ತಮಿಳುನಾಡು ವಾದಕ್ಕೆ ಹಿನ್ನಡೆ

7
ಸಾಂಬಾ ಬೆಳೆಗೆ ನೀರು: ಪರಿಣತರ ತಂಡದ ವರದಿ

ತಮಿಳುನಾಡು ವಾದಕ್ಕೆ ಹಿನ್ನಡೆ

Published:
Updated:
ತಮಿಳುನಾಡು ವಾದಕ್ಕೆ ಹಿನ್ನಡೆ

ನವದೆಹಲಿ: ತಮಿಳುನಾಡಿನ ಸಾಂಬಾ ಬೆಳೆಗೆ 2.44 ಟಿಎಂಸಿ ಅಡಿ ನೀರು ಮಾತ್ರ ಅಗತ್ಯವಿದೆ ಎಂದು ಕೇಂದ್ರ ಪರಿಣತರ ತಂಡ ಬುಧವಾರ ಸುಪ್ರೀಂ ಕೋರ್ಟ್‌ಗೆ ಮಹತ್ವದ ವರದಿ ಸಲ್ಲಿಸಿದೆ.ಕಾವೇರಿ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿನ ತಂಜಾವೂರು, ತಿರುವರೂರು ಮತ್ತು ನಾಗಪಟ್ಟಣಂ ಜಿಲ್ಲೆಗಳಿಗೆ ಭೇಟಿ ನೀಡಿದ್ದ  ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಕೆ.ಎಸ್.ಜೇಕಬ್ ನೇತೃತ್ವದ ತ್ರಿಸದಸ್ಯ ಪರಿಣತರ ತಂಡ ಈ ವರದಿ ಸಲ್ಲಿಸಿದೆ. ಇದರಿಂದ ಸಾಂಬಾ ಬೆಳೆಗೆ 9 ಟಿಎಂಸಿ ಅಡಿ ನೀರಿನ ಅಗತ್ಯವಿದೆ ಎಂದು ಹೇಳಿರುವ ತಮಿಳುನಾಡಿನ ವಾದಕ್ಕೆ ಹಿನ್ನಡೆಯಾದಂತಾಗಿದೆ. ಕರ್ನಾಟಕದಿಂದ ತಕ್ಷಣ ನೀರು ಬಿಡುಗಡೆ ಮಾಡದಿದ್ದರೆ ಬೆಳೆ ನಾಶವಾಗಿ ರೈತರು ಆತ್ಮಹತ್ಯೆ ಹಾದಿ ಹಿಡಿಯಲಿದ್ದಾರೆ ಎಂದು ತಮಿಳುನಾಡು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು.ರಾಜ್ಯದ ತಕರಾರು: ಇದಕ್ಕೆ ತಕರಾರು ಎತ್ತಿದ ಕರ್ನಾಟಕ, ತಮಿಳುನಾಡಿನ 10 ಲಕ್ಷ ಎಕರೆಯಲ್ಲಿ ಸಾಂಬಾ ಬೆಳೆ ಬೆಳೆಯಲಾಗಿದೆ. ಇದರಲ್ಲಿ ಶೇ 40ರಷ್ಟು ಬೆಳೆ ಈಗಾಗಲೇ ಕಟಾವು ಆಗಿದೆ. ಶೇ 50ರಷ್ಟು ಬೆಳೆ ಕಟಾವಿಗೆ ಸಿದ್ಧವಾಗಿದೆ. ಉಳಿದ ಬೆಳೆಗೂ ನೀರಿನ ಅಗತ್ಯವಿಲ್ಲ ಎಂದು ಪ್ರತಿಪಾದಿಸಿತ್ತು.ಕರ್ನಾಟಕದ ವಾದವನ್ನು ತಮಿಳುನಾಡು ನಿರಾಕರಿಸಿತ್ತು. 6 ಲಕ್ಷ ಎಕರೆ ಪ್ರದೇಶದಲ್ಲಿ ಸಾಂಬಾ ಬೆಳೆ ಒಣಗುತ್ತಿದೆ. ಇದರಲ್ಲಿ 3 ಲಕ್ಷ ಎಕರೆಗೆ ಎರಡು ಬಾರಿ ನೀರು ಹಾಯಿಸಬೇಕಿದೆ. ಉಳಿದ 3 ಲಕ್ಷ ಎಕರೆಗೆ ಒಂದು ಸಲ ನೀರು ಕೊಡಬೇಕಿದೆ. ಈ ಉದ್ದೇಶಕ್ಕೆ 9 ಟಿಎಂಸಿ ಅಡಿ ನೀರು ಬೇಕಾಗಿದೆ ಎಂದು ತಮಿಳುನಾಡು ಹೇಳಿತ್ತು.ತಮಿಳುನಾಡು ವಾದವನ್ನು ಕರ್ನಾಟಕ ತೀವ್ರವಾಗಿ ಆಕ್ಷೇಪಿಸಿತ್ತು. ನೆರೆಯ ರಾಜ್ಯದಲ್ಲಿ ಎಷ್ಟು ಲಕ್ಷ ಎಕರೆ ಪ್ರದೇಶದಲ್ಲಿ ಸಾಂಬಾ ಬೆಳೆ ಇದೆ. ಅದಕ್ಕೆ ಎಷ್ಟು ನೀರು ಅಗತ್ಯವಿದೆ ಎಂಬ ಬಗ್ಗೆ ಖುದ್ದು ಪರಿಶೀಲಿಸಿ ವರದಿ ಸಲ್ಲಿಸಲು ಪರಿಣತ ತಂಡವನ್ನು ಕಳುಹಿಸುವಂತೆ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.