ಗುರುವಾರ , ಏಪ್ರಿಲ್ 22, 2021
27 °C

ತಮಿಳುನಾಡಿಗೆ ನೀರು ಹರಿಸಲು ಸೂಚನೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಮಿಳುನಾಡಿಗೆ ನ.15 ವರೆಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸಬೇಕು ಎಂಬ ಕಾವೇರಿ ಮೇಲುಸ್ತುವಾರಿ ಸಮಿತಿಯ ಸೂಚನೆಯನ್ನು ವಿರೋಧಿಸಿ ಕಾವೇರಿ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಘಂಟೆಗಳನ್ನು ಬಾರಿಸಿದರು. ಕಾವೇರಿ ಮೇಲುಸ್ತವಾರಿ ಸಮಿತಿ, ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡಿಗೆ ನೀರು ಹರಿಸಿದರೆ ಬೆಳೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗಲಿದೆ. ರಾಜಕೀಯ ಕಾರಣಕ್ಕಾಗಿ ಮೇಲುಸ್ತುವಾರಿ ಸಮಿತಿ ಇಂತಹ ಅನ್ಯಾಯದ ಘಂಟೆ ಬಾರಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕೆಆರ್‌ಎಸ್ ಇತರ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಬೆಂಗಳೂರು ನಗರ ಸೇರಿದಂತೆ ಇತರ ಪಟ್ಟಣ, ಹಳ್ಳಿಗಳಿಗೆ ಕುಡಿಯುವ ಉದ್ದೇಶಕ್ಕೆ 30 ಟಿಎಂಸಿಗೂ ಹೆಚ್ಚು ನೀರು ಬೇಕು. ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಇನ್ನೂ 40 ಟಿಎಂಸಿ ನೀರಿನ ಅಗತ್ಯವೆ. ತಮಿಳುನಾಡಿನಲ್ಲಿ ಈಗ ಸಾಕಷ್ಟು ಮಳೆ ಸುರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಮೇಲುಸ್ತುವಾರಿ ಸಮಿತಿ ನೀಡಿರುವ ಸೂಚನೆ ಪೂರ್ವಾಗ್ರಹದಿಂದ ಕೂಡಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಟೀಕಿಸಿದರು.ಸಮಿತಿಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ಯುವ ಘಟಕದ ಅಧ್ಯಕ್ಷ ಕಡತನಾಳು ಬಾಬು, ಉಪಾಧ್ಯಕ್ಷ ಬಿ.ಎಸ್.ರಮೇಶ್, ಪಾಂಡು, ದಿನೇಶ್, ಕೃಷ್ಣೇಗೌಡ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಂ.ರವಿ. ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ತಾಲ್ಲೂಕು ಅಧ್ಯಕ್ಷ ಕೆ.ಬಿ.ಬಸವರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಗೆಜ್ಜಲಗೆರೆಯಲ್ಲಿ ರಸ್ತೆ ತಡೆ

ಮದ್ದೂರು: ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ 5.5 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಿರುವ ಕಾವೇರಿ ನದಿ ಉಸ್ತುವಾರಿ ಸಮಿತಿಯ ಕ್ರಮ ಖಂಡಿಸಿ ಸಮೀಪದ ಗೆಜ್ಜಲಗೆರೆ ಬಳಿ ಬುಧವಾರ ಸಂಜೆ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು.ಸಮಿತಿಯ ಅವೈಜ್ಞಾನಿಕ ನಿರ್ಣಯದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಕಾರ್ಯಕರ್ತರು 15 ನಿಮಿಷಗಳ ಕಾಲ ಮಳೆಯ ನಡುವೆಯೇ ಹೆದ್ದಾರಿಯಲ್ಲಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ತಡೆಯಿಂದಾಗಿ ಬೆಂಗಳೂರು-ಮೈಸೂರು ಸಂಚಾರ ಅಸ್ತವ್ಯಸ್ತಗೊಂಡಿತು.ರೈತಸಂಘದ ತಾಲ್ಲೂಕು ಕಾರ್ಯದರ್ಶಿ ಜಿ.ಎ.ಶಂಕರ್ ಮಾತನಾಡಿ, ತಮಿಳುನಾಡಿನಲ್ಲಿ ಭೀಕರ ಚಂಡಮಾರುತ ಬೀಸಿ ಸಾಕಷ್ಟು ಮಳೆಯಾಗಿದೆ. ಹೀಗಿದ್ದರೂ ತಮಿಳುನಾಡಿನ ದುರಾಸೆ ಇಂದಿಗೂ ಮುಗಿದಿಲ್ಲ. ಈ ನಡುವೆ ಪ್ರಾಧಿಕಾರವು ತಮಿಳುನಾಡಿನ ಪರವಾಗಿ ಆದೇಶ ನೀಡುವ ಮೂಲಕ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ಪ್ರಾಧಿಕಾರವು ಅವೈಜ್ಞಾನಿಕ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.ರೈತ ಮುಖಂಡರಾದ ಚಂದ್ರು, ರಾಕೇಶ್, ಸಿದ್ದೇಗೌಡ, ಬೋರೇಗೌಡ, ಕೆ.ಪಿ.ಶೇಖರ್, ನಟರಾಜು, ಸೋಮಶೇಖರ್, ಹೊನ್ನಹಲಗಯ್ಯ, ತ್ಯಾಗರಾಜು, ಈರಪ್ಪ, ಲಿಂಗಪ್ಪ ಇತರರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.