ಮಂಗಳವಾರ, ಆಗಸ್ಟ್ 20, 2019
22 °C
ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ

ತಮಿಳುನಾಡು ಮನವಿಗೆ `ಸುಪ್ರೀಂ' ನಕಾರ

Published:
Updated:

ನವದೆಹಲಿ: ಈ ಬಾರಿ ನೈರುತ್ಯ ಮುಂಗಾರು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ಹಾಗೂ ನಿಯಂತ್ರಣಾ ಸಮಿತಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿಹಾಕಿದೆ.ನ್ಯಾಯಮೂರ್ತಿಗಳಾದ ಆರ್.ಎಂ. ಲೋಧಾ ಹಾಗೂ ಮದನ್ ಬಿ. ಲೋಕೂರ್ ಅವರನ್ನೊಳಗೊಂಡ ನ್ಯಾಯಪೀಠ, ಇಂಥ ಆದೇಶ ಜಾರಿ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು.ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಮನವಿ ಸಲ್ಲಿಸಿ, ನಿರ್ವಹಣಾ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಒಂದು ವೇಳೆ ಈ ಕುರಿತು ಯಾವುದೇ ಆದೇಶ ಜಾರಿ ಮಾಡದಿದ್ದರೂ ಅರ್ಜಿಯನ್ನು ಇತ್ಯರ್ಥಪಡಿಸಲು ಕಾಯ್ದಿರಿಸಬೇಕು ಎಂದು ಕೋರಿದರು. ಆದರೆ, ಈ ಕೋರಿಕೆಯನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.`ಒಂದು ವೇಳೆ ಅಂಥ ಯಾವುದೇ ಅಸಹಜ ಸ್ಥಿತಿ ಎದುರಾದರೆ ಆಗ ಅದನ್ನು ಪರಿಗಣಿಸುತ್ತೇವೆ. ಅರ್ಜಿಯನ್ನು ಕಾಯ್ದಿಡುವ ಅಗತ್ಯವಿಲ್ಲ' ಎಂದು ಹೇಳಿದ ನ್ಯಾಯಮೂರ್ತಿಗಳು, ಅರ್ಜಿಯನ್ನು ಹಿಂತೆಗೆ ದುಕೊಳ್ಳಲು ಸೂಚಿಸಿದರು.ಕಾವೇರಿ ನೀರು ವಿವಾದ ನ್ಯಾಯಮಂಡಳಿಯು 2007ರ ಫೆ. 5ರಂದು ನೀಡಿದ್ದ ಅಂತಿಮ ಆದೇಶದ ಅನುಸಾರ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾರ್ಚ್ ತಿಂಗಳಿನಲ್ಲೇ ತಮಿಳುನಾಡು ಅರ್ಜಿ ಸಲ್ಲಿಸಿತ್ತು.

Post Comments (+)