ಕರ್ನಾಟಕ ಮತ್ತು ತಮಿಳುನಾಡು ಪರಸ್ಪರ ತದ್ವಿರುದ್ಧ ನಿಲುವಿಗೆ ಅಂಟಿಕೊಂಡಿದ್ದರಿಂದ ಸುಪ್ರೀಂ ಕೋರ್ಟ್ ಪರಿಣತರ ತಂಡವನ್ನು ತಮಿಳುನಾಡಿಗೆ ಕಳುಹಿಸಲು ಕೇಂದ್ರ ಜಲ ಆಯೋಗದ ಅಧ್ಯಕ್ಷರಿಗೆ ಆದೇಶ ನೀಡಿತ್ತು.ಆದರೆ, ತಕ್ಷಣದ ಪರಿಹಾರ ಕ್ರಮವಾಗಿ ತಮಿಳುನಾಡು ಮೆಟ್ಟೂರು ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಎರಡು ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕು. ಕೇಂದ್ರ ಪರಿಣತರ ತಂಡದ ವರದಿ ಏನೇ ಆಗಿದ್ದರೂ ಎರಡು ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ಬಿಡಿಸುವ ಭರವಸೆಯನ್ನು ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀಡಿತು.ಇದಕ್ಕೂ ಮೊದಲು ಕರ್ನಾಟಕ, ತಮಿಳುನಾಡಿನಲ್ಲಿ ಎಷ್ಟು ಲಕ್ಷ ಎಕರೆ ಪ್ರದೇಶದಲ್ಲಿ ಸಾಂಬಾ ಬೆಳೆ ಇದೆ. ಎಷ್ಟು ನೀರಿನ ಅಗತ್ಯವಿದೆ ಎಂಬ ಬಗ್ಗೆ ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಸ್ವಾಮಿ, ಬೆಂಗಳೂರು ಕೃಷಿ ವಿವಿಯ ಪ್ರಾಧ್ಯಾಪಕರಾದ ಪ್ರೊ.ಡಿ.ನಾಗರಾಜ್ ಮತ್ತು ಪ್ರೊ.ಎಂ.ಎನ್.ತಿಮ್ಮೇಗೌಡ ಅವರಿದ್ದ ತಂಡ ರಾಜ್ಯದ ಈ ವರದಿ ಸಿದ್ಧಪಡಿಸಿದೆ.ಈಗ ತಮಿಳುನಾಡಿಗೆ ಹೋಗಿ ಬಂದಿರುವ ಕೇಂದ್ರ ಪರಿಣತರ ತಂಡ ರಾಜ್ಯದ ವರದಿಯನ್ನು ಬಹುತೇಕ ಅನುಮೋದಿಸಿದೆ. ಇದರಿಂದ ಕರ್ನಾಟಕದ ವಾದಕ್ಕೆ ಮನ್ನಣೆ ದೊರೆತಂತಾಗಿದೆ.ಕಾವೇರಿ ನದಿ ನೀರಿನ ವಿವಾದ ಗುರುವಾರ (ತಾ.7) ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ. ಈ ಸಂದರ್ಭದಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಕಾವೇರಿ ಕೊಳ್ಳದಲ್ಲಿ ಸಂಗ್ರಹವಾಗಿರುವ 13.8 ಟಿಎಂಸಿ ಅಡಿ ನೀರು ಬೆಂಗಳೂರು ಮತ್ತಿತರ ನಗರಗಳ ಕುಡಿಯುವ ಉದ್ದೇಶಕ್ಕೇ ಸಾಕಾಗುವುದಿಲ್ಲ ಎಂದು ಕರ್ನಾಟಕ ಪ್ರತಿಪಾದಿಸುವ ಸಾಧ್ಯತೆ ಇದೆ.ಕಾವೇರಿ ನದಿಯ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ಒಟ್ಟು 23.85ಟಿಎಂಸಿ ಅಡಿ ನೀರಿದೆ. ಇದರಲ್ಲಿ 10 ಟಿಎಂಸಿ ಅಡಿ  (ಡೆಡ್ ಸ್ಟೋರೇಜ್) ಬಳಸಲು ಬರುವುದಿಲ್ಲ. ಬೆಂಗಳೂರು, ಮೈಸೂರು ಮತ್ತಿತರ ನಗರಗಳಿಗೆ ಪ್ರತಿ ತಿಂಗಳು 2.5 ಟಿಎಂಸಿ ಅಡಿಯಂತೆ ಮುಂಗಾರು ಆರಂಭ ವಾಗುವವರೆಗೂ ನೀರು ಒದಗಿಸಬೇಕಾದ ಮಹತ್ವದ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ' ಗೆ ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry