ಗುರುವಾರ , ನವೆಂಬರ್ 21, 2019
27 °C

ತಮಿಳುನಾಡು ಗೊತ್ತುವಳಿ: ಲಂಕಾ ಆಕ್ಷೇಪ

Published:
Updated:

ಕೊಲಂಬೊ (ಪಿಟಿಐ): ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿರುವ ಗೊತ್ತುವಳಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀಲಂಕಾ ಸರ್ಕಾರವು, ತಮಿಳರ ಪುನರ್ವವಸತಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿಗೆ ಬಂದು ವೀಕ್ಷಿಸಬೇಕು ಎಂದು ತಿಳಿಸಿದೆ.ಮಾನವ ಹಕ್ಕುಗಳ ಉಲ್ಲಂಘನೆಯ ಅತಿರಂಜಿತ ವರದಿಯನ್ನು ನಂಬದೆ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಶ್ರೀಲಂಕಾಕ್ಕೆ ಬಂದು ಅಭಿವೃದ್ಧಿ ಕಾರ್ಯಗಳನ್ನು ನೋಡಬೇಕು ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯವು ತಿಳಿಸಿದೆ.ಶ್ರೀಲಂಕಾವನ್ನು ಮಿತ್ರ ರಾಷ್ಟ್ರವೆಂದು ಪರಿಗಣಿಸಬಾರದು ಮತ್ತು ಆ ರಾಷ್ಟ್ರದ ವಿರುದ್ಧ ದಿಗ್ಬಂಧನ ಹೇರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯನ್ನು ಮಾರ್ಚ್ 27ರಂದು ತಮಿಳುನಾಡು ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿದೆ.ವಿದೇಶಗಳಲ್ಲಿ ಕೆಲವು ಶ್ರೀಲಂಕಾ ತಮಿಳರು ಮಾಡುತ್ತಿರುವ ಅಪಪ್ರಚಾರದಿಂದಾಗಿ ತಮಿಳುನಾಡಿನಲ್ಲಿ ಶ್ರೀಲಂಕಾ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಇದು ಸಲ್ಲದ ಕ್ರಮ ಎಂದು ಶ್ರೀಲಂಕಾ ವಿದೇಶಾಂಗ ಕಚೇರಿಯ ಮೂಲಗಳು ತಿಳಿಸಿವೆ.ಭಾರತೀಯ ಮೀನುಗಾರರ ಮೇಲೆ ಲಂಕಾ ನೌಕಾಪಡೆ ಹಲ್ಲೆ ಮಾಡುತ್ತಿರುವ ಆಪಾದನೆಯನ್ನೂ ತಳ್ಳಿಹಾಕಿರುವ ಶ್ರೀಲಂಕಾ, ಇದು ಸಾಕ್ಷಾಧಾರಗಳು ಇಲ್ಲದ ಆಪಾದನೆ ಎಂದು ತಿಳಿಸಿದೆ.ಭಾರತೀಯ ಮೀನುಗಾರರು ಪದೇಪದೇ ತಮ್ಮ ಜಲಗಡಿಯನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ ಎಂದು ಶ್ರೀಲಂಕಾ ಪ್ರತಿಯಾಗಿ ಆಪಾದನೆ ಮಾಡಿದೆ.

ಪ್ರತಿಕ್ರಿಯಿಸಿ (+)