ಶನಿವಾರ, ಮೇ 21, 2022
27 °C

ತಮಿಳುನಾಡು: ಕುರುವೈ ಬೆಳೆಗೆ ಹೆಚ್ಚುವರಿ ವಿದ್ಯುತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ(ಪಿಟಿಐ):  ಕಾವೇರಿ ನದಿ ಮುಖಜ ಭೂಮಿ ಪ್ರದೇಶದ ರೈತರಿಗೆ `ಕುರುವೈ~ (ಅಲ್ಪಾವಧಿ ಬೆಳೆ) ಬೆಳೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಮಿಳುನಾಡು ಸರ್ಕಾರ ಆ ಪ್ರದೇಶದ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ತ್ರಿಫೇಸ್ ವಿದ್ಯುತ್ ಪೂರೈಕೆಯನ್ನು ಒಂಬತ್ತು ಗಂಟೆಯಿಂದ ಹನ್ನೆರಡು ಗಂಟೆಗೆ ವಿಸ್ತರಿಸಿದೆ.

 

ಮೆಟ್ಟೂರು ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಕರ್ನಾಟಕ ತಮಿಳುನಾಡಿಗೆ ನೀರು ಬಿಡದಿರುವ ಕಾರಣ ಉಂಟಾಗಿರುವ ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ತಿಳಿಸಿದ್ದಾರೆ.ಶನಿವಾರ ಮುಖ್ಯ ಕಾರ್ಯದರ್ಶಿ ದೇವೇಂದ್ರನಾಥ್ ಸಾರಂಗಿ ಹಾಗೂ ತಮಿಳುನಾಡು ವಿದ್ಯುತ್‌ಚ್ಛಕ್ತಿ ಮಂಡಳಿಯ(ಟಿಎನ್‌ಇಬಿ) ಅಧ್ಯಕ್ಷರ ಜತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವುದಕ್ಕಾಗಿ  ರೂ 125 ಕೋಟಿ ರೂಪಾಯಿಯನ್ನು ಸರ್ಕಾರ ಟಿಎನ್‌ಇಬಿಗೆ ನೀಡಿದೆ.`ನದಿಮುಖಜ ಭೂಮಿ ಪ್ರದೇಶಗಳಾದ ತಂಜಾವೂರು, ತಿರುವರೂರ್, ನಾಗಪಟ್ಟಣಂ ಜಿಲ್ಲೆಗಳಲ್ಲಿರುವ ಪ್ರದೇಶದ ಕೃಷಿ ಪಂಪ್‌ಸೆಟ್‌ಗಳಿಗೆ ಭಾನುವಾರದಿಂದಲೇ 12 ತಾಸು ತ್ರಿಫೇಸ್ ವಿದ್ಯುತ್ ಪೂರೈಕೆಯಾಗಲಿದೆ~ ಎಂದು ಸಭೆಯ ನಂತರ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.`ಪ್ರಸ್ತುತ ಮೆಟ್ಟೂರು ಜಲಾಶಯದಲ್ಲಿ 41.11 ಟಿಎಂಸಿ (ಜಲಾಶಯದ ಒಟ್ಟು ಸಾಮರ್ಥ್ಯ 120 ಸಿಎಂಟಿ)ಯಷ್ಟು ನೀರಿದೆ. ಹೀಗಾಗಿ ಜಲಾಶಯದಿಂದ ನೀರು ಹರಿಸಲು ಸಾಧ್ಯವಿಲ್ಲ~ ಎಂದು  ಜಯಲಲಿತಾ ಹೇಳಿದ್ದಾರೆ.

ಈ ಭಾಗದ ರೈತರು `ಅಲ್ಪಾವಧಿ ಬೆಳೆ~ಯಾದ ಬತ್ತ ಬೆಳೆದುಕೊಳ್ಳಲು ಅನುಕೂಲವಾಗುವಂತೆ ವಿದ್ಯುತ್ ಪೂರೈಕೆಯ ಸಮಯವನ್ನು ವಿಸ್ತರಿಸಿರುವುದಾಗಿ ಅವರು ತಿಳಿಸಿದ್ದಾರೆ.ಜಯಲಲಿತಾ ಆರೋಪ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜೂನ್ ತಿಂಗಳಲ್ಲಿ ಕರ್ನಾಟಕ ತಮಿಳುನಾಡಿಗೆ 10.16 ಟಿಎಂಸಿಯಷ್ಟು ನೀರು ಬಿಡಬೇಕಾಗಿತ್ತು. ಆದರೆ ಇಲ್ಲಿಯವರೆವಿಗೂ ಒಂದು ಹನಿ ನೀರು ಪೂರೈಸಿಲ್ಲ~ ಎಂದು ಜಯಲಲಿತಾ ಆರೋಪಿಸಿದ್ದಾರೆ.ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪನ್ನು ಕೇಂದ್ರ ಗೆಜಟ್‌ನಲ್ಲಿ ಪ್ರಕಟಿಸಬೇಕು. ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ ಕರೆಯಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.