ತಮಿಳುನಾಡಿಗೆ ಹರಿದದ್ದು 19.5 ಟಿಎಂಸಿ

7

ತಮಿಳುನಾಡಿಗೆ ಹರಿದದ್ದು 19.5 ಟಿಎಂಸಿ

Published:
Updated:

ಬೆಂಗಳೂರು: ಸೆ.12ರಿಂದ ಅ.7ರ ವರೆಗೆ 19.5 ಟಿಎಂಸಿ ಅಡಿ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ..!

ಇದು, ನಿತ್ಯ ಎರಡು ಟಿಎಂಸಿ ನೀರು ಬಿಡಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ನಂತರ ಹರಿದ ನೀರಿನ ಪ್ರಮಾಣ.ಸೆ.12ರಂದು ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟ್ ಮುಂದೆ ಸ್ವಯಂ ಪ್ರೇರಣೆಯ ಹೇಳಿಕೆ ನೀಡಿ, ಸೆ.19ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ಹೇಳಿತ್ತು. ಅದರ ಬಳಿಕ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಯಿತು. ಅದರಲ್ಲಿ ಅ.15ರವರೆಗೆ ನಿತ್ಯ 9000 ಕ್ಯೂಸೆಕ್ ನೀರು ಬಿಡುವಂತೆ ಪ್ರಧಾನಿ ಆದೇಶ ನೀಡಿದರು.ಸುಪ್ರೀಂಕೋರ್ಟ್ ಈ ಆದೇಶ ಪಾಲಿಸುವಂತೆ ಸೂಚಿಸಿದ ನಂತರ ಆ ಪ್ರಕಾರವೇ ನೀರು ಬಿಡಲಾಗುತ್ತಿದೆ. ಒಟ್ಟಾರೆ ಸೆ.12ರಿಂದ ಅ.7ರ ವರೆಗೂ 19.5 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹೋಗಿದೆ. ಪ್ರಾಧಿಕಾರದ ಆದೇಶದಂತೆ ಇದೇ 15ರವರೆಗೆ ನೀರು ಬಿಡಬೇಕಾಗಿದೆ. ಅಂದರೆ, ಇನ್ನೂ ಸುಮಾರು 5ರಿಂದ 6 ಟಿಎಂಸಿ ಅಡಿ ನೀರು ತಮಿಳುನಾಡು ಸೇರುವುದು ಖಚಿತ ಎನ್ನುವುದು ಸರ್ಕಾರದ ಲೆಕ್ಕಾಚಾರ.ಇಷ್ಟು ನೀರು ಬಿಟ್ಟ ನಂತರ ಕೃಷಿಗೆ ಇರಲಿ, ಕುಡಿಯುವುದಕ್ಕೂ ಕಡಿಮೆ ಬೀಳಲಿದೆ ಎನ್ನುತ್ತವೆ ಸರ್ಕಾರದ ಮೂಲಗಳು. ಈ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡೇ ಇನ್ನು ಮುಂದೆ ನೀರು ಬಿಡುವುದು ಕಷ್ಟ ಎನ್ನುವ ಅಭಿಪ್ರಾಯವನ್ನು ಸರ್ಕಾರ ವ್ಯಕ್ತಪಡಿಸಿದೆ.ಪ್ರಧಾನಿಗೆ ಮನವಿ: ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯದ ಬಿಜೆಪಿ ಸಂಸದರು ಅನಂತಕುಮಾರ್ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ 12.15ಕ್ಕೆ ಪ್ರಧಾನಿಯವರನ್ನು ಭೇಟಿ ಮಾಡಲಿದ್ದಾರೆ. ಕಾವೇರಿ ವಿಷಯದಲ್ಲಿ ನ್ಯಾಯ ಒದಗಿಸುವಂತೆ ಮನವಿ ಮಾಡಲಿದ್ದಾರೆ.ವಿಹಾರಕ್ಕೆ ತಂಡದ ಸದಸ್ಯರು: ಕಾವೇರಿ ಜಲಾನಯನ ಪ್ರದೇಶದಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕೆ ಬಂದಿರುವ ಕೇಂದ್ರ ತಂಡದ ಸದಸ್ಯರು ಭಾನುವಾರ ನಗರದ ಲಾಲ್‌ಬಾಗ್ ಉದ್ಯಾನವನ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಕೆಲಹೊತ್ತು ವಿಶ್ರಾಂತಿ ಪಡೆದರು.ಮಧ್ಯಾಹ್ನ ನಂತರ ಕುಮಾರ ಕೃಪಾ ಅತಿಥಿ ಗೃಹಕ್ಕೆ ತೆರಳಿದ ತಂಡದ ಸದಸ್ಯರು ವರದಿ ಸಿದ್ಧಪಡಿಸುವಲ್ಲಿ ನಿರತರಾಗಿದ್ದರು. ನೀರಾವರಿ ನಿಗಮದ ಅಧಿಕಾರಿಗಳು ಕೇಂದ್ರ ತಂಡ ಕೇಳಿದ ಮಾಹಿತಿ ಒದಗಿಸಿದರು. ಸೋಮವಾರ ಕೂಡ ಈ ತಂಡ ಕೆಲ ಮಾಹಿತಿ ಸಂಗ್ರಹಿಸಿ, ಸಂಜೆ ನಂತರ ದೆಹಲಿಗೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry