೆ ನಡೆಸಿದರು. ರಸ್ತೆ ಪಕ್ಕದಲ್ಲೇ ಪೆಂಡಾಲ್ ಹಾಕಿ ಅಲ್ಲೇ ಅಡುಗೆ ತಯಾರಿಸಿ ರಸ್ತೆ ಮಧ್ಯೆ ಕುಳಿತು ಊಟ ಮಾಡಿದರು.

ಕಾವೇರಿ ನದಿ ಪ್ರಾಧಿಕಾರದ ವಿರುದ್ಧ ತಾಲ್ಲೂಕು ಪಂಚಾಯಿತಿ ಖಂಡನಾ ನಿರ್ಣಯ

ಶ್ರೀರಂಗಪಟ್ಟಣ:
ತಮಿಳುನಾಡಿಗೆ ಪ್ರತಿನಿತ್ಯ 9 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕು ಎಂಬ ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ವಿರೋಧಿಸಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಖಂಡನಾ ನಿರ್ಣಯ ಅಂಗೀಕರಿಸಿತು.ಸಭೆಯ ಆರಂಭದಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ನಂತರ ಸದಸ್ಯ ಟಿ.ಶ್ರೀಧರ್ ಖಂಡನಾ ನಿರ್ಣಯ ಮಂಡಿಸಿದರು. ಇದಕ್ಕೆ ಆಡಳಿತ ಹಾಗೂ ವಿರೋಧ ಪಕ್ಷ ಎಲ್ಲ ಸದಸ್ಯರು ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದರು. ಖಂಡನಾ ನಿರ್ಣಯ ಅಂಗೀಕಾರವಾದ ನಂತರ ಸಾಮಾನ್ಯ ಸಭೆಯನ್ನು ಬರಖಾಸ್ತುಗೊಳಿಸುವಂತೆ ಅಧ್ಯಕ್ಷೆ ನಿರ್ಮಿತಾ ಲೋಕೇಶ್ ತಾ.ಪಂ. ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.ಅಧ್ಯಕ್ಷರ ಸೂಚನೆಯಂತೆ ಸಹಾಯಕ ನಿರ್ದೇಶಕ ಬಿ.ಡಿ.ರಾಜೇಂದ್ರ ಸಭೆಯನ್ನು ಮುಕ್ತಾಯಗೊಳಿಸಿದರು. ಇದಕ್ಕೂ ಮುನ್ನ 13ನೇ ಹಣಕಾಸು ಯೋಜನೆಯ ರೂ.30 ಲಕ್ಷ, ಎಸ್‌ಟಿಪಿ ಯೋಜನೆಯ ರೂ.4 ಲಕ್ಷ ವೆಚ್ಚದ ಕ್ರಿಯಾ ಯೋಜನೆಗೆ ಸಾಮಾನ್ಯ ಸಭೆ ಒಪ್ಪಿಗೆ ನೀಡಿತು.ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅರ್ಧಕ್ಕೆ ನಿಲ್ಲಿಸಿ ಹೊರ ಬಂದ ಅಧ್ಯಕ್ಷ, ಸದಸ್ಯರು ಕುವೆಂಪು ವೃತ್ತದಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಘೋಷಣೆ ಕೂಗುತ್ತಾ ಆಗಮಿಸಿದರು. ಅಧ್ಯಕ್ಷೆ ನಿರ್ಮಿತಾ ಲೋಕೇಶ್, ಉಪಾಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ಸುಮಲತಾ ಸಿದ್ದೇಗೌಡ, ಸುನಿತಾ ಶ್ರೀಧರ್, ಟಿ.ಶ್ರೀಧರ್, ಟಿ.ಬಿ.ಕೆಂಪೇಗೌಡ, ಪುಟ್ಟಸ್ವಾಮಿ, ರಾಜೇಶ್ವರಿ, ಮಂಜುಳಾ, ಗೀತಾ ಮಹೇಶ್ ಎರಡು ತಾಸು ಧರಣಿಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry