ಶುಕ್ರವಾರ, ಜುಲೈ 30, 2021
28 °C

ತಮಿಳುನಾಡಿಗೆ ಹರಿದ ನೀರು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ತಮಿಳುನಾಡಿಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸಮೀಪದ ಗೆಜ್ಜಲಗೆರೆ ರೈತರು ಮಂಗಳವಾರ ಹೆದ್ದಾರಿ ತಡೆ, ಪ್ರತಿಭಟನೆ ಮಾಡಿದರು.ಅರ್ಧಗಂಟೆಗೂ ಹೆಚ್ಚು ಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತ ರೈತ ಕಾರ್ಯಕರ್ತರು ತಮಿಳುನಾಡು ಸರ್ಕಾರದ ದುರಾಸೆ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಮೊಳಗಿಸಿದರು. ಹೆದ್ದಾರಿ ತಡೆಯಿಂದಾಗಿ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತು.ರೈತಸಂಘದ ಉಪಾಧ್ಯಕ್ಷ ಜಿ.ಎ. ಶಂಕರ್ ಮಾತನಾಡಿ, ಬರಿದಾಗಿದ್ದ ಕೆಆರ್‌ಎಸ್ ಅಣೆಕಟ್ಟೆ ವರುಣನ ಕೃಪೆಯಿಂದಾಗಿ ತುಂಬುತ್ತಿದ್ದಂತೆ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದೆ. ಈ ಕೂಡಲೇ ಸರ್ಕಾರ ನೀರು ಹರಿಸುವುದನ್ನು ನಿಲ್ಲಿಸಿ, ವಿ.ಸಿ. ನಾಲೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಬೇಕು. ಅಲ್ಲದೇ ಕೆರೆ ಕಟ್ಟೆಗಳನ್ನು ತುಂಬಿಸಲು ಮೊದಲ ಆದ್ಯತೆ ನೀಡಬೇಕೆಂದು ಅವರು ಆಗ್ರಹಿಸಿದರು.ಮುಖಂಡ ಗೆಜ್ಜಲಗೆರೆ ಚಂದ್ರು, ಮುಖಂಡರಾದ ಮರಿಸ್ವಾಮಿ, ಲಿಂಗಪ್ಪಾಜಿ, ರಾಮಣ್ಣ, ಶಿವನಂಜಯ್ಯ, ರಾಜೇಶ್, ಸದಾನಂದಗೌಡ, ಸ್ವಾಮಿ, ಬೋರೇಗೌಡ, ರಾಮಲಿಂಗಯ್ಯ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. ನಾಲೆಗೆ ನೀರು ಹರಿಸಲು ಒತ್ತಾಯ 

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಸಿದರು. ಕಾವೇರಿ ನೀರಾವರಿ ನಿಗಮ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ. ರಾತ್ರಿ ವೇಳೆ ಹೆಚ್ಚು ನೀರು ಹರಿಸಿ ಬೆಳಿಗ್ಗೆ ಕಡಿಮೆ ಮಾಡಲಾಗುತ್ತಿದೆ. ಜಲಾಶಯಕ್ಕೆ ನೀರು ಬರಲು ಶುರುವಾದ ದಿನದಿಂದಲೂ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಇಷ್ಟಾದರೂ ಕುಡಿಯುವ ಉದ್ದೇಶಕ್ಕೆ ನೀರು ಹರಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ ಎಂದು ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದರು.ಅಚ್ಚುಕಟ್ಟು ಪ್ರದೇಶದ ನಾಲೆಗಳಲ್ಲಿ ನೀರು ನಿಲ್ಲಿಸಿ 4 ತಿಂಗಳು ಕಳೆದಿದೆ. ಹಸಿರಿನಿಂದ ಕಂಗೊಳಿಸಬೇಕಾದ ನಾಲಾ ಬಯಲು ಅಕ್ಷರಶಃ ಬೆಂಗಾಡಾಗಿದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಬಂದಿದೆ. ಹಾಗಾಗಿ ಎಲ್ಲ ನಾಲೆಗಳಿಗೆ ತಕ್ಷಣದಿಂದಲೇ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರ ಗೊಳಿಸುತ್ತೇವೆ ಎಂದು ಎಚ್ಚರಿಸಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ. ಕೆಂಪೇಗೌಡ, ಪಾಂಡು, ನಂಜುಂಡಪ್ಪ, ಬಿ.ಸಿ. ಕೃಷ್ಣೇಗೌಡ, ಜುರಾಮು ಇದ್ದರು.ಬೇಡಿಕೆ ಈಡೇರಿಕೆಗೆ ಆಗ್ರಹ: ರಸ್ತೆ ತಡೆ

ಮಂಡ್ಯ: ಕಬ್ಬಿನ ಬಾಕಿ ಹಣ ಪಾವತಿ, ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ತನಿಖೆ ಹಾಗೂ ಕೆಆರ್‌ಎಸ್‌ನಿಂದ ಜನ, ಜಾನುವಾರುಗಳಿಗೆ ಕುಡಿಯುವುದಕ್ಕಾಗಿ ನೀರು ಪೂರೈಸಬೇಕು ಎಂದು ಆಗ್ರಹಿಸಿ ಮಂಗಳವಾರ ನಗರದಲ್ಲಿ ರಾಜ್ಯ ರೈತ ಸಂಘದ ಮುಖಂಡರು ಕೆಲಕಾಲ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಮಾಡಿದರು.ಜಿಲೆಯಲ್ಲಿನ ನಾಲ್ಕು ಕಾರ್ಖಾನೆಗಳು ಪೂರೈಸಿದ ಕಬ್ಬಿನ ಹಣ ಬಾಕಿ ಉಳಿಸಿಕೊಂಡಿವೆ. 14 ದಿನಗಳಲ್ಲಿ ರೈತರಿಗೆ ಪಾವತಿಸಬೇಕು ಎಂದಿದ್ದರೂ ಪಾವತಿಸಿಲ್ಲ. ಬಡ್ಡಿ ಸೇರಿಸಿ ಪಾವತಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಾಲಿಗೆ ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂಪಾಯಿ ನಿಗದಿ ಮಾಡಬೇಕು. ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಕಳಪೆಯಾಗಿದೆ. ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.ಕೆಆರ್‌ಎಸ್‌ಗೆ ಅಲ್ಪ-ಸ್ವಲ್ಪ ನೀರು ಬರುತ್ತಿದ್ದು, ಕದ್ದು ಮುಚ್ಚಿ ತಮಿಳುನಾಡಿಗೆ ಬಿಡಲಾಗುತ್ತಿದೆ. ಇಲ್ಲಿನ ಜನರು ನೀರಿಲ್ಲದೇ ಪರದಾಡುತ್ತಿದ್ದಾರೆ. ತತ್‌ಕ್ಷಣ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು. ಶಂಭೂನಹಳ್ಳಿ ಸುರೇಶ್, ಹನಿಯಂಬಾಡಿ ನಾಗರಾಜು, ಜಿ.ಎ. ಶಂಕರ ಮತ್ತಿತರರು ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು.ರೈತ ಸಂಘ ಪ್ರತಿಭಟನೆ

ಮಳವಳ್ಳಿ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ಮಂಗಳವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಅನಂತರಾಂ ವೃತ್ತದಲ್ಲಿ ಸೇರಿದ ರೈತರು ಪ್ರತಿಭಟನೆ ನಡೆಸಿದರು. ರೈತ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ, ಅಧ್ಯಕ್ಷ ದೇವರಾಜು, ಎಳವೇಗೌಡ, ಮಲ್ಲೇಶ್ ಇದ್ದರು.ಕರವೇ ಆಕ್ರೋಶ

ಶ್ರೀರಂಗಪಟ್ಟಣ: ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ಕೂಡಲೇ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಕುವೆಂಪು ವೃತ್ತದ ಬಳಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಸ್ವಾಮಿಗೌಡ ಮಾತನಾಡಿದರು. ಕರವೇ ತಾಲ್ಲೂಕು ಅಧ್ಯಕ್ಷ ಕೆ.ಬಿ. ಬಸವರಾಜು, ನಗುವನಹಳ್ಳಿ ಶಿವಸ್ವಾಮಿ, ಗಂಜಾಂ ಪುಟ್ಟರಾಮು, ಪಾನಿಪೂರಿ ರವಿ, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಬಾಲಸುಬ್ರಹ್ಮಣ್ಯ, ಪುರಸಭೆ ಸದಸ್ಯ ಟಿ.ಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.