ತಮಿಳುನಾಡಿನ ಕ್ರಮ ಅಮಾನವೀಯ: ಟೀಕೆ

7

ತಮಿಳುನಾಡಿನ ಕ್ರಮ ಅಮಾನವೀಯ: ಟೀಕೆ

Published:
Updated:

ಮಡಿಕೇರಿ: ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ನೀರಿನ ಕೊರತೆ ಉಂಟಾಗಿದ್ದು, ಇಂತಹ ಸ್ಥಿತಿಯಲ್ಲಿ ಕಾವೇರಿ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ಅಮಾನವೀಯವಾಗಿ ವರ್ತಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯಲ್ಲಿ ಭಾನುವಾರ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ತಮಿಳುನಾಡು ಸರ್ಕಾರ ಕಾನೂನು ಹೋರಾಟ ನಡೆಸುವ ಮೂಲಕ ಹಟಮಾರಿಧೋರಣೆ ಪ್ರದರ್ಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮಲ್ಲಿ ಚೆನ್ನಾಗಿ ಮಳೆ ಬಂದು, ಕಾವೇರಿ ತುಂಬಿ ಹರಿದ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಆದರೆ, ಈಗ ನಾವೇ ನೀರಿನ ಕೊರತೆ ಎದುರಿಸುತ್ತಿದ್ದು, ಅವರಿಗೆ ಎಲ್ಲಿಂದ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.ರಾಜ್ಯದ ಪರಿಸ್ಥಿತಿ ಬಗ್ಗೆ ಅನುಕಂಪ ತೋರಿಸುವ ಬದಲು ಕೇಂದ್ರದ ಕಾವೇರಿ ನದಿ ಪ್ರಾಧಿಕಾರದ ಮೂಲಕ ತಮಿಳುನಾಡು ಸರ್ಕಾರ ನಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದರು.ಕಾವೇರಿ ಮಾತೆ ಕೃಪೆ ತೋರಲಿ:

ನೀರಿನ ಸಮಸ್ಯೆಗೆ ಮಾತೆ ಕಾವೇರಿಯೇ ಕೃಪೆ ತೋರಬೇಕು. ಎರಡೂ ರಾಜ್ಯಗಳಿಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಮಳೆ ಸುರಿಯಲಿ, ಅ.17 ರಂದು ನಡೆಯಲಿರುವ ತೀರ್ಥೋದ್ಭವದೊಂದಿಗೆ ಮೈದುಂಬಿ ಹರಿದು ಅಣೆಕಟ್ಟುಗಳು ತುಂಬಲಿ ಎಂದು ಆಶಿಸಿದರು.ಧಾರಾಕಾರ ಮಳೆ:

ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಗೌಡ ಹಾಗೂ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಕಾವೇರಿಗೆ ಪೂಜೆ ಸಲ್ಲಿಸಿದ ಬಳಿಕ ಧಾರಾಕಾರ ಮಳೆ ಸುರಿಯಿತು. ಇದಕ್ಕೂ ಮುಂಚೆ ಕುಮಾರಸ್ವಾಮಿ ಹಾಗೂ ಕುಟುಂಬದವರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮತ್ತು ಭಗಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ತುಲಾ ಸಂಕ್ರಮಣದ ಸಂದರ್ಭದಲ್ಲಿ ಭಗಂಡೇಶ್ವರ ದೇವಸ್ಥಾನದಲ್ಲಿ ಬೆಳಗುವ ನಂದಾದೀಪಕ್ಕೆ ಕುಮಾರಸ್ವಾಮಿ ದಂಪತಿ ಚಾಲನೆ ನೀಡಿದರು. ಇದರ ಜೊತೆಗೆ ಅಕ್ಷಯಪಾತ್ರೆಗೆ ಅಕ್ಕಿಯನ್ನು ತುಂಬಿಸಿದರು.ಭವ್ಯ ಸ್ವಾಗತ

ನಾಪೋಕ್ಲು: ಕೊಡಗಿನಲ್ಲಿ ಖಾಸಗಿ ಪ್ರವಾಸ ಕೈಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾರ್ಯಕರ್ತರು ಭವ್ಯವಾಗಿ ಸ್ವಾಗತಿಸಿದರು.ಭಾನುವಾರ ಬೆಳಿಗ್ಗೆ ತಲಕಾವೇರಿ, ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಲು ಸಿದ್ದಾಪುರದಿಂದ ಅಮ್ಮತ್ತಿ ಮಾರ್ಗವಾಗಿ ಮೂರ್ನಾಡಿಗೆ ಆಗಮಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಅವರನ್ನು ಕಾರ್ಯಕರ್ತರು ಪಟ್ಟಣದಲ್ಲಿ ಹೂವಿನ ಹಾರ ಹಾಕಿ ಸ್ವಾಗತಿಸಿದರು.ನಂತರ ನಾಪೋಕ್ಲು ಮಾರ್ಗವಾಗಿ ತಲಕಾವೇರಿಗೆ ತೆರಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಜೀವಿಜಯ, ಜೆ.ಡಿ.ಎಸ್. ಜಿಲ್ಲಾ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಕಾರ್ಯದರ್ಶಿ ಪಾರೆಮಜ್ಲು ಕುಸುಮ್ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಬಲ್ಲಚಂಡ ಗೌತಮ್, ಮಡಿಕೇರಿ ಹೋಬಳಿ ಅಧ್ಯಕ್ಷ ಡಾ. ಮನೋಜ್ ಬೋಪಯ್ಯ, ಗಪೂರ್, ಮಜೀದ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry