ತಮಿಳುನಾಡಿನಿಂದ ಕೆಜಿಎಫ್‌ನತ್ತಆನೆಗಳ ಹಿಂಡು

7

ತಮಿಳುನಾಡಿನಿಂದ ಕೆಜಿಎಫ್‌ನತ್ತಆನೆಗಳ ಹಿಂಡು

Published:
Updated:
ತಮಿಳುನಾಡಿನಿಂದ ಕೆಜಿಎಫ್‌ನತ್ತಆನೆಗಳ ಹಿಂಡು

ಕೆಜಿಎಫ್: ತಮಿಳುನಾಡಿನ ಕಾಡಿನಿಂದ ಆನೆಗಳ ಹಿಂಡು ನಾಡಿನತ್ತ ಬರುತ್ತಿದ್ದು, ಬುಧವಾರ ಕಾಮಸಮುದ್ರ ಗ್ರಾಮದ ಹೊರವಲಯದ ವೃಷಭಾವತಿ ಕೆರೆ ಕೋಡಿ ಬಳಿ ಬೀಡು ಬಿಟ್ಟಿವೆ.ಸುಮಾರು 32 ಆನೆಗಳ ಹಿಂಡು ಎರಡು ಗುಂಪುಗಳಾಗಿದ್ದು, ಒಂದು ಗುಂಪು ಯರಗೋಳು ಅಣೆಕಟ್ಟು ನಿರ್ಮಾಣವಾಗುವ ಸ್ಥಳದಲ್ಲಿ ವಿಹರಿಸುತ್ತಿದ್ದು, ಹದಿನಾಲ್ಕು ಆನೆಗಳ ಮತ್ತೊಂದು ಗುಂಪು ಕಾಮಸಮುದ್ರಕ್ಕೆ ಬಂದಿದೆ. ಇವು ಯಾವುದೇ ಕ್ಷಣದಲ್ಲಿ ಕಾಮಸಮುದ್ರ ಗ್ರಾಮಕ್ಕೆ ನುಗ್ಗುವ ಭೀತಿ ಎದುರಾಗಿದ್ದು, ಪೊಲೀಸರು ಅನಿರೀಕ್ಷಿತ ದಾಳಿಯನ್ನು ಎದುರಿಸಲು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.ಆನೆಗಳ ಹಿಂಡು ಈಗಾಗಲೇ ಹಾದು ಬಂದಿರುವ ಹಾದಿಯಲ್ಲಿ ಹುಲ್ಲಿನ ಮೆದೆಗಳನ್ನು ನಾಶ ಪಡಿಸುತ್ತಿವೆ. ರೈತರು ಹುಲ್ಲಿನ ಮೆದೆಗಳನ್ನು ರಸ್ತೆಯಲ್ಲಿ ಸುರಿದು ಬೆಳೆಯನ್ನು ಸಂರಕ್ಷಿಸಿಕೊಳ್ಳುತ್ತಿದ್ದಾರೆ. ಭೀಮಗಾನಹಳ್ಳಿಯಲ್ಲಿ ಕಲ್ಲಂಗಡಿ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ಕೈಗೆ ಬಂದಿದ್ದ ಕಲ್ಲಂಗಡಿ ಹಣ್ಣನ್ನು ತಿಂದು ಹಾಕಿವೆ. ಅದೇ ಗ್ರಾಮದ ಅನ್ಸರ್ ಎಂಬುವವರು ಈಗಾಗಲೇ ಹೆಣ್ಣು ಆನೆ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಉದ್ದೇಶಿತ ಯರಗೋಳು ಅಣೆಕಟ್ಟೆ ನಿರ್ಮಾಣದ ಪ್ರದೇಶದಿಂದ ಶುಕ್ರವಾರ ಕಿರಮಂದೆ ಗ್ರಾಮದ ಮೂಲಕ ಕಾಮಸಮುದ್ರಕ್ಕೆ ಹಾದು ಬಂದ ಆನೆಗಳನ್ನು ಕುರಿ, ದನ ಕಾಯುವವರು ನೋಡಿ ಖುಷಿ ಪಟ್ಟಿದ್ದಾರೆ. ಆನೆಗಳನ್ನು ನೋಡಲು ಯುವಕರ ದಂಡು ಕಾಡಿನತ್ತ ಧಾವಿಸುತ್ತಿದೆ. ಆದರೆ ಆವರನ್ನು ಮುಂದಕ್ಕೆ ಬಿಡದೆ ಕಾಮಸಮುದ್ರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.ತಮಿಳುನಾಡು ಕೃಷ್ಣಗಿರಿಯಿಂದ ಯರಗೋಳು ಮುಖಾಂತರ ಕರ್ನಾಟಕಕ್ಕೆ ಆಗಮಿಸಿರುವ ಆನೆಗಳ ಹಿಂಡು ಸಹಜವಾದ ಆನೆ ಪಥದಲ್ಲಿಯೇ ಸಾಗಿಬರುತ್ತಿದೆ. ಪಥದ ಉದ್ದಕ್ಕೂ ಹಸಿರು ಇದ್ದು ಆನೆಗಳಿಗೆ ಮೇವು ಸಿಗುತ್ತಿದೆ. ವೃಷಭಾವತಿ ಕೆರೆಯ ಕೋಡಿ ನೀರು ಅಲ್ಲಲ್ಲಿ ನಿಂತಿದ್ದು, ನೀರು ಕೂಡ ಲಭ್ಯವಾಗುತ್ತಿದೆ.

ಆನೆಯೊಂದು ಮರಿ ಹಾಕಿದ ಹಿನ್ನೆಲೆಯಲ್ಲಿ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿವೆ.ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮುನೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಣ್ಣಯ್ಯ, ವಲಯ ಸಂರಕ್ಷಣಾಧಿಕಾರಿ ಚಂದ್ರಶೇಖರರೆಡ್ಡಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಯರಗೋಳು, ಕಿರಮಂದೆ ಅರಣ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಆದರೆ ಆನೆಗಳನ್ನು ಓಡಿಸುವ ಕೆಲಸಕ್ಕೆ ಕೈಹಾಕದೆ, ಅವುಗಳ ಚಲನವಲನ ವೀಕ್ಷಿಸುತ್ತಿದ್ದಾರೆ.

ಅನಗತ್ಯವಾಗಿ ಕಾಡಿನೊಳಗೆ ಹೋಗಬಾರದು ಎಂದು ಕಾಮಸಮುದ್ರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ್ ಅವರು ನಾಗರಿಕರಿಗೆ ಈಗಾಗಲೇ  ಎಚ್ಚರಿಕೆ ನೀಡಿದ್ದಾರೆ.ಕಾಮಸಮುದ್ರ ಹೊರವಲಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಅದೇ ಪಥದಲ್ಲಿ ಮುಂದುವರಿದರೆ ಕೆಜಿಎಫ್ ಹೊರವಲಯಕ್ಕೆ ಬರುವ ಸಾಧ್ಯತೆಗಳು ಕೂಡ ಇವೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಬರುವ ಆನೆಗಳು ನಂತರ ಕುಪ್ಪಂ ಮಾರ್ಗವಾಗಿ ವಿ.ಕೋಟೆ ಕಾಡಿಗೆ ಹೋಗುವ ಸಂಭವ ಕೂಡಾ ಇದೆ.

ಕೆಲವು ವರ್ಷಗಳ ಹಿಂದೆ ಕೆಜಿಎಫ್ ನಗರಕ್ಕೆ ಎರಡು ಕಿ.ಮೀ ದೂರದಲ್ಲಿ ಹಾದು ಹೋಗಿದ್ದವು. ಒಂದು ವೇಳೆ ಈಗಿನ ಸ್ಥಳದಿಂದ ಹಿಂತಿರುಗಿದರೆ ಯರಗೋಳು ಮುಖಾಂತರ ಪುನಃ ತಮಿಳುನಾಡಿಗೆ ಹೋಗುವ ಸಂಭವಗಳೂ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